ಕರ್ನಾಟಕ

ಶಾಲೆಗೆ ಹೆತ್ತವರರನ್ನ ಕರೆದುಕೊಂಡು ಬಾ ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಶಿಕ್ಷಕರು ಶಾಲೆಗೆ ಪೋಷಕರನ್ನ ಕರೆದುಕೊಂಡು ಬಾ ಎಂದಿದ್ದಕ್ಕೆ ಹೆದರಿದ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ದೊಮ್ಮಲೂರು ಲೇಔಟ್‍ನಲ್ಲಿ ನಡೆದಿದೆ.

ವಿದ್ಯಾರ್ಥಿ ವೇಣುಗೋಪಾಲ್(13) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಆರ್‍ಎಲ್‍ಎಸ್ ಪಟೇಲ್ ರಾಮರೆಡ್ಡಿ ಸ್ಕೂಲ್‍ನಲ್ಲಿ ವೇಣುಗೋಪಾಲ್ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಶಾಲೆಗೆ ಆಗಾಗ ವೇಣುಗೋಪಾಲ್ ಗೈರಾಗುತ್ತಿದ್ದ ಹಿನ್ನೆಲೆ ಶಿಕ್ಷಕರು ಪೋಷಕರನ್ನು ಕರೆದುಕೊಂಡು ಬಾ ಎಂದು ಆತನಿಗೆ ಹೇಳಿದ್ದರಂತೆ. ಇದಕ್ಕೆ ಭಯಬಿದ್ದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಬುಧವಾರ ಮಧ್ಯಾಹ್ನ ಶಾಲೆಯಲ್ಲಿ ಊಟಕ್ಕೆ ಬಿಟ್ಟ ವೇಳೆ ಇತರೇ ವಿದ್ಯಾರ್ಥಿಗಳ ಜೊತೆಗೆ ವೇಣುಗೋಪಾಲ್ ಗಲಾಟೆ ಮಾಡಿಕೊಂಡಿದ್ದನು. ಗಲಾಟೆ ವೇಳೆ ವೇಣುಗೋಪಾಲ್ ಮತ್ತೊಂದು ವಿದ್ಯಾರ್ಥಿಯ ಕೈಗೆ ಗಾಯ ಮಾಡಿದ್ದನು. ಗಾಯದ ಗುರುತು ನೋಡಿದ ಪೋಷಕರು ಸ್ಕೂಲ್‍ಗೆ ಬಂದು ವೇಣುಗೋಪಾಲ್ ವಿರುದ್ಧ ಶಾಲಾ ಆಡಳಿತದ ಬಳಿ ದೂರಿದ್ದರು. ಈ ದೂರು ಆಧಾರಿಸಿದ ಶಾಲೆ ವೇಣುಗೋಪಾಲ್ ನನ್ನು ಕರೆದು, ನಾಳೆ ಬರುವಾಗ ಪೋಷಕರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದರು. ಇದರಿಂದ ಭಯಗೊಂಡ ವಿದ್ಯಾರ್ಥಿ ಮನೆ ಹಿಂಭಾಗದ ನಿರ್ಜನ ಪ್ರದೇಶದ ಭಾವಿ ಬಳಿಯಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೋಷಕರು ಮಾತ್ರ ಮಗನ ಸಾವಿಗೆ ಶಾಲಾ ಸಿಬ್ಬಂದಿಯೇ ಕಾರಣ ಎಂದು ಆರೋಪಿಸಿದ್ದಾರೆ. ಮಗನಿಗೆ ಶಾಲೆಯಲ್ಲಿ ಶಿಕ್ಷಕರು ಹೊಡೆದಿದ್ದಾರೆ, ನಿಂದಿಸಿದ್ದಾರೆ. ಇದರಿಂದ ಆತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಅಲ್ಲದೆ ಮೃತ ವಿದ್ಯಾರ್ಥಿ ಪೋಷಕರು ಹಾಗೂ ಇತರೆ ಮಕ್ಕಳ ಪೋಷಕರು ಶಾಲೆ ಬಳಿ ತೆರಳಿ ಗಲಾಟೆ ಕೂಡ ಮಾಡಿದ್ದಾರೆ.

ಶಾಲಾ ಮಂಡಳಿ ಈ ಆರೋಪವನ್ನು ತಳ್ಳಿಹಾಕಿದ್ದು, ವಿದ್ಯಾರ್ಥಿ ಆಗಾಗ ಶಾಲೆ ತಪ್ಪಿಸುತ್ತಿದ್ದನು. ಅಲ್ಲದೆ ಇತರೆ ಮಕ್ಕಳ ಜೊತೆ ಗಲಾಟೆ ಮಾಡಲು ಹೋಗುತ್ತಿದ್ದನು. ಅದಕ್ಕೆ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ನಮ್ಮ ಶಿಕ್ಷಕರು ಹೇಳಿದ್ದರು ಅಷ್ಟೇ. ಆದರೆ ವಿದ್ಯಾರ್ಥಿ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂದು ನಮಗೆ ತಿಳಿದಿಲ್ಲ ಎಂದು ಹೇಳುತ್ತಿದೆ.

ವಿದ್ಯಾರ್ಥಿ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟುಕೊಂಡಿದೆ. ಒಂದು ಕಡೆ ಶಾಲಾ ಮಂಡಳಿ ನಾವು ಆತನಿಗೆ ಹೊಡೆದಿಲ್ಲ, ಕೇವಲ ಪೋಷಕರನ್ನು ಕರೆದುಕೊಂಡು ಬಾ ಎಂದು ತಿಳಿಸಿದ್ದೆವು ಎನ್ನುತ್ತಿದ್ದರೆ, ಪೋಷಕರು ಮಾತ್ರ ಶಾಲಾ ಸಿಬ್ಬಂದಿಯಿಂದಲೇ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಣ್ಣೀರಿಡುತ್ತಿದ್ದಾರೆ.

ಈ ಬಗ್ಗೆ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, ವೇಣುಗೋಪಾಲ್ ಒಳ್ಳೆಯ ಹುಡುಗ. ಓದಿನಲ್ಲೂ ಚುರುಕಾಗಿದ್ದನು, ಎಲ್ಲರೊಡನೆ ಖುಷಿಯಿಂದ ಇರುತ್ತಿದ್ದನು. ಶಾಲೆಯಲ್ಲಿ ಆತನಿಗೆ ಶಿಕ್ಷಕರು ಹೊಡೆದು, ನಿಂದಿಸಿದ್ದರು ಎಂದು ಆತನ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ತಿಳಿಸಿದ್ದಾಳೆ. ಇದರಿಂದ ಮನನೊಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಮೃದು ಸ್ವಭಾವದ ಬಾಲಕ ಎಂದು ಶಾಲಾ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.

ಬಾಲಕನ ಸಾವಿಗೆ ನಿಖರ ಕಾರಣವೇನೆಂದು ತಿಳಿಯುತ್ತಿಲ್ಲ. ಈ ಬಗ್ಗೆ ಹಲವು ಅನುಮಾನಗಳು ಕೂಡ ವ್ಯಕ್ತವಾಗುತ್ತಿದೆ. ಸದ್ಯ ಹಲಸೂರು ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಈ ಸಾವಿನ ಸತ್ಯಾಂಶ ತನಿಖೆ ನಡೆಸಿದ ಬಳಿಕವೇ ಬಯಲಿಗೆ ಬರಲಿದೆ.

Comments are closed.