ಕರ್ನಾಟಕ

ಸೊಸೆಗೆ ಮರು ಮದುವೆ ಮಾಡಿಸಿದ ಅತ್ತೆ-ಮಾವ

Pinterest LinkedIn Tumblr


ಶಿವಮೊಗ್ಗ: ಅತ್ತೆ-ಸೊಸೆ ಜಗಳ, ವರದಕ್ಷಿಣೆ ಕಿರುಕುಳ, ಪತಿಯಿಂದ ಪತ್ನಿಗೆ ಕಿರುಕುಳ ಮತ್ತಿತರ ನಕಾರಾತ್ಮಕ ವಿಚಾರಗಳ ನಡುವೆ ಅತ್ತೆ-ಮಾವ, ವಿಧವೆ ಸೊಸೆಗೆ ಮರು ಮದುವೆ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಗನ ಸಾವಿನ ನಂತರ ಸೊಸೆಯ ಜೀವನ ನಿಕೃಷ್ಟ ಆಗಬಾರದು ಎಂಬ ಉದ್ದೇಶದಿಂದ ಆಕೆಗೆ ಮರುವಿವಾಹ ಮಾಡಿಸಿ, ವರನನ್ನು ಮನೆ ತುಂಬಿಸಿಕೊಂಡ ಸಹೃದಯಿ ದಂಪತಿಯ ನಿಲುವು ಜನರ ಮೆಚ್ಚುಗೆಗೆ ಕಾರಣವಾಗಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮದ ಕಡೇಕಲ್ ನರಸಿಂಹ ಮತ್ತು ಲೋಲಾಕ್ಷಿ ದಂಪತಿ ಪುತ್ರ ಪ್ರಶಾಂತ್ ಎಂಬವರ ಜೊತೆ ಆನಂದಪುರ ಹೋಬಳಿ ಗೌತಮಪುರ ಸಮೀಪ ಹಿರೇಹಾರಕ ಗ್ರಾಮದ ಮಂಜುನಾಥ ಮತ್ತು ರೇಣುಕಮ್ಮ ದಂಪತಿ ಪುತ್ರಿ ವೀಣಾ ಅವರ ಮದುವೆ 4 ವರ್ಷಗಳ ಹಿಂದೆ ನಡೆದಿತ್ತು. ದುರಾದೃಷ್ಟವಶಾತ್ ಪ್ರಶಾಂತ್ 2 ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು.

ಸುಂದರ ಸಂಸಾರ ಕಟ್ಟುವ ಕನಸು ಹೊತ್ತಿದ್ದ 22 ವರ್ಷದ ವೀಣಾಗೆ ಪತಿಯ ಸಾವು ಭರ ಸಿಡಿಲಿನಂತೆ ಅಪ್ಪಳಿಸಿತ್ತು. ಜೊತೆಗೆ ಬದುಕಿನ ಕುಡಿಯಾಗಿ ಉದಯಿಸಿದ್ದ ಮಗ ಯಶ್ಮಿಕ್‍ನ ಭವಿಷ್ಯ ರೂಪಿಸುವ ಹೊಣೆಗಾರಿಕೆಯೂ ಹೆಗಲೇರಿತ್ತು. ಒಂದೂವರೆ ವರ್ಷದ ಮಗ ಅಪ್ಪನಿಗಾಗಿ ಹಂಬಲಿಸಿದಾಗೆಲ್ಲ, ಪತಿಯನ್ನು ನೆನೆದು ಹೆತ್ತ ಕರುಳು ಮರುಗುತ್ತಿತ್ತು. ನರಸಿಂಹ ದಂಪತಿಗೆ ಪುತ್ರ ವಿಯೋಗದ ಶೋಕ ಇನ್ನಿಲ್ಲದಂತೆ ಕಾಡುತ್ತಿತ್ತು. ಇರುವ ಒಬ್ಬ ಮಗನ ಅಕಾಲಿಕ ಸಾವನ್ನು ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಹಾಗೆಂದು ಅವರು ಸುಮ್ಮನಾಗಲಿಲ್ಲ. ದುಃಖದ ನಡುವೆಯೂ ತಮ್ಮ ಸೊಸೆ, ಮೊಮ್ಮಗನ ಬದುಕು ರೂಪಿಸುವ ಹೊಣೆ ಹೊತ್ತು, ಸೊಸೆಗೆ ಮರುವಿವಾಹ ಮಾಡಿದ್ದಾರೆ. ಎಲ್ಲಕ್ಕಿಂತ ವಿಶೇಷ ಎನ್ನುವಂತೆ ಸೊಸೆಯನ್ನು ವರಿಸಿದಾತನನ್ನು ಮಗನಾಗಿ ಸ್ವೀಕರಿಸಿ, ಮನೆದುಂಬಿಸಿಕೊಂಡಿದ್ದಾರೆ.

ಇದೀಗ ವೀಣಾಳ ಕೈಹಿಡಿದಿರುವ ಗಣೇಶ ಅವರು ಹೊಸನಗರ ತಾಲೂಕಿನ ಈಚಲಕೊಪ್ಪ ಸಮೀಪದ ಬಿಲ್ಗೋಡಿ ಗ್ರಾಮದವರು. 27 ವರ್ಷದ ಇವರಿಗೆ ಇದು ಮೊದಲ ವಿವಾಹ. ಗಣೇಶ್ ಪತ್ನಿಯ ಜೊತೆಯಲ್ಲಿ ಅವರ ಕುಟುಂಬದ ಸ್ವಲ್ಪ ಜಮೀನನ್ನು ನೋಡಿಕೊಂಡು, ಬದುಕಿನ ಹೊಸ ಹೆಜ್ಜೆ ಇಟ್ಟಿದ್ದಾರೆ. ಇಂತಹ ಮಾದರಿ ಕಾರ್ಯಕ್ಕೆ ಜೊತೆಯಾಗಿ ನಿಂತದ್ದು, ವೀಣಾ ಸಹೋದರ ಕೇಶವ ಹಾಗೂ ಅವರ ಸಂಬಂಧಿ ಮಾಜಿ ಸೈನಿಕ ಭೈರಾಪುರ ಕಿಶೋರ. ಇವರು ಮೂರೂ ಕುಟುಂಬಸ್ಥರ ಮನವೊಲಿಸಿ ಮದುವೆ ಮನೆಯ ಸಾರಥ್ಯ ವಹಿಸಿದರು. ಬಂಧು ಬಾಂಧವರು ಬೆನ್ನೆಲುಬಾಗಿ ನಿಂತರು. ಡಿ. 22ರಂದು ಹೊಸನಗರದ ಗಣಪತಿ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ಮಹೋತ್ಸವ ನಡೆದಿದೆ.

Comments are closed.