ಕರ್ನಾಟಕ

ಶಿಕ್ಷಕರು ಅಲ್ಲಾಡ್ಸು ಡ್ಯಾನ್ಸ್ ಮಾಡಿಲ್ಲ: ಸುರೇಶ್ ಕುಮಾರ್ ಸ್ಪಷ್ಟನೆ

Pinterest LinkedIn Tumblr


ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿದ್ದ ಸರ್ಕಾರಿ ಶಾಲಾ ಆವರಣದಲ್ಲಿ ಅಲ್ಲಾಡ್ಸು..ಅಲ್ಲಾಡ್ಸು ಡ್ಯಾನ್ಸ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಶಾಲೆಯಲ್ಲಿ ನೃತ್ಯ ಮಾಡಿದವರು ಯಾರು ಶಿಕ್ಷಕರು ಅಲ್ಲ ಅನ್ನೋ ಸತ್ಯ ಬಹಿರಂಗವಾಗಿದೆ. ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ನೃತ್ಯ ಮಾಡಿದವರು ಯಾರು ಕೂಡ ಸರ್ಕಾರಿ ಶಾಲಾ ಶಿಕ್ಷಕರು ಅಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಡಿಯೋವೊಂದರ ಮೂಲಕ ಸ್ವತಃ ಸುರೇಶ್ ಕುಮಾರ್ ಪ್ರಕರಣದ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರಕರಣದಲ್ಲಿ ಶಾಲಾ ಮುಖ್ಯ ಶಿಕ್ಷಕರದ್ದು ಯಾವುದೇ ತಪ್ಪಿಲ್ಲ. ಮಹಿಳಾ ಸಂಘದವರು ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ಸಂಘದವರು ನೃತ್ಯ ಮಾಡಿದ್ದಾರೆ ಅಂತ ತಿಳಿಸಿದರು. ಶಾಲೆಯ ಆವರಣ ಇಂತಹ ಕಾರ್ಯಕ್ರಮಕ್ಕೆ ಕೊಡಬಾರದು. ಆದರೆ ಮಹಿಳಾ ಸಂಘ ಶಾಲೆಗೆ ಸಹಾಯ ಮಾಡಿದ್ದರಿಂದ ಆವರಣ ಕೊಡಲಾಗಿದೆ ಅಂತ ಸ್ಪಷ್ಟಪಡಿಸಿದರು.

ಮಹಿಳಾ ಸಂಘದವರು ಕ್ಷಮಾಪಣೆ ಪತ್ರ ಬರೆದು ಕೊಟ್ಟಿದ್ದಾರೆ. ಶಾಲಾ ಅಭಿವೃದ್ಧಿ ಸಮಿತಿ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ ಅಂತ ಸುರೇಶ್ ಕುಮಾರ್ ತಿಳಿಸಿದರು. ಇನ್ನು ಮುಂದೆ ಯಾವುದೇ ಸರ್ಕಾರಿ ಶಾಲೆಗಳು ಶೈಕ್ಷಣಿಕ ಚಟುವಟಿಕೆ ಬಿಟ್ಟು ಅನ್ಯ ಕಾರ್ಯಕ್ರಮಕ್ಕೆ ಶಾಲೆ ಆವರಣ ಕೊಡಬಾರದು ಅಂತ ಸಚಿವರು ಆದೇಶ ಮಾಡಿದ್ದಾರೆ. ಒಂದು ವೇಳೆ ಶಾಲೆ ಆವರಣ ಕೊಟ್ಟರೆ ಅದಕ್ಕೆ ಶಾಲಾ ಅಭಿವೃದ್ಧಿ ಸಮಿತಿ(SDMC) ಜವಾಬ್ದಾರಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಇದೇ ವೇಳೆ ಇಂತಹ ಘಟನೆಗಳು ನಡೆಯಬಾರದು ಅಂತ ಸರ್ಕಾರಿ ಶಾಲೆಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

Comments are closed.