ಕರ್ನಾಟಕ

ಪಕ್ಷೇತರ ಶಾಸಕ ಶರತ್ ಬಚ್ಚೇಗೌಡರ ಅಗತ್ಯ ಬಿಜೆಪಿಗಿಲ್ಲ : ಸಚಿವ ಈಶ್ವರಪ್ಪ

Pinterest LinkedIn Tumblr

ಶಿವಮೊಗ್ಗ: ಬಿಜೆಪಿಗೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡರ ಅಗತ್ಯವಿಲ್ಲ ಎಂಬುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಇಂದು ಹೊಸಕೋಟೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಶರತ್ ಬಚ್ಚೇಗೌಡ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಬಿಜೆಪಿಗೆ ಶರತ್ ಬಚ್ಚೇಗೌಡ ಅಗತ್ಯವಿಲ್ಲ ಎಂಬುದಾಗಿ ತಿಳಿಸಿದರು.

ಇದೇ ವೇಳೆ ಕ್ಯಾಬಿನೆಟ್ ವಿಸ್ತರಣೆ ಹಾಗೂ ಖಾತೆ ಬದಲಾವಣೆ ಕುರಿತು ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಬಿಜೆಪಿಗೆ ಈ ಮೊದಲೇ ಪೂರ್ಣ ಬಹುಮತ ಬಂದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಹೀಗಾಗಿ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದರು. ಇದನ್ನೂ ಓದಿ: ಹೊಸಕೋಟೆ ಅಭಿವೃದ್ಧಿಗೆ ಸಿಎಂ ಭೇಟಿ ಮಾಡ್ತೀನಿ – ಶರತ್ ಬಚ್ಚೇಗೌಡ

ಕ್ಯಾಬಿನೆಟ್ ವಿಸ್ತರಣೆ ಸಂದರ್ಭದಲ್ಲಿ ಮೂಲ ಬಿಜೆಪಿಗರು, ವಲಸೆ ಬಿಜೆಪಿಗರು ಎಂಬ ಪ್ರಶ್ನೆಯೇ ಬರುವುದಿಲ್ಲ. ಅಲ್ಲದೇ ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ. ನಮ್ಮನ್ನು ನಂಬಿ 17 ಮಂದಿ ಶಾಸಕರು ಬಿಜೆಪಿಗೆ ಬಂದಿದ್ದಾರೆ. ನಾವು ಅವರ ಋಣ ತೀರಿಸಬೇಕಿದೆ ಎಂದು ಹೇಳಿದರು.

ಸರ್ಕಾರದಲ್ಲಿ ಇನ್ನೂ ಅರ್ಧ ಕ್ಯಾಬಿನೆಟ್ ಪೆಂಡಿಂಗ್ ಇದೆ. ಕ್ಯಾಬಿನೆಟ್ ವಿಸ್ತರಣೆ ಹಾಗೂ ಖಾತೆ ಹಂಚಿಕೆಯನ್ನು ಹೈಕಮಾಂಡ್ ನಿರ್ಧರಿಸಲಿದೆ. ಇನ್ನೂ ಮೂರೂವರೆ ವರ್ಷ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರ ನಡೆಸಲಿದೆ ಎಂದು ಸಚಿವರು ತಿಳಿಸಿದರು.

Comments are closed.