ಕರ್ನಾಟಕ

ಬಿಪಿಎಲ್‌ ಕಾರ್ಡ್ ನಲ್ಲಿ 20 ಲಕ್ಷ “ಬೋಗಸ್‌’ ಹೆಸರುಗಳು ಪತ್ತೆ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್‌ ಹಾಗೂ ಅಂತ್ಯೋದಯದಡಿ ಅನ್ನಭಾಗ್ಯ ಪಡೆಯುತ್ತಿರುವ ಕಾರ್ಡ್‌ಗಳಲ್ಲಿರುವ ಹೆಸರುಗಳ ಪೈಕಿ “ಬೋಗಸ್‌’ ಹೆಸರುಗಳು ಸುಮಾರು ಇಪ್ಪತ್ತು ಲಕ್ಷ!

ಬಿಪಿಎಲ್‌, ಎಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಕಾರ್ಡ್‌ದಾರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ (ಆಧಾರ್‌ ಜೋಡಣೆ) ಮಾಡುವುದನ್ನು ಕಡ್ಡಾಯಗೊಳಿಸಿರುವುದರಿಂದ ಈ ಮಾಹಿತಿ ಬಹಿರಂಗವಾಗಿದೆ. ಹೀಗಾಗಿ ಮೃತಪಟ್ಟವರು, ಮದುವೆ ಅನಂತರ ತವರು ಮನೆ ಬಿಟ್ಟವರು, ಮನೆ ಬದಲಾಯಿಸಿದವರ ಹೆಸರುಗಳು ಇನ್ನೂ ಕಾರ್ಡ್‌ಗಳಲ್ಲಿರುವುದು ಬಯಲಾಗಿದೆ.

ಇ-ಕೆವೈಸಿ ಪ್ರಕ್ರಿಯೆ ಪ್ರಾರಂಭಗೊಂಡು ಐದು ತಿಂಗಳು ಕಳೆದರೂ ಇದುವರೆಗೂ ಶೇ.50ರಷ್ಟು ಪೂರ್ಣಗೊಂಡಿಲ್ಲ. ಇದುವರೆಗಿನ ಪ್ರಕ್ರಿಯೆಯಲ್ಲೇ ಹತ್ತು ಲಕ್ಷದಷ್ಟು ಮೃತಪಟ್ಟಿರುವವರು, ಮದುವೆ ಅನಂತರ ತವರು ಮನೆ ಬಿಟ್ಟವರ ಹೆಸರುಗಳು ರದ್ದುಗೊಂಡಿವೆ.

ಈ ಹಿಂದೆ ಜ. 31ರೊಳಗೆ ಇ-ಕೆವೈಸಿ ಮಾಡಿಸಲು ಗಡುವು ನೀಡಲಾಗಿತ್ತಾದರೂ ಅದನ್ನು ಮಾ. 31ರವರೆಗೆ ವಿಸ್ತರಿಸಲಾಗಿದೆ. ಅನಂತರವೂ ಇ-ಕೆವೈಸಿ ಮಾಡಿಸದ ಕುಟುಂಬಗಳಿಗೆ ಪಡಿತರ ನಿಲ್ಲಿಸಲು ಇಲಾಖೆ ತೀರ್ಮಾನಿಸಿದೆ. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 20 ಲಕ್ಷ ಹೆಸರುಗಳು ಕಡಿಮೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಇಲ್ಲದವರ ಹೆಸರಿನಲ್ಲಿ ಪಡೆಯುತ್ತಿರುವ ಪಡಿತರಕ್ಕೆ ಕಡಿವಾಣ ಹಾಕಿದರೆ ಇಲಾಖೆಗೆ ಇದರಿಂದ ವಾರ್ಷಿಕ ಸುಮಾರು 400 ಕೋಟಿ ರೂ.ನಷ್ಟು ಉಳಿಕೆಯಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಎಪಿಎಲ್‌ ಆಗಿದ್ದರೂ ಬಿಪಿಎಲ್‌
ಎಪಿಎಲ್‌ ಕುಟುಂಬ ಆಗಿದ್ದರೂ ಪ್ರಭಾವಿಗಳ ಒತ್ತಡದಿಂದ ಬಿಪಿಎಲ್‌ ಕಾರ್ಡ್‌ ಪಡೆದಿರುವ ಪ್ರಕರಣಗಳು ಸಾಕಷ್ಟು ಪತ್ತೆಯಾಗಿದ್ದು ಅವುಗಳ ಪತ್ತೆಗೂ ಇಲಾಖೆ ಮುಂದಾಗಿದೆ. ಇದೇ ಕಾರಣಕ್ಕೆ ಕಂದಾಯ ಹಾಗೂ ಸಾರಿಗೆ ಇಲಾಖೆ ನೆರವು ಪಡೆಯಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

ಕಾರ್ಡ್‌ಗಳಲ್ಲಿ ಹೆಸರುಗಳಿದ್ದರೂ ಜೀವಂತ ಇಲ್ಲದೆ ಇರುವುದು ಹಾಗೂ ಮದುವೆ ಅನಂತರ ತವರು ಮನೆ ಬಿಟ್ಟಿರುವುದು. ಬೇರೆ ಊರಿನಲ್ಲಿ ನೆಲೆಸಿದ್ದರೂ ಅಲ್ಲಿ ಮತ್ತೂಂದು ಕಾರ್ಡ್‌ ಮಾಡಿಸಿಕೊಂಡಿದ್ದರೂ ಇಲ್ಲೂ ಹೆಸರು ಇರುವ ಪ್ರಕರಣಗಳು ಪತ್ತೆಯಾಗುತ್ತಿವೆ.ಮತ್ತೂಂದೆಡೆ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆಯಿಂದ ಇ-ಕೆವೈಸಿ ಜೋಡಣೆ ಪ್ರಕ್ರಿಯೆಗೆ ಗ್ರಾಮಿಣ ಭಾಗದಲ್ಲಿ ತೊಂದರೆಯಾಗುತ್ತಿರುವುದರಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇಲಾಖೆಯಿಂದ ಸೂಚನೆ ನೀಡಲಾಗಿದೆ.

ಕುಟುಂಬದಲ್ಲಿ ಇಲ್ಲದವರ ಹೆಸರುಗಳು ಪಡಿತರ ಕಾರ್ಡ್‌ಗಳಲ್ಲಿ ಇರುವುದು ನಿಜ. ಇ-ಕೆವೈಸಿ ಪ್ರಕ್ರಿಯೆ ಅನಂತರ ಮೃತಪಟ್ಟವರು, ಮದುವೆ ಅನಂತರ ತವರು ಮನೆ ಬಿಟ್ಟವರು ಸೇರಿ ಲಕ್ಷಾಂತರ ಹೆಸರುಗಳನ್ನು ಕಾರ್ಡ್‌ ನಿಂದ ಡಿಲೀಟ್‌ ಮಾಡಲಾಗಿದೆ.
– ಶಶಿಕಲಾ ಜೊಲ್ಲೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ

Comments are closed.