ಅಂತರಾಷ್ಟ್ರೀಯ

ಕೊರೊನಾ ವೈರಸ್ ರೋಗ ಲಕ್ಷಣವೇನು?

Pinterest LinkedIn Tumblr


ಬೆಂಗಳೂರು: ವಿಶ್ವಾದ್ಯಂತ ಕೊರೊನಾ ವೈರಸ್ ಹರಡುತ್ತಿದ್ದು, ಈ ಮಾರಕ ಸೋಂಕಿಗೆ ಈವರೆಗೆ 25 ಮಂದಿ ಬಲಿಯಾಗಿದ್ದಾರೆ. ಚೀನಾದಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ವೈರಸ್ ಈಗ ವಿಶ್ವಾದ್ಯಂತ ಹರಡುತ್ತಿದೆ. ಕರ್ನಾಟಕಕ್ಕೂ ಕೊರೊನಾ ವೈರಸ್ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಈಗಾಗಲೇ ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಿಗಳ ಆಸ್ಪತ್ರೆಯಲ್ಲಿ ವೈರಸ್ ಹರಡಿರುವ ಶಂಕೆಯ ಮೇಲೆ ರೋಗಿಯೊಬ್ಬರು ದಾಖಲಾಗಿದ್ದಾರೆ.

ಇದು ರಾಜ್ಯದಲ್ಲಿಯೇ ಮೊದಲ ಪ್ರಕರಣವಾಗಿದ್ದು, ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾದ ರೋಗಿಯ ರಕ್ತದ ಸ್ಯಾಂಪಲ್ ಅನ್ನು ಪುಣೆ ನ್ಯಾಷನಲ್ ವೈರಾಲಜಿ ಇನ್‍ಸ್ಟಿಟ್ಯೂಟ್‍ಗೆ ಕಳುಹಿಸಲಾಗಿದೆ. ಇಂದು ಸಂಜೆಯೊಳಗೆ ರೋಗಿಯ ವೈದ್ಯಕೀಯ ವರದಿ ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರ ಕೈಗೆ ಸಿಗಲಿದೆ. ಬಳಿಕ ಕೊರೊನಾ ವೈರಸ್‍ನ ಸೋಂಕು ತಗುಲಿದೆಯಾ? ಇಲ್ಲವಾ ಎಂಬುದರ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಲಿದ್ದಾರೆ. ಅಲ್ಲದೆ ಚೀನಾಗೆ ಹೋಗಿ ಬಂದ ಮೂವರು ಬೆಂಗಳೂರಿಗರು ಹಾಗೂ ಚೀನಾದಿಂದ ಬೆಂಗಳೂರಿಗೆ ಬಿಸಿನೆಸ್ ಉದ್ದೇಶದಿಂದ ಬಂದ ನಾಲ್ಕು ಜನರನ್ನು ಮೆಡಿಕಲ್ ಅಬ್ಸರ್ವೆಷನ್‍ನಲ್ಲಿ ಇಡಲಾಗಿದೆ. ಏಳು ಮಂದಿಯಲ್ಲಿ ಒಬ್ಬರಲ್ಲಿ ಕೊರೊನಾ ವೈರಸ್‍ನ ಗುಣ ಲಕ್ಷಣಗಳು ಹೆಚ್ಚಾಗಿರೋದರಿಂದ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ವೈದ್ಯಕೀಯ ವರದಿ ಕೂಡ ನೆಗಟಿವ್ ಇದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಚೀನಾ ಪ್ರವಾಸಕ್ಕೆ ತೆರೆಳಿದ್ದ ಮುಂಬೈನ ಇಬ್ಬರು ನಿವಾಸಿಗಳಿಗೆ ಈ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಇಬ್ಬರು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೋನಾ ವೈರಸ್ ಚೀನಾದ ಲ್ಯಾಬ್‍ನಿಂದಲೇ ಸೋರಿಕೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಚೀನಾದ ವುಹಾನ್ ಪ್ರಾಂತ್ಯದಲ್ಲಿರುವ ಬಯೋಸೇಫ್ಟಿ ಲ್ಯಾಬ್‍ನಿಂದ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ 13 ನಗರಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇತ್ತ ಸೌದಿಯಲ್ಲಿರುವ ಕೇರಳ ಮೂಲದ ನರ್ಸ್ ಒಬ್ಬರಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿದೆ. ಹೀಗಾಗಿ ಕರ್ನಾಟಕದಲ್ಲಿ ವೈರಸ್ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಚೀನಾದಲ್ಲಿ ಮೊದಲು ಪತ್ತೆಯಾದ ನಿಗೂಢ ಕೊರೊನಾ ವೈರಸ್‍ಗೆ ಬಲಿಯಾಗುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ವೈರಸ್ ತಗುಲಿ ಈವರೆಗೆ ಸುಮಾರು 25 ಮಂದಿ ಸಾವನ್ನಪ್ಪಿದ್ದಾರೆ. 830ಕ್ಕೂ ಅಧಿಕ ಜನರಿಗೆ ಈ ವೈರಸ್ ತಗಲಿರುವ ಬಗ್ಗೆ ವರದಿಯಾಗಿದೆ. ಈ ಕೊರೊನಾ ವೈರಸ್ ಎಂದರೇನು? ಮಾರಕ ಸೋಂಕು ಹೇಗೆ ಬರುತ್ತೆ? ರೋಗ ಲಕ್ಷಣಗಳೇಣು? ಹೇಗೆ ನಿಯಂತ್ರಿಸಬಹುದು? ಚಿಕಿತ್ಸೆ ಲಭ್ಯವಿದೆಯಾ? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಕೊರೊನಾ ವೈರಸ್ ಎಂದರೇನು?
ಕೊರೊನಾ ವೈರಸ್ (ತೀವ್ರ ಉಸಿರಾಟದ ಸಿಂಡ್ರೋಮ್- ಎಸ್‍ಎಆರ್‍ಎಸ್) ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್‍ಗೆ 2019-ಎನ್‍ಸಿಓವಿ ಎಂದು ನಾಮಕರಣ ಮಾಡಿದೆ. ಈ ವೈರಸ್ ದೇಹಕ್ಕೆ ಸೇರಿದರೆ ನ್ಯೂಮೊನಿಯಾ ಮತ್ತಿತರ ಉಸಿರಾಟದ ತೊಂದರೆಗಳು ಉಂಟಾಗುತ್ತವೆ.

ಕೊರೊನಾ ವೈರಸ್ ಹೇಗೆ ಬರುತ್ತದೆ?
ಕೊರೊನಾ ವೈರಸ್ ಸಾಮಾನ್ಯವಾಗಿ ನಾಯಿ, ಬೆಕ್ಕುಗಳು, ಹಾವು, ಬಾವಲಿ ರೀತಿಯ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಸಮುದ್ರದ ಆಹಾರವನ್ನು ಮಾರಾಟ ಮಾಡಲಾಗುವ ಹ್ಯೂನಾನ್ ಸಮುದ್ರ ಆಹಾರ ಮಾರುಕಟ್ಟೆಯಿಂದ ಪ್ರಸ್ತುತ ಈ ಸೋಂಕು ಹರಡುತ್ತಿದೆ ಎಂದು ಚೀನಾದ ಜನರು ನಂಬಿದ್ದಾರೆ. ಹೀಗಾಗಿ ಹೊಸ ವರ್ಷದಿಂದಲೇ ಹ್ಯೂನಾನ್ ಮಾರುಕಟ್ಟೆಯನ್ನು ರದ್ದುಗೊಳಿಸಲಾಗಿದೆ.

ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವುದೇ?
ಹೌದು. ಈ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ ಎಂದು ತಜ್ಞ, ವೈದ್ಯರಿಂದ ದೃಢಪಟ್ಟಿದೆ. ಕೆಮ್ಮು, ಸೀನು ಹಾಗೂ ಶೇಕ್ ಹ್ಯಾಂಡ್ ಮಾಡುವುದರಿಂದಲೂ ಈ ಸೋಂಕು ಹರಡುತ್ತದೆ ಎಂದು ವರದಿಯಾಗಿದೆ.

ದುರಾದೃಷ್ಟಕರ ಸಂಗತಿ ಎಂದರೆ ಕೇವಲ ಚೀನಾದ ವಿವಿಧ ಪ್ರಾಂತ್ಯಗಳಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಈ ಸೋಂಕು ಹರಡುತ್ತಿದೆ. ಥೈಲ್ಯಾಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲೂ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇತ್ತೀಚಿಗೆ ವುಹಾನ್‍ನಿಂದ ಬಂದ ವ್ಯಕ್ತಿಯೊಬ್ಬರಲ್ಲಿ ಈ ಸೋಂಕು ತಗುಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್‍ನಲ್ಲಿ ತುರ್ತು ನಿಗಾ ಘಟಕದಲ್ಲಿ ದಾಖಲಾಗಿರುವುದಾಗಿ ಅಮೆರಿಕ ಖಚಿತಪಡಿಸಿದೆ.

ಈ ಸೋಂಕನ್ನು ನಿಯಂತ್ರಿಸಬಹುದೇ?
ಚೀನಾದ ಆಡಳಿತ ಸಂಸ್ಥೆಗಳ ಪ್ರಕಾರ ಜನವರಿ 21ರಂದು 217 ಪ್ರಕರಣಗಳು ವರದಿಯಾಗಿದೆ. ಆದರೆ ಈ ಹಿಂದೆ ಈ ಸೋಂಕು ತಗುಲಿದ ರೋಗಿಗಳ ಸಂಖ್ಯೆ ದುಪ್ಪಟ್ಟಿತ್ತು ಎನ್ನಲಾಗಿದೆ. ಒಟ್ಟಾರೆ 1,394 ಜನರು ವೈದ್ಯಕೀಯ ನಿಗಾದಲ್ಲಿದ್ದು, 765 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಅದರ ನಿಯಂತ್ರಣ ಹಾಗೂ ತಡೆಗಟ್ಟುವಲ್ಲಿ ಚೀನಾ ಗಂಭೀರ ಸ್ಥಿತಿಯಲ್ಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ಸೋಂಕಿನ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಅನೇಕ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರಯಾಣಿಕರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ.

ಕೊರೊನಾ ವೈರಸ್ ಲಕ್ಷಣಗಳೇನು?
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಈ ಸೋಂಕು ತಗುಲಿದವರಲ್ಲಿ ಜ್ವರ, ಕೆಮ್ಮು, ಗಂಟಲು ಕೆರತ, ಉಸಿರಾಟದ ತೊಂದರೆ ಮತ್ತಿತರ ಸಮಸ್ಯೆಗಳು ಉಂಟಾಗಲಿವೆ. ಕೊರೊನಾ ಸೋಂಕಿನಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ಶೇ. 35ರಷ್ಟು ಜನರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಚಿಕಿತ್ಸೆ ಲಭ್ಯವಿದೆಯೇ?
ಇಲ್ಲ. ಕೊರೊನಾ ತಡೆಗಾಗಿ ಈವರೆಗೂ ಎಲ್ಲಿಯೂ ಚಿಕಿತ್ಸೆ ದೊರೆತ್ತಿಲ್ಲ. ಆದರೆ ಎಂಇಆರ್‌ಎಸ್(ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್) ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಒಂದಷ್ಟು ಸಮಯ ಈ ಸೋಂಕು ಹರಡದಂತೆ ತಡೆಯುವ ನಿರೀಕ್ಷೆಯಿದೆ. ಈ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಉತ್ತಮ ಮುಂಜಾಗ್ರತಾ ಕ್ರಮವೆಂದರೆ ಮೂಗು ಮತ್ತು ಬಾಯನ್ನು ಮಾಸ್ಕ್ ನಿಂದ ಮುಚ್ಚಿಕೊಳ್ಳಬೇಕಾಗುತ್ತದೆ. ಜನ ಹೆಚ್ಚಾಗಿ ಸೇರುವ ಪ್ರದೇಶಗಳಿಗೆ ಹೋಗುವುದನ್ನು ತಡೆಯಬೇಕಾಗಿದೆ.

Comments are closed.