ಕರ್ನಾಟಕ

ಡೇಟಿಂಗ್ ಹೆಸರಲ್ಲಿ ಮೋಸ ಹೋದ ಟೆಕ್ಕಿಗೆ 4 ಲಕ್ಷ ರೂ. ಬ್ಲೇಡ್‌!

Pinterest LinkedIn Tumblr


ಬೆಂಗಳೂರು: ಡೇಟಿಂಗ್‌ ನಡೆಸಲು ವಿದೇಶಿ ಯುವತಿಯರ ಜತೆ ಅವಕಾಶ ಕಲ್ಪಿಸಿಕೊಡುವುದಾಗಿ ಪುಸಲಾಯಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರನ್ನು ಗಾಳಕ್ಕೆ ಬೀಳಿಸಿದ್ದ ಮಾಯಾಂಗನೆಯರ ಬಣ್ಣ ಬಯಲಾಗಿದೆ. ಟೆಕ್ಕಿಯಿಂದ 4 ಲಕ್ಷ ರೂ. ಪಡೆದು ಯಾಮಾರಿಸಿರುವ ಬಗ್ಗೆ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.

ಕೋಡಿಚಿಕ್ಕನಹಳ್ಳಿಯ ನಿವಾಸಿ ಎಂಜಿನಿಯರ್‌ ಕೊಟ್ಟ ದೂರಿನ ಆಧಾರದ ಮೇಲೆ ಶ್ರೇಯಾ ಶರ್ಮ ಹಾಗೂ ನಿಶಾ ಗುಪ್ತ ಎನ್ನುವ ಇಬ್ಬರ ವಿರುದ್ಧ ದೂರು ದಾಖಲಾಗಿದೆ. ಡೇಟಿಂಗ್‌ ಫ್ರೆಂಡ್ಸ್‌ ಆ್ಯಂಡ್‌ ಚಾಟಿಂಗ್‌ ಹೆಸರಿನ ಟೆಲಿ ಮಾರ್ಕೆಟಿಂಗ್‌ ಕಂಪನಿ ನಡೆಸುತ್ತಿರುವ ಈ ಇಬ್ಬರ ವಿರುದ್ಧ ವಂಚನೆ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ.

ದೂರುದಾರ ಟೆಕ್ಕಿಗೆ ಡೇಟಿಂಗ್‌ ಸೆಂಟರ್‌ ಹೆಸರಿನಲ್ಲಿ ಯುವತಿಯಿಂದ ಕರೆ ಬಂದಿತ್ತು. ನಿಮ್ಮ ಹೆಸರು ನೋಂದಾಯಿಸಿಕೊಂಡರೆ ಇದೇ ಕಂಪನಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಇತರೆ ಯುವತಿಯರಿಂದ ನಿಮಗೆ ಡೇಟಿಂಗ್‌ ಸೇವೆ ಒದಗಿಸುತ್ತೇವೆ. ಇದು ಅತ್ಯಂತ ಗೌಪ್ಯವಾಗಿ, ಸುರಕ್ಷಿತವಾಗಿ ನಡೆಯುವ ಡೇಟಿಂಗ್‌ ವ್ಯವಸ್ಥೆ ಆಗಿದೆ ಎಂದು ಪುಸಲಾಯಿಸಿದ್ದರು. ನಿಮಗೆ ಒಪ್ಪಿಗೆ ಇದ್ದರೆ ಮೊದಲಿಗೆ ಕೇವಲ 2 ಸಾವಿರ ರೂ. ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದರು.

ಯುವತಿಯ ಕರೆಗೆ ಮನಸೋತ ಟೆಕ್ಕಿ, 2 ಸಾವಿರ ರೂ. ಕೊಟ್ಟು ನೋಂದಾಯಿಸಿಕೊಂಡಿದ್ದ. ಇದಾಗಿ ಕೆಲ ದಿನಗಳ ಬಳಿಕ ಶ್ರೇಯಾ ಶರ್ಮ ಎನ್ನುವ ಯುವತಿಯಿಂದ ಟೆಕ್ಕಿಗೆ ಕರೆ ಬಂದಿತ್ತು. ಹೋಟೆಲ್‌ನಲ್ಲಿ ರೂಂ ಬುಕ್‌ ಮಾಡಲಾಗಿದೆ. ಅಲ್ಲಿ ಪಾರ್ಟಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಯಲ್ಲೇ ಡೇಟಿಂಗ್‌ಗೆ ದಿನ ನಿಗದಿಯನ್ನೂ ಮಾಡಲಾಗಿದೆ ಎಂದು ಹೇಳಿದ್ದಳು.

ಹಿಂದೆ ಮುಂದೆ ನೋಡದೆ ಒಪ್ಪಿಕೊಂಡ ಟೆಕ್ಕಿ, ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ. ಅಷ್ಟರಲ್ಲಿ ತನ್ನ ಚಾಲಾಕಿತನ ಪ್ರದರ್ಶಿಸಿದ ಯುವತಿ, ಹೋಟೆಲ್‌ ಬಾಡಿಗೆ, ಗ್ರೀನ್‌ ಕಾರ್ಡ್‌ ಎಲ್ಲಾ ಸೇರಿ 2 ಲಕ್ಷ ರೂ. ಖರ್ಚಾಗುತ್ತದೆ ಎಂದು ತಿಳಿಸಿ ಅಷ್ಟೂ ಹಣವನ್ನು ವಸೂಲಿ ಮಾಡಿದಳು. ಬಳಿಕ ಆಕೆಯಿಂದ ಯಾವುದೇ ಕರೆ ಬರಲಿಲ್ಲ.

ಎರಡು ದಿನಗಳ ಬಳಿಕ ನಿಶಾಗುಪ್ತ ಹೆಸರಿನ ಮತ್ತೊಬ್ಬ ಯುವತಿ ಕರೆ ಮಾಡಿ, ನೀವು ಈ ಹಿಂದೆ ಬುಕ್‌ ಮಾಡಿದ್ದ ಡೇಟಿಂಗ್‌ ಮುಂದೂಡಲಾಗಿದೆ. ಆ ಯುವತಿಗೆ ಆರೋಗ್ಯದಲ್ಲಿ ಸಮಸ್ಯೆ ಆಗಿದ್ದರಿಂದ ಮತ್ತೆ ಆಕೆಯೇ ಕರೆ ಮಾಡಿ ಮುಂದಿನ ಡೇಟಿಂಗ್‌ಗೆ ದಿನ ನಿಗದಿ ಮಾಡುತ್ತಾರೆ ಎಂದು ತಿಳಿಸಿದಳು. ನೀವು ಮೊದಲೇ ಬುಕ್‌ ಮಾಡಿದ್ದ ದಿನಾಂಕಕ್ಕೇ ಸೇವೆ ಬೇಕಿದ್ದರೆ ನಾನು ರೆಡಿ ಇದ್ದೀನಿ. ಆದರೆ ಇದಕ್ಕೆ ಪ್ರತ್ಯೇಕವಾಗಿ 2 ಲಕ್ಷ ಪಾವತಿಸಬೇಕಾಗುತ್ತದೆ. ಈ ಹಿಂದೆ ಪಾವತಿಸಿರುವ 2 ಲಕ್ಷ ರೂ. ಸೇವೆ ಬೇರೆ ದಿನ ನೀವು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾಳೆ. ಟೆಕ್ಕಿ ಈ ಬಾರಿ ಕೂಡ ಈಕೆಯ ಮಾತನ್ನು ನಂಬಿ 2 ಲಕ್ಷ ರೂ. ಕಳುಹಿಸಿದ್ದ. ಹಣ ತನ್ನ ಕೈ ಸೇರಿದ ಬಳಿಕ ನಿಶಾ ಕೂಡ ಮೊಬೈಲ್‌ ಆಫ್‌ ಮಾಡಿಕೊಂಡು ನಾಪತ್ತೆಯಾದಳು.

ಇದಾಗಿ ಮತ್ತೆರಡು ದಿನಗಳ ಬಳಿಕ ಕಾಲ್‌ ಸೆಂಟರ್‌ನಿಂದ ಮತ್ತೊಂದು ಕರೆ ಬಂತು. ಈ ಬಾರಿ ಕೇವಲ ಒಂದು ಲಕ್ಷಕ್ಕೆ ಎಲ್ಲಾ ಸೇವೆ ಒದಗಿಸುವುದಾಗಿ ತಿಳಿಸಿದರು. ಮೂರನೇ ಬಾರಿ ಎಚ್ಚೆತ್ತುಕೊಂಡ ಟೆಕ್ಕಿ, ಇದು ಕೇವಲ ವಂಚನೆಯ ಜಾಲ ಎಂದು ಗೊತ್ತಾಗಿ ಬೊಮ್ಮನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವತಿಯರ ಪತ್ತೆಗೆ ಮುಂದಾಗಿದ್ದಾರೆ.

Comments are closed.