ಕರ್ನಾಟಕ

ಕಾಡು ಬೆಕ್ಕಿನ ಹಿಕ್ಕೆಗೆ ಬ್ರೆಜಿಲ್‌ನಲ್ಲಿ ಚಿನ್ನದ ದರ!

Pinterest LinkedIn Tumblr


ಮೈಸೂರು: ಮಡಿಕೇರಿಯ ನವೋದ್ಯಮವೊಂದು ಕಾಡುಬೆಕ್ಕಿನ ಹಿಕ್ಕೆಯಿಂದ ತಯಾರಿಸಿದ ಕಾಫಿ ಪುಡಿಯನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದು, ಇದಕ್ಕೆ ಭಾರಿ ಬೇಡಿಕೆ ಬಂದಿದೆ.

ಮಲೆನಾಡಿನ ಕಾಫಿ ತೋಟಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಡುಬೆಕ್ಕಿಗೆ ಕಾಫಿ ಹಣ್ಣೆಂದರೆ ಪಂಚಪ್ರಾಣ. ಹಣ್ಣು ತಿಂದು ಜೀರ್ಣಕ್ರಿಯೆ ಬಳಿಕ ಅದು ಹಾಕುವ ಹಿಕ್ಕೆಯಲ್ಲಿ ಬೀಜಗಳಿರುತ್ತವೆ.

ಇದರಿಂದ ತಯಾರಿಸುವ ಪುಡಿಯೇ ಸಿವೆಟ್‌ ಅಥವಾ ಲುವಾಕ್‌ ಕಾಫಿ. ವಿದೇಶದಲ್ಲಿ ಇದಕ್ಕೆ ಒಂದು ಕೆ.ಜಿ.ಗೆ 40ರಿಂದ 50 ಸಾವಿರ ರೂ. ಇದೆ. ಭಾರತದಲ್ಲಿ ಸುಮಾರು 10 ಸಾವಿರ ರೂ.ಗಳವರೆಗೆ ಮಾರಾಟವಾಗುತ್ತಿದೆ. ಈ ಸಂಗತಿ ಹಳೆಯದಾದರೂ ಸಿವೆಟ್‌ ಅನ್ನು ವಿದೇಶದಲ್ಲಿ ಭರ್ಜರಿಯಾಗಿ ವ್ಯಾಪಾರ ಮಾಡುತ್ತಿದೆ ಸಿಸಿಸಿ ಎಂಬ ನವೋದ್ಯಮ (ಸ್ಟಾರ್ಟ್‌ ಆ್ಯಪ್‌). ಇದಕ್ಕೊಂದು ಭಾರಿ ವ್ಯಾಪಾರದ ಆಯಾಮ ನೀಡಿದ್ದಾರೆ ಈ ಕಂಪನಿಯ ಸ್ಥಾಪಕ ತಮ್ಮು ಪೂವಯ್ಯ.

ಹೇಗೆ ತಯಾರಿಕೆ?
ಕಾಡುಬೆಕ್ಕಿನ ಕಾಫಿ ಹಿಕ್ಕೆಯನ್ನು ಸಂಗ್ರಹಿಸುವುದೇ ಸಾಹಸ. ಕೊಡಗಿನ ಕಾಡಂಚಿನ ಕಾಫಿ ತೋಟಗಳ ಮಾಲೀಕರು, ಗ್ರಾಮಸ್ಥರನ್ನು ಸೇರಿಸಿ ಅರಿವು ಮೂಡಿಸಿದರು. ಕಾಫಿ ತೋಟಗಳಲ್ಲಿ ಅಲ್ಲಿಯವರೆಗೆ ವ್ಯರ್ಥವಾಗಿ ಬಿದ್ದಿರುತ್ತಿದ್ದ ಕಾಡು ಬೆಕ್ಕಿನ ಮಲವನ್ನು ಸಂಗ್ರಹಿಸಿ ನೀಡುವಂತೆ ತಿಳಿಸಿದರು.

ಆರಂಭದಲ್ಲಿ ಹೆಚ್ಚು ಸ್ಪಂದನೆ ದೊರೆಯದಿದ್ದರೂ, ಕಾಫಿ ಬೇಳೆ ಇರುವ ಕಾಡುಬೆಕ್ಕಿನ ತ್ಯಾಜ್ಯಕ್ಕೆ ಉತ್ತಮ ಬೆಲೆ ನೀಡಿದಾಗ ಜನರಲ್ಲಿ ಆಸಕ್ತಿ ಮೂಡಿತು. ಸಾಕಷ್ಟು ಮಂದಿ ಸಂಗ್ರಹಿಸಲು ಮುಂದಾದರು. ಆರಂಭದ ವರ್ಷ 20 ಕೆ.ಜಿಯಷ್ಟು ಕಾಫಿ ಪುಡಿ ತಯಾರಿಸಲಾಗಿತ್ತು. ಇದೀಗ 800 ಕೆ.ಜಿಯಷ್ಟು ಉತ್ಪಾದನೆಯಾಗುತ್ತಿದೆ. ಬೆಕ್ಕಿನ ಹಿಕ್ಕೆಯಿಂದ ಕಾಫಿ ಬೇಳೆಯನ್ನು ಎಚ್ಚರಿಕೆಯಿಂದ ಬೇರ್ಪಡಿಸಬೇಕು. ವೈಜ್ಞಾನಿಕವಾಗಿ ಪುಡಿ 130 ಗ್ರಾಂನ ಪೊಟ್ಟಣದಲ್ಲಿ ‘‘ಐನ್‌ಮನೆ’’ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಬ್ರೆಜಿಲ್‌ಗೆ ರಫ್ತು
‘‘ಕಾಡುಬೆಕ್ಕಿನ ಹಿಕ್ಕೆ ಕಾಫಿಯೇ ಎಂದು ಮೂಗೆಳೆಯುತ್ತಾರೆ. ಆದರೆ, ವಿದೇಶದಲ್ಲಿ ಅತ್ಯಂತ ಬೇಡಿಕೆ ಇದೆ. ಸಣ್ಣ ಪ್ರಮಾಣದಲ್ಲಿ ಇದರ ತಯಾರಿಕೆಗೆ ಕೈ ಹಾಕಿದೆವು. ಇದೀಗ ವಿದೇಶದಿಂದಲೂ ಬೇಡಿಕೆ ಬಂದಿದೆ. ಬ್ರೆಜಿಲ್‌ಗೆ ಅಲ್ಲಿನ ಕೋರಿಕೆಯಂತೆ ಮೊದಲ ಬಾರಿಗೆ ಸಿವೆಟ್‌ ಕಾಫಿಯನ್ನು ರಫ್ತು ಮಾಡುತ್ತಿದ್ದೇವೆ,’’ಎಂದು ಹೇಳುತ್ತಾರೆ ತಮ್ಮು ಪೂವಯ್ಯ.

ಕಾಡು ಬೆಕ್ಕಿಗೆ ಶರಣು
ನೈಸರ್ಗಿಕ ವಿಪತ್ತು, ಫಸಲು ಹಾಗೂ ದರ ಕುಸಿತದಿಂದ ಕಂಗಾಲಾಗಿದ್ದ ಕೆಲವು ಮಂದಿಗೆ ಕಾಡುಬೆಕ್ಕಿನ ತ್ಯಾಜ್ಯ ಸಂಗ್ರಹಿಸುವುದರಿಂದ ಆದಾಯ ಬರುತ್ತಿದೆ. ವ್ಯರ್ಥವಾಗುತ್ತಿದ್ದ ಇದಕ್ಕೆ ಕೆ.ಜಿ.ಗೆ 1500 ರೂ. ಉತ್ತಮ ಬೆಲೆಯಿದೆ. ಸಾಮಾನ್ಯ ಹಸಿ ಕಾಫಿ ಕೆ.ಜಿ.ಗೆ ಕೇವಲ 28 ರೂ. ಹಾಗೂ ಒಣಗಿದ ಕಾಫಿಗೆ 55 ರೂ. ಮಾತ್ರ ದರವಿದೆ. ತಪ್ಪು ತಿಳುವಳಿಕೆಯಿಂದ ಕಾಡುಬೆಕ್ಕುಗಳನ್ನು ಕೊಲ್ಲುವುದು ನಿಂತಿದೆ. ಬೆಕ್ಕಿಗಿಂತ ಅದರ ಹಿಕ್ಕೆ ಹೆಚ್ಚು ಲಾಭ ತರುವುದರಿಂದ ಕಾಡುಬೇಟೆ ನಿಂತಿದೆ.

ಹಲವು ರೋಗಗಳಿಗೆ ಮದ್ದು
ಸಿವೆಟ್‌ ಕಾಫಿ ಆರೋಗ್ಯಕ್ಕೆ ರಾಮಬಾಣ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕಾಡುಬೆಕ್ಕುಗಳ ಹೊಟ್ಟೆಯಲ್ಲಿ ಕಾಫಿ ಬೇಳೆ ಕೆಲವು ಗಂಟೆಗಳ ಕಾಲ ಇರುವುದರಿಂದ ಅದರಲ್ಲಿ ಔಷಧೀಯ ಗುಣ ಬೆಳೆಯುತ್ತದೆ. ಚರ್ಮದ ಕಾಂತಿ, ತಲೆಕೂದಲಿನ ರಕ್ಷಣೆ, ಹಲ್ಲು ಗಟ್ಟಿಮಾಡುವುದು, ಕ್ಯಾನ್ಸರ್‌, ಹೊಟ್ಟೆಹುಣ್ಣು ಮುಂತಾದ ಕಾಯಿಲೆಗಳು ಪರಿಹಾರವಾಗುತ್ತವೆ ಎನ್ನಲಾಗಿದೆ. ಬಾಲಿ, ಸುಮಾತ್ರ, ಜಾವದೀಪ, ಫಿಲಿಫೀನ್ಸ್‌ ಮುಂತಾದ ಕಡೆಯೂ ತಯಾರಾಗುತ್ತಿದ್ದು, ಹಲವು ದೇಶಗಳಲ್ಲಿ ಬೇಡಿಕೆ ಇದೆ. ಇದಕ್ಕೆ ತಕ್ಕ ಪೂರೈಕೆಯಾಗುತ್ತಿಲ್ಲ.

“ಈ ಐಡಿಯಾ ಕೇಳಿ ಹಲವರು ನಕ್ಕರು. ಮೂಗೆಳೆದರು. ನಾವೀಗ ವಿದೇಶಗಳಿಗೆ ರಪ್ತು ಮಾಡುತ್ತಿದ್ದೇವೆ.”–ತಮ್ಮು ಪೂವಯ್ಯ, ಸಿಸಿಸಿ ಸ್ಟಾರ್ಟ್‌ಅಪ್‌ ಸ್ಥಾಪಕ

Comments are closed.