ಕರ್ನಾಟಕ

ಪಾಕಿಸ್ತಾನ ಪರ ಇರುವವರನ್ನು ಗುಂಡಿಕ್ಕಿ ಕೊಲ್ಲಬೇಕು: ಅಶೋಕ್‌

Pinterest LinkedIn Tumblr


ಬೆಂಗಳೂರು: ದೇಶಕ್ಕೆ ದ್ರೋಹ ಬಗೆಯುವ ಮತ್ತು ಪಾಕಿಸ್ಥಾನ ಪರವಾಗಿರುವವರನ್ನು ಗುಂಡು ಹೊಡೆದು ಕೊಲ್ಲಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುಭಾಸ್‌ ಚಂದ್ರ ಬೋಸ್‌ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ. ಕಳ್ಳ ಕಳ್ಳನೇ. ಅವನು ಯಾವ ಧರ್ಮದವನೇ ಆಗಿರಲಿ. ಪಾಕಿಸ್ಥಾನದ ಪ್ರೇರಣೆಯಿಂದ ಅಲ್ಲಿ ತರಬೇತಿ ಪಡೆದು ಹಿಂದೂವೇ ಉಗ್ರವಾದ ಮಾಡಿದರೆ, ಅವನನ್ನು ಅದೇ ರೀತಿ ನೋಡುತ್ತೇವೆ ಎಂದು ಹೇಳಿದರು.

ನಮ್ಮ ದೇಶದ ಸೈನಿಕರನ್ನು ಕೊಲ್ಲುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಪಾಕಿಸ್ಥಾನದ ಧ್ವಜ ಕಂಡರೆ ನಮಗೆ ಸಿಟ್ಟು ಬರುತ್ತದೆ. ಪಾಕಿಸ್ಥಾನದ ಪರವಾಗಿರುವ ಹಿಂದೂ ಆಗಲಿ, ಕ್ರೆಸ್ತನಾಗಲಿ, ಮುಸ್ಲಿಂ ಆಗಲಿ, ಯಾರೇ ಆಗಲಿ ಪಾಕಿಸ್ಥಾನ ನಮ್ಮ ವೈರಿ ರಾಷ್ಟ್ರ. ಸದಾ ನಮ್ಮ ದೇಶವನ್ನು ನಾಶ ನಾಡಲು ಹೊರಟಿರುವ ದೇಶ. ಆ ದೇಶವನ್ನು ಮಟ್ಟ ಹಾಕುವಂಥ ಕೆಲಸ ಮಾಡುವುದು ನಮ್ಮ ಕರ್ತವ್ಯ. ಅದನ್ನು ನಾವು ಮಾಡುತ್ತೇವೆ ಎಂದರು.

ಎಚ್‌ಡಿಕೆ ವಿರುದ್ಧ ಕಿಡಿ
ಮಂಗಳೂರು ಬಾಂಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಾವು ಜಾಗರೂಕತೆಯಿಂದ ತನಿಖೆ ಮಾಡುತ್ತಿದ್ದೇವೆ. ಏನೇ ತನಿಖೆ ಮಾಡಿದರೂ ಅದನ್ನು ನಾಟಕ, ಅಣಕು ಪ್ರದರ್ಶನ ಎನ್ನಲಾಗುತ್ತಿದೆ. ಸಿನೆಮಾಗಳಲ್ಲಿ ತೋರಿಸುವಂತೆ ಪೊಲೀಸರನ್ನು ವ್ಯಂಗ್ಯವಾಗಿ ಬಿಂಬಿಸಲಾಗುತ್ತಿದೆ. ಸಿನೆಮಾ ನಿರ್ಮಾಪಕರಾದ ಕುಮಾರಸ್ವಾಮಿ ಅವರು ಕೂಡ ಪೊಲೀಸರ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಪೊಲೀಸರು ಬೇಕಾಗಿದ್ದರು. ಆದರೆ ಅಧಿಕಾರದಿಂದ ಇಳಿದ ತತ್‌ಕ್ಷಣ ಅವರಿಗೆ ಪೊಲೀಸರು ವಿಲನ್‌ ಆಗಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಹ್ಯಾರಿಸ್‌ ಮೇಲಾದ ದಾಳಿ ಕೂಡ ಬಹಳ ನೋವಿನ ಸಂಗತಿ. ಅವರು ಬೇಗ ಗುಣಮುಖರಾಗಲಿ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಲೇ ಏನಾದರು ಹೇಳಿದರೆ ಅದು ಪಟಾಕಿ ಅಂತ ಕುಮಾರಸ್ವಾಮಿ ಹೇಳುತ್ತಾರೆ. ಹ್ಯಾರಿಸ್‌ ಮೇಲಿನ ದಾಳಿ ಹಿಂದೆ ಕುತಂತ್ರ ಇದೆ. ಪೂರ್ವ ನಿಯೋಜಿತ ಎಂಬಂತೆ ಕಾಣುತ್ತಿದೆ ಎಂದು ವಿವರಿಸಿದರು.

ಬೊಮ್ಮಾಯಿ ಹೇಳಿಕೆಗೆ ಸಮರ್ಥನೆ
ಆದಿತ್ಯ ರಾವ್‌ ಮಾನಸಿಕ ಅಸ್ವಸ್ಥ ಎಂಬ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ. ಆತನ ಮಾನಸಿಕ ಸ್ಥಿತಿ ಬಗ್ಗೆ ವೈದ್ಯರು ದೃಢೀಕರಿಸಬೇಕು. ಆರೋಪಿಯ ಹೇಳಿಕೆ ನೋಡಿದರೆ ಹಾಗೆ ಅನಿಸುತ್ತದೆ. ಡಬಲ್‌ ಡಿಗ್ರಿ ಆದರೂ ಕೆಲಸ ಇಲ್ಲ. ಮನೆಯವರೂ ಅವನನ್ನು ದೂರ ಮಾಡಿದ್ದಾರೆ. ಅವನಿಗೆ ಮಾನಸಿಕವಾಗಿ ಏನೋ ಸಮಸ್ಯೆ ಇರಬಹುದು. ಈ ಬಗ್ಗೆ ತನಿಖೆ ಅನಂತರ ಗೊತ್ತಾಗುತ್ತದೆ. ಅವನನ್ನು ಯಾವುದೇ ರೀತಿ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿ ಇದೆ. ಅದಕ್ಕಾಗಿ ಹೀಗೆ ಹೇಳುತ್ತಿರಬಹುದು ಎಂದು ಹೇಳಿದರು.

Comments are closed.