ಕರ್ನಾಟಕ

ಸಿಎಎ ಆಕ್ಷೇಪಿಸುವವರು ದಲಿತ ವಿರೋಧಿಗಳು: ಹುಬ್ಬಳ್ಳಿಯಲ್ಲಿ ಅಮಿತ್‌ ಶಾ

Pinterest LinkedIn Tumblr


ಹುಬ್ಬಳ್ಳಿ: ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಕಾಂಗ್ರೆಸ್‌ ಮುಸಲ್ಮಾನರ ದಿಕ್ಕುತಪ್ಪಿಸುತ್ತಿದ್ದು, ದಂಗೆಗೆ ಕಾರಣವಾಗುತ್ತಿದೆ. ಈ ಕಾಯ್ದೆಗೆ ಆಕ್ಷೇಪಿಸುವುದು ಮಾಡುವುದು ದಲಿತರನ್ನು ವಿರೋಧಿಸಿದಂತೆ ಎಂಬುದನ್ನು ಆ ಪಕ್ಷದ ನಾಯಕರು ಅರಿಯಬೇಕು. ಬೇಕಿದ್ದರೆ ರಾಹುಲ್‌ ಗಾಂಧಿ ಬಹಿರಂಗ ಚರ್ಚೆಗೆ ಬರಲಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸವಾಲು ಹಾಕಿದರು.

ನಗರದಲ್ಲಿ ಶನಿವಾರ ಬಿಜೆಪಿ ಕರ್ನಾಟಕ ಪೌರತ್ವ ತಿದ್ದುಪಡಿ ಕಾನೂನು-2019ರ ಪರ ಆಯೋಜಿಸಿದ್ದ ಮಹಾ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಪಾಕಿಸ್ತಾನದಿಂದ ನಿರಾಶ್ರಿತರಾಗಿ ನಮ್ಮ ದೇಶಕ್ಕೆ ಬಂದಿರುವ ಜನರಿಗೆ ಆಶ್ರಯ ನೀಡುವುದರಲ್ಲಿ ಏನು ತಪ್ಪಿದೆ? ಪೌರತ್ವ ನೀಡಿದರೆ ಕಾಂಗ್ರೆಸ್‌, ಎಎಪಿ, ಜೆಡಿಎಸ್‌, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷದ ಮುಖಂಡರಿಗೆ ಆಗುವ ತೊಂದರೆಯಾದರೂ ಏನು? ಇದಕ್ಕೆ ಬೇರೇನೂ ಅಲ್ಲ, ಓಟ್‌ ಬ್ಯಾಂಕ್‌ ಕಾರಣ. ಬಿಜೆಪಿ ಎಂದಿಗೂ ಓಟ್‌ ಬ್ಯಾಂಕ್‌ ರಾಜಕಾರಣ ಮಾಡುವುದಿಲ್ಲ.

ಮಹಾತ್ಮಾ ಗಾಂಧಿ, ವಲ್ಲಭಭಾಯಿ ಪಟೇಲ್‌, ಜವಾಹರಲಾಲ್‌ ನೆಹರು ಸೇರಿದಂತೆ ಎಲ್ಲರೂ ನಮ್ಮ ದೇಶಕ್ಕೆ ಬರುವ ಪಾಕಿಸ್ತಾನದ ನಿರಾಶ್ರಿತರಿಗೆ ನಾಗರಿಕತ್ವ ನೀಡಬೇಕೆಂಬುದನ್ನು ಪ್ರತಿಪಾದಿಸಿದ್ದರು. ಮಹಾತ್ಮಾ ಗಾಂಧಿ ಮಾತಿಗೆ ಬೆಲೆ ನೀಡದ ರಾಹುಲ್‌ ಗಾಂಧಿ ಇನ್ನು ಯಾರ ಮಾತಿಗೆ ಬೆಲೆ ನೀಡುತ್ತಾರೋ ಗೊತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದರು.

ಸಿಎಎ ವಿರೋಧ ಮಾಡುವವರು ದಲಿತರನ್ನು ವಿರೋಧ ಮಾಡಿದಂತೆ ಎಂಬುದನ್ನು ಕಾಂಗ್ರೆಸ್‌ ಅರಿತುಕೊಳ್ಳಬೇಕು. ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಇಲ್ಲಿನ ನಾಗರಿಕತ್ವ ಬಯಸಿರುವ ಜನರಲ್ಲಿ ಶೇ.70ರಷ್ಟು ಜನರು ದಲಿತರಾಗಿದ್ದಾರೆ. ದಲಿತ ವಿರೋಧಿ ಎಂಬುದನ್ನು ಕಾಂಗ್ರೆಸ್‌ ಒಪ್ಪಿಕೊಳ್ಳುತ್ತದೆಯೇ? ಅಫಘಾನಿಸ್ತಾನದಲ್ಲಿ ಬುದ್ಧನ ಮೂರ್ತಿಯನ್ನು ಕೆಡವಿದ ಕುರಿತು ದಲಿತರು ಪ್ರಶ್ನೆ ಮಾಡಿದರೆ ಕಾಂಗ್ರೆಸ್‌ನವರು ಏನು ಉತ್ತರ ನೀಡುತ್ತಾರೆ ಎಂದು ಕೇಳಿದರು.

ಜಾಗೃತಿಗಾಗಿ 250 ಸಮಾವೇಶ
ಕಾಂಗ್ರೆಸ್‌ ಮುಖಂಡರು ದೇಶದಲ್ಲಿರುವ ಮುಸಲ್ಮಾನರ ದಿಕ್ಕುತಪ್ಪಿಸುತ್ತಿದ್ದಾರೆ. ದಂಗೆ ಮಾಡಿಸುತ್ತಿದ್ದಾರೆ. ದೇಶದ ಯಾವುದೇ ಮುಸಲ್ಮಾನರ ಹಕ್ಕು ಕಸಿದುಕೊಳ್ಳುವುದಿಲ್ಲ. ದೇಶದಲ್ಲಿ ಹಿಂದೂಗಳಿಗೆ ಇರುವಷ್ಟು ಅಧಿಕಾರ ಮುಸಲ್ಮಾನರಿಗೂ ಇದೆ. ಇದನ್ನು ಮನವರಿಕೆ ಮಾಡುವ ಉದ್ದೇಶದಿಂದ ನಮ್ಮ ಪಕ್ಷದ ಕಾರ್ಯಕರ್ತರು ದೇಶದ ಮೂರು ಕೋಟಿ ಜನರನ್ನು ತಲುಪಿ ಸಿಎಎ ಮಹತ್ವ ಬಗ್ಗೆ ತಿಳಿಸಿಕೊಡುವರು. 250 ಸಮಾವೇಶಗಳನ್ನು ಆಯೋಜಿಸಲಾಗುವುದು. ಅಲ್ಲದೇ ಲಕ್ಷಾಂತರ ಸಣ್ಣ ಸಭೆಗಳನ್ನು ಸಂಘಟಿಸಲಾಗುವುದು ಎಂದರು.

ಕಾಂಗ್ರೆಸ್‌ ಇಬ್ಬಗೆ ನಿಲುವು
ಈ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್‌ ಇಬ್ಬಗೆ ನಿಲುವು ಅನುಸರಿಸುತ್ತಿದೆ. ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮೂರು ದೇಶಗಳ ನಿರಾಶ್ರಿತರಿಗೆ ನಾಗರಿಕತ್ವ ಕೊಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಚುನಾವಣೆಯ ನಂತರ ಈಗ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹೊÉàಟ್‌ ಹಾಗೂ ರಾಹುಲ್‌ ಗಾಂಧಿ ಸಿಎಎಗೆ ವಿರೋಧ ವ್ಯಕ್ತಪಡಿಸುತ್ತಿರುವುದು ದುರ್ದೈವ ಎಂದರು.

ಸಿಎಎ ವಿರೋಧಿಸುವ ಮಾನವ ಹಕ್ಕುಗಳ ಚಾಂಪಿಯನ್‌ಗಳು ಮಾನವ ಹಕ್ಕುಗಳ ದಮನದ ಬಗ್ಗೆ ಮಾತನಾಡುತ್ತಿದ್ದಾರೆ. ಮೂರು ದೇಶಗಳಿಂದ ಬಂದು ನಮ್ಮ ದೇಶದಲ್ಲಿ ನೆಲೆಸಿರುವ ನಿರಾಶ್ರಿತರ ಕ್ಯಾಂಪ್‌ಗ್ಳ ಸ್ಥಿತಿಗತಿ ನೋಡಿದರೆ ಮಾನವ ಹಕ್ಕುಗಳ ಸ್ಥಿತಿ ಗೊತ್ತಾಗುತ್ತದೆ. ಅವರಿಗೆ ಕುಡಿಯಲು ಶುದ್ಧ ನೀರು, ಸೂರು ಸಿಗುತ್ತಿಲ್ಲ. ಶಿಕ್ಷಣ ಸಿಗುತ್ತಿಲ್ಲ. ಮೂಲಭೂತ ಸೌಲಭ್ಯಗಳು ಲಭಿಸುತ್ತಿಲ್ಲ. ಇದನ್ನು ಅರಿತುಕೊಳ್ಳಬೇಕು ಎಂದು ನುಡಿದರು.

ರಾಹುಲ್‌- ಇಮ್ರಾನ್‌ ಹೇಳಿಕೆಯಲ್ಲಿ ಸಾಮ್ಯತೆ
ಕಾಂಗ್ರೆಸ್‌ ಪಕ್ಷ ದೇಶ ವಿರೋಧಿ ನಿಲುವಿಗೆ ಪ್ರಸಿದ್ಧವಾಗಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹಾಗೂ ರಾಹುಲ್‌ ಗಾಂಧಿ ಹೇಳಿಕೆಗಳಲ್ಲಿ ಸಾಮ್ಯತೆಯಿದೆ. ಕಾಶೀ¾ರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದನ್ನು, ಸಿಎಎ ಜಾರಿಗೊಳಿಸಿದ್ದನ್ನು ರಾಹುಲ್‌ ಗಾಂಧಿ ಹಾಗೂ ಇಮ್ರಾನ್‌ ಖಾನ್‌ ವಿರೋಧಿಸುತ್ತಾರೆ. ರಾಹುಲ್‌ಗ‌ೂ ಇಮ್ರಾನ್‌ ಖಾನ್‌ಗೂ ಏನು ಸಂಬಂಧವಿದೆ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯಾನಂತರ 70 ವರ್ಷಗಳಲ್ಲಿ ದೇಶದ ಒಳಿತಿಗೆ ಕಾಂಗ್ರೆಸ್‌ ಪಕ್ಷ ಮಾಡಲಾಗದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದರೂ ಆ ಪಕ್ಷದ ನಾಯಕರು ಅನಗತ್ಯವಾಗಿ ವಿರೋಧಿಸುತ್ತಿದ್ದಾರೆ. ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಶೀ¾ರದ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯಲಾಯಿತು. ತ್ರಿವಳಿ ತಲಾಖ್‌ ಪದ್ಧತಿ ರದ್ದುಪಡಿಸಲಾಯಿತು. ಈಗ ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಲಾಗಿದೆ. ಮೋದಿ 10 ಬಾರಿ ಪ್ರಧಾನಿಯಾದರೂ ಕಾಶೀ¾ರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದರು. ಆದರೆ ಮೋದಿ ಎರಡನೇ ಬಾರಿ ಪ್ರಧಾನಿಯಾದ ತಕ್ಷಣವೇ ಮಾಡಿ ತೋರಿಸಿದರು ಎಂದರು.

ನೆಹರು ತಪ್ಪು ಸರಿ ಮಾಡುತ್ತಿರುವ ಮೋದಿ
ಜವಾಹರಲಾಲ್‌ ನೆಹರು ಮಾಡಿದ ತಪ್ಪನ್ನು ಪ್ರಧಾನಿ ನರೇಂದ್ರ ಮೋದಿ ಸರಿಪಡಿಸುತ್ತಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದಲ್ಲಿನ ಅಲ್ಪಸಂಖ್ಯಾತರಿಗೆ ಭಾರತದ ನಾಗರಿಕತ್ವ ನೀಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಲಾಗಿದೆ. ರಾಹುಲ್‌ ಗಾಂಧಿ ಅವರ ಅಜ್ಜ ಜವಾಹರಲಾಲ್‌ ನೆಹರು ಹಾಗೂ ಲಿಯಾಖತ್‌ ಮಧ್ಯೆ 1950ರಲ್ಲಿ ಉಭಯ ದೇಶಗಳ ಅಲ್ಪಸಂಖ್ಯಾತರಿಗೆ ಗೌರವ, ಮೂಲಭೂತ ಸೌಲಭ್ಯ ನೀಡುವ ಕುರಿತು ಒಪ್ಪಂದವಾಗಿತ್ತು. ಆದರೆ ಪಾಕಿಸ್ತಾನ ಒಪ್ಪಂದದಂತೆ ನಡೆದುಕೊಳ್ಳಲಿಲ್ಲ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಶೇ.30ರಷ್ಟಿದ್ದ ಹಿಂದೂಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಅಲ್ಪಸಂಖ್ಯಾತರ ಹತ್ಯೆ, ಮತಾಂತರ ಹಾಗೂ ದೇಶಬಿಟ್ಟು ಓಡಿಸಿರುವುದೇ ಇದಕ್ಕೆ ಕಾರಣ ಎಂದರು.

ರಾಹುಲ್‌ ಟಾರ್ಗೆಟ್‌
29 ನಿಮಿಷ ಮಾತನಾಡಿದ ಅಮಿತ್‌ ಶಾ ಭಾಷಣದುದ್ದಕ್ಕೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯನ್ನೇ ಟಾರ್ಗೆಟ್‌ ಮಾಡಿದ್ದು ಸ್ಪಷ್ಟವಾಗಿತ್ತು. ರಾಹುಲ್‌ ಬಾಬಾ ಮೊದಲು ಇತಿಹಾಸ ತಿಳಿದುಕೊಳ್ಳಲಿ. ಸಿಎಎ ಕಾನೂನನ್ನು ಓದಿ ಅರ್ಥ ಮಾಡಿಕೊಳ್ಳಲಿ ಎಂದು ಮೂದಲಿಸಿದರು.

ರಾಹುಲ್‌ಗೆ ಸವಾಲು
ರಾಹುಲ್‌ ಗಾಂಧಿಗೆ ಸವಾಲು ಹಾಕುತ್ತೇನೆ. ಸಿಎಎ ಕುರಿತು ಬಹಿರಂಗ ಚರ್ಚೆಗೆ ಬರುವುದಿದ್ದರೆ ಬರಲಿ. ಸಿಎಎ ಪರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡುತ್ತಾರೆ. ಬಹಿರಂಗ ಚರ್ಚೆಗೆ ರಾಹುಲ್‌ ಬಾಬಾ ದಿನಾಂಕ ನಿಗದಿಪಡಿಸಲಿ ಎಂದು ಅಮಿತ್‌ ಶಾ ಹೇಳಿದರು.

ಕರೆ ಮಾಡಿಸಿ ಬೆಂಬಲ
ಕೇಂದ್ರ ಸಚಿವ ಅಮಿತ್‌ ಶಾ ಭಾಷಣದ ಮಧ್ಯೆ ಎಲ್ಲರೂ ಮೊಬೈಲ್‌ ಕೈಯಲ್ಲಿ ಹಿಡಿದುಕೊಂಡು 8866288662 ನಂಬರ್‌ಗೆ ಡಯಲ್‌ ಮಾಡುವ ಮೂಲಕ ಸಿಎಎ ಬೆಂಬಲಿಸುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಜನರು ಮೊಬೈಲ್‌ ಸಂಖ್ಯೆಗೆ ಕರೆಮಾಡಿ ಸಿಎಎಗೆ ಬೆಂಬಲ ಸೂಚಿಸಿದರು.

Comments are closed.