ಕರ್ನಾಟಕ

ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ!

Pinterest LinkedIn Tumblr


ಬೆಂಗಳೂರು: ಹೊಸ ಶಾಸಕರಿಗೆ ಸಚಿವ ಸ್ಥಾನದ ಭರವಸೆ ನೀಡಿರುವ ಸಿಎಂ ಯಡಿಯೂರಪ್ಪ ಈ ನಿಟ್ಟಿನಲ್ಲಿ ಹೈಕಮಾಂಡ್‌ ಸಮ್ಮತಿ ಪಡೆಯುವ ಯತ್ನದಲ್ಲಿದ್ದಾರೆ. ಆದರೆ, ಬಿಜೆಪಿಯ ಮೂಲ ನಿವಾಸಿಗಳಲ್ಲೇ ಹಲವರು ಮಂತ್ರಿಗಿರಿಗಾಗಿ ಲಾಬಿ ನಡೆಸುತ್ತಿದ್ದಾರೆ. ಇಂಥವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವತ್ತಲೂ ಸಿಎಂ ಈಗ ಲಕ್ಷ್ಯ ಹರಿಸಬೇಕಾಗಿ ಬಂದಿದೆ.

ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರಕಾರ ರಚನೆಯಾದ ಹೊಸತರಲ್ಲಿ ಸಂಪುಟ ವಿಸ್ತರಿಸುವಾಗ ಹಿರಿಯ ಶಾಸಕ ಉಮೇಶ್‌ ಕತ್ತಿ ಅವರಿಗೆ ನಿರಾಸೆಯಾಗಿತ್ತು. ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ್‌ ಕೂಡ ಆಕಾಂಕ್ಷಿಯಾಗಿದ್ದರು. ಹಾಗೆಯೇ ಕನಿಷ್ಠ 4 ಬಾರಿ ಗೆದ್ದಿರುವ ಹತ್ತಾರು ಶಾಸಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ, ಬಿಜೆಪಿ ಸರಕಾರ ರಚನೆಗೆ ಕಾರಣರಾದವರಿಗೆ ಸಂಪುಟದಲ್ಲಿ ಸ್ಥಾನ ಕಾಯ್ದಿರಿಸುವ ಉದ್ದೇಶದಿಂದ ಸಿಎಂ ಅವರು 17 ಸಚಿವರನ್ನು ನೇಮಕ ಮಾಡಿಕೊಂಡಿದ್ದರು. ಇದರಿಂದಾಗಿ ಬಿಜೆಪಿಯ ಮೂಲ ನಿವಾಸಿಗಳಿಗೆ ಸಂಪುಟದ ಟಿಕೆಟ್‌ ಕೈತಪ್ಪಿತ್ತು. 16 ಸಚಿವ ಸ್ಥಾನಗಳು ಸದ್ಯ ಖಾಲಿ ಇವೆ. ಈ ಪೈಕಿ 11 ಅನರ್ಹರು ಚುನಾವಣೆಯಲ್ಲಿ ಗೆದ್ದು ಅರ್ಹರಾಗಿದ್ದಾರೆ. ಎಲ್ಲ ‘ಅರ್ಹ’ರಿಗೂ ಸಚಿವ ಸ್ಥಾನ ನೀಡಿದರೆ, ಇನ್ನೂ 5 ಸ್ಥಾನ ಖಾಲಿ ಉಳಿಯಲಿವೆ. ಇದಕ್ಕಾಗಿ ಪಕ್ಷದಲ್ಲಿ ಪೈಪೋಟಿ ಶುರುವಾಗಿದೆ.

ಹನುಮಂತನ ಬಾಲದಂತೆ ಬೆಳೆಯುತ್ತಿರುವ ಪಟ್ಟಿ!

ಈ ಬಾರಿಯಾದರೂ ಅವಕಾಶ ಸಿಗುವ ನಿರೀಕ್ಷೆಯಲ್ಲಿ ಹಿರಿಯ ಶಾಸಕರು ಕಾಯುತ್ತಿದ್ದಾರೆ. ಆದರೆ, ವಲಸಿಗರಿಗೆ ಸಿಂಹಪಾಲು ಹೋಗುವುದರಿಂದ ಈ ಸಾಧ್ಯತೆ ಕ್ಷೀಣವಾಗಿದೆ. ಈ ನಡುವೆಯೂ ಶಾಸಕರಾದ ಉಮೇಶ್‌ ಕತ್ತಿ, ಬಸನಗೌಡ ಪಾಟೀಲ ಯತ್ನಾಳ, ವಿಶ್ವನಾಥ ಮಾಮನಿ, ಸಿದ್ದು ಸವದಿ, ವೀರಣ್ಣ ಚರಂತಿಮಠ, ಎ.ಎಸ್‌.ಪಾಟೀಲ ನಡಹಳ್ಳಿ, ರಾಜುಗೌಡ, ಅಂಗಾರ, ದತ್ತಾತ್ರೇಯ ಪಾಟೀಲ್‌, ಸುಭಾಷ್‌ ಗುತ್ತೇದಾರ್‌, ಶಿವನಗೌಡ ನಾಯಕ್‌, ಜಿ.ಎಚ್‌.ತಿಪ್ಪಾರೆಡ್ಡಿ, ಕೆ.ಪೂರ್ಣಿಮ, ಎಸ್‌.ಎ.ರವೀಂದ್ರನಾಥ್‌, ಮಾಡಾಳ್‌ ವಿರೂಪಾಕ್ಷಪ್ಪ, ಕುಮಾರ್‌ ಬಂಗಾರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿ.ಸುನೀಲ್‌ಕುಮಾರ್‌, ಎಂ.ಪಿ.ಕುಮಾರಸ್ವಾಮಿ, ಕೆ.ಜಿ.ಬೋಪಯ್ಯ, ಎಸ್‌.ಎ.ರಾಮದಾಸ್‌ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

Comments are closed.