ಕರ್ನಾಟಕ

ಯಡಿಯೂರಪ್ಪ ಬಿಜೆಪಿ ಬಿಟ್ಟು ಬರುತ್ತಾರೆ ಮಂತ್ರಿ ಮಾಡಿ ಸಾಕು ಎಂದಿದ್ದ ಶೋಭಾ ಕರಂದ್ಲಾಜೆ- ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಯಡಿಯೂರಪ್ಪ ಅವರನ್ನು ಮಂತ್ರಿ ಮಾಡಿಸಿ ಸಾಕು ಬಿಜೆಪಿ ಬಿಟ್ಟು ಬರ್ತಾರೆ ಎಂದು ಸಂಧಾನಕ್ಕೆ ಬಂದಿದ್ದ ಶೋಭಾ ಕರಂದ್ಲಾಜೆ ಈಗ ನನ್ನ ಬಗ್ಗೆ ಮಾತನಾಡುತ್ತಾರೆ. ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್‌ ಸಮಾವೇಶದಲ್ಲಿ “ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ’ ಎಂಬ ಶೋಭಾ ಕರಂದ್ಲಾಜೆ ಅವರ ಟ್ವೀಟ್‌ ಪ್ರಸ್ತಾಪಿಸಿದ ಅವರು, ಮಹಾನ್‌ ನಾಯಕಿ ಶೋಭಾ ಕರಂದ್ಲಾಜೆ ಅವರು ಒಂದು ಟ್ವೀಟ್‌ ಮಾಡಿದ್ದಾರೆ. ಆ ಮಾಹಾತಾಯಿಗೆ ನೆನಪಿಸೋಕೆ ಇಷ್ಟಪಡುತ್ತೇನೆ.

ವಿಧಾನಸಭೆಯಲ್ಲಿ ಕೊನೆಯ ಸಾಲಿನಲ್ಲಿ ಕೂತಿದ್ದವನಿಗೆ ಚೀಟಿ ಕಳುಹಿಸಿದ್ದು ಯಾರು? ಒಂದು ಮಂತ್ರಿ ಸ್ಥಾನ ಕೊಡಿ, ಬಿಜೆಪಿಗೆ ರಾಜೀನಾಮೆ ಕೊಟ್ಟು ಬರ್ತೀನಿ ಅಂತ ಕಾಲು ಕಟ್ಟಿದ್ದು ಯಾರು? ಎಂದು ಪ್ರಶ್ನಿಸಿದರು.

ರೇವಣ್ಣನ ಸರ್ಕಾರಿ ಮನೆಯಲ್ಲಿ ನೀವೂ ರಾಮಚಂದ್ರೇಗೌಡರು ಬಂದಿರಲಿಲ್ವ ತಾಯಿ, ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಇಲ್ಲದಿದ್ದರೆ ನಾನೂ ಸಾಕಷ್ಟು ಸಂಗತಿ ಬಯಲು ಮಾಡಬೇಕಾಗುತ್ತದೆ ಎಂದು ಹೇಳಿದರು.

ಕುಮಾರಸ್ವಾಮಿಗೂ ಮಂಗಳೂರಿಗೆ ಏನ್‌ ಸಂಬಂಧ ಅಂತ ಕೇಳ್ತಾರೆ. ಹಾಗಾದರೆ ಕನಕಪುರಕ್ಕೂ ಕಲ್ಲಡ್ಕ ಪ್ರಭಾಕರ ಭಟ್ಟರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ ಬಗ್ಗೆ ಭಯ ಇಲ್ಲ, ನನ್ನ ಬಗ್ಗೆ ಭಯ ಇದೆ. ಹೀಗಾಗಿಯೇ ಪ್ರತಿಯೊಂದಕ್ಕೂ ನನ್ನ ವಿರುದ್ಧ ಮಾತನಾಡುತ್ತಾರೆ ಎಂದು ಹೇಳಿದರು.

ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ ಕುಮಾರಸ್ವಾಮಿ, ಲಿಂಗಾಯಿತರ ಸಮಾಜವನ್ನು, ನನ್ನನ್ನು ಕೈ ಬಿಡ್ತೀರಾ ಎಂದು ಕೇಳ್ತೀರಾ ಯಡಿಯೂರಪ್ಪನವರೇ. ನಿಮ್ಮ ಯೋಗ್ಯತೆಗೆ ರೈತರ ಸಾಲ ವಾಪಸ್‌ ತಗೊಳ್ಳಿ ಅಂತ ಆದೇಶ ಹೊರಡಿಸ್ತೀರಾ. ಇವತ್ತು ಹಳ್ಳಿ ಹಳ್ಳಿಗೆ ಹೋಗಿ ಕೇಳಿ, ನಿಮ್ಮ ಬಗ್ಗೆ ಏನ್‌ ಹೇಳ್ತಾರೆ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯಿತರು ಗಮನಿಸಬೇಕು. ಯಡಿಯೂರಪ್ಪ ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಬಿಜೆಪಿ ನಾಯಕರು. ಇದೊಂದು ಮುಖ್ಯಮಂತ್ರಿ ಪದವೀನಾ ಒಬ್ಬ ಮುಖ್ಯಮಂತ್ರಿಯನ್ನು ಈ ರೀತಿಯ ನಡೆಸಿಕೊಳ್ಳೋದು. ರಾಜಭವನಕ್ಕೆ ಹೋದರೆ ಮುಖ್ಯಮಂತ್ರಿಗೆ ಎಂಟ್ರಿ ಇಲ್ಲ.

ಅವರನ್ನು ಐಡಿ ಕಾರ್ಡ್‌ ಕೇಳ್ತಾರೆ. ಹುಬ್ಬಳ್ಳಿಗೆ ಹೋದಾಗ ಯಡಿಯೂರಪ್ಪನವರಿಗೆ ಬೈ ಹೇಳಿ ದಾವೋಸ್‌ಗೆ ಹೋಗು ಅಂತ ಕೇಳುಹಿಸಿದರು. ಈ ರೀತಿ ಪರಿಸ್ಥಿತಿ ಯಾಕ್‌ ಬೇಕು ಮಾಧ್ಯಮಗಳು ರಾಜಾಹುಲಿ ರಾಜಾಹುಲಿ ಅಂತಾರೆ. ಆದರೆ, ಅವರ ಪರಿಸ್ಥಿತಿ ಹೇಗಿದೆ ಎಂದಾಗ ಕಾರ್ಯಕರ್ತರು ರಾಜಾಇಲಿ ಎಂದು ಘೋಷಣೆ ಹಾಕಿ ಲೇವಡಿ ಮಾಡಿದರು.

Comments are closed.