ಕರ್ನಾಟಕ

ಮನೆಗೆಲಸ ಮಾಡುತ್ತಿದ್ದ ಯುವತಿ ಮೇಲೆ ಅತ್ಯಾಚಾರ: ಬಾಯಿಗೆ ಬಟ್ಟೆ ಕಟ್ಟಿ ಇಸ್ತ್ರೀ ಪೆಟ್ಟಿಗೆಯಿಂದ ಸುಟ್ಟ ಶಿಕ್ಷಕ

Pinterest LinkedIn Tumblr

  1. ಬೆಂಗಳೂರು: ಮನೆಗೆಲಸ ಮಾಡುತ್ತಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿದಲ್ಲದೆ, ಆಕೆಯನ್ನು ಇಸ್ತ್ರೀ ಪೆಟ್ಟಿಗೆಯಿಂದ ಸುಟ್ಟು ದೌರ್ಜನ್ಯ ಎಸಗಿದ ಶಿಕ್ಷಕನೊಬ್ಬನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
    ಬಿಹಾರ ಮೂಲದ ರೆಹಬರೆ ಇಸ್ಲಾಂ ಪರ್ವೇಜ್‌ (40) ಎಂಬಾತನನ್ನು ಬಂಧಿಸಲಾಗಿದೆ. ಸದ್ಯ ಸಂತ್ರಸ್ತೆಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಐದು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಪರ್ವೇಜ್‌, ಕೋರಮಂಗಲದಲ್ಲಿ ಎಂಟನೇ ಅಡ್ಡರಸ್ತೆಯಲ್ಲಿರುವ ಮನೆಯಲ್ಲಿ ಪತ್ನಿ ಮತ್ತು ಇಬ್ಬರ ಮಕ್ಕಳ ಜತೆ ವಾಸವಾಗಿದ್ದಾನೆ. ಮನೆಯ ಮೊದಲ ಮಹಡಿಯಲ್ಲಿ ಟ್ಯೂಟೋರಿಯಲ್ಸ್‌ ನಡೆಸುತ್ತಿದ್ದ. ಈ ಮಧ್ಯೆ ಮನೆಗೆಲಸಕ್ಕೆಂದು ಬಿಹಾರದಿಂದ ಕರೆತಂದಿದ್ದ ಸಂತ್ರಸ್ತೆಯನ್ನು ಅಕ್ರಮ ಬಂಧನದಲ್ಲಿಟ್ಟು ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯೂ ಬಿಹಾರ ಮೂಲದವಳಾಗಿದ್ದಾಳೆ. 16 ವರ್ಷದವಳಿದ್ದಾಗಲೇ ಕರೆ ತಂದಿದ್ದ ಆರೋಪಿ, ಆಕೆಯನ್ನು ಹೊರಗಡೆ ಹೋಗಲು ಬಿಡುತ್ತಿರಲಿಲ್ಲ. ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಈ ಮಧ್ಯೆ ಜುಲೈನಲ್ಲಿ ಆತನ ಪತ್ನಿ ಕೆಲಸಕ್ಕೆ ಹೋಗಿದ್ದಳು. ಅದೇ ಸಂದರ್ಭದಲ್ಲಿ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಹೊರಗಡೆ ಬಾಯಿಬಿಡದಂತೆ ಜೀವ ಬೆದರಿಕೆ ಹಾಕಿ, ಅನಂತರ ಹತ್ತಾರು ಬಾರಿ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಫೋನ್‌ ಮೂಲಕ ತನ್ನ ಪೋಷಕರಿಗೆ ತಿಳಿಸಲು ಮುಂದಾಗಿದ್ದ ಆಕೆ ಮೇಲೆ ಹಲ್ಲೆ ನಡೆಸಿದ್ದ. ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು, ಹೊರಗಡೆ ಯಾರನ್ನು ಸಂಪರ್ಕಿಸದಂತೆ ನಿರ್ಬಂಧ ವಿಧಿಸಿದ್ದ. ಈ ಬಗ್ಗೆ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾಳೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಯುವಕನ ಜತೆ ಮಾತನಾಡಿದಕ್ಕೆ ಸುಟ್ಟ
ಟ್ಯೂಟೋರಿಯಲ್ಸ್‌ನಲ್ಲಿ ಹತ್ತಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಪರ್ಷಿಯನ್‌, ಅರೇಬಿಕ್‌ ಹಾಗೂ ಧರ್ಮ ಗ್ರಂಥದ ಬಗ್ಗೆ ಪ್ರವಚನ ನೀಡತ್ತಿದ್ದ. ಈ ಮಧ್ಯೆ ಟ್ಯೂಟೋರಿಯಲ್ಸ್‌ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪದೇ ಪದೆ ಆರೋಪಿಯ ಮನೆಗೆ ಬಂದು ಹೋಗುತ್ತಿದ್ದು, ಸಂತ್ರಸ್ತೆ ಹಾಗೂ ಯುವಕನ ನಡುವೆ ಪ್ರೇಮಾಂಕುರವಾಗಿದೆ. ಬಳಿಕ ಯುವಕ ಈಕೆಗೆ ಒಂದು ಮೊಬೈಲ್‌ ಕೂಡ ಕೊಡಿಸಿದ್ದ. ಆ ವಿಚಾರ ತಿಳಿದ ಆರೋಪಿ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ.

ಬಾಯಿಗೆ ಬಟ್ಟೆ ಕಟ್ಟಿ ಇಸ್ತ್ರೀ ಪೆಟ್ಟಿಗೆಯಿಂದ ಸುಟ್ಟಿದ್ದಾನೆ. ಹೀಗಾಗಿ ಆಕೆಯ ಎದೆ, ಕೈ-ಕಾಲು, ಹೊಟ್ಟೆ, ಬೆನ್ನು, ತೊಡೆ ಹಾಗೂ ಇತರೆ ಭಾಗಗಳಲ್ಲಿ ಸುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಗೆ ಚಿಕಿತ್ಸೆ ಕೊಡಿಸದೇ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ತಿಳಿದ ಮನೆ ಸಮೀಪದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಶಿಕ್ಷಕನ ಮನೆ ಮೇಲೆ ದಾಳಿ ನಡೆಸಿದಾಗ ಸಂತ್ರಸ್ತೆಯ ಸ್ಥಿತಿ ಗೊತ್ತಾಗಿದೆ. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಆಕೆಯನ್ನು ಚಿಕಿತ್ಸೆ ನೀಡುತ್ತಿರುವ ವೈದ್ಯರೇ ಸಂತ್ರಸ್ತೆಯ ಸ್ಥಿತಿ ಕಂಡು ಬೇಸರವ್ಯಕ್ತಪಡಿಸಿದ್ದಾರೆ. ಅತ್ಯಾಚಾರ ಎಸಗಿದಲ್ಲದೆ, ಆಕೆಯ ಮೇಲೆ ನಡೆಸಿರುವ ದೌರ್ಜನ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರದಲ್ಲಿರುವ ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಇದೇ ವೇಳೆ ಕೃತ್ಯಕ್ಕೆ ಸಹಕಾರ ನೀಡಿದ ಪರ್ವೇಜ್‌ನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನದ ದೂರು ಕೊಡುವ ಬೆದರಿಕೆ
ಸಂತ್ರಸ್ತೆ ಒಮ್ಮೆ ಆರೋಪಿಯ ಮನೆಯಿಂದ ತಪ್ಪಿಸಿಕೊಂಡು ಪ್ರೀಯಕರನ ಜತೆ ಹೋಗಲು ಸಿದ್ದತೆ ನಡೆಸಿದ್ದಳು. ಕೂಡಲೇ ಆಕೆಯ ಮೊಬೈಲ್‌ಗೆ ಕರೆ ಮಾಡಿದ ಆರೋಪಿ, ಈ ಕೂಡಲೇ ಮನೆಗೆ ಬಾರದಿದ್ದರೆ ಐದು ಲಕ್ಷ ರೂ. ಹಣ ಕಳವು ಮಾಡಿ ಪರಾರಿಯಾಗಿರುವುದಾಗಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದ. ಇತ್ತ ಪ್ರಿಯಕರ ಸಿಗದರಿಂದ ವಾಪಸ್‌ ಮನೆಗೆ ಬಂದಾಗ ಮತ್ತೂಮ್ಮೆ ಹಲ್ಲೆ ನಡೆಸಿ, ಇಸ್ತ್ರೀ ಪೆಟ್ಟಿಗೆಯಿಂದ ಸುಟ್ಟು ಗಾಯಗೊಳಿಸಿದ್ದಾನೆ ಎಂದು ಪೊಲೀಸರು ಹೇಳಿದರು.

Comments are closed.