ಹೈದರಾಬಾದ್: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹೈದರಾಬಾದ್ ಪಶು ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಬರ್ಬರ ಹತ್ಯೆಯ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಮಗಳು ಅಪಾಯದಲ್ಲಿದ್ದಾಳೆ ಎಂದು ನಡುರಾತ್ರಿಯೇ ಆಕೆಯ ಮನೆಯವರು ದೂರು ನೀಡಿದ್ದರೂ ತನಿಖೆ ಚುರುಕುಗೊಳಿಸದೆ ಎಫ್ಐಆರ್ ದಾಖಲಿಸುವುದರಲ್ಲೂ ವಿಳಂಬ ಮಾಡಿದ್ದ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಈ ಬಗ್ಗೆ ಮಾಹಿತಿ ನೀಡಿದ್ದು, ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡುವವರೆಗೂ ಮೂವರು ಪೊಲೀಸರನ್ನು ಅಮಾನತಿನಲ್ಲಿರಿಸಲಾಗಿದೆ. ಮೃತ ವೈದ್ಯೆಯ ಕುಟುಂಬದವರು ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ರಾತ್ರಿಯೇ ದೂರು ನೀಡಿದ್ದರೂ ಎಫ್ಐಆರ್ ದಾಖಲಿಸುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರಿಂದ ಆ ಬಗ್ಗೆ ತನಿಖೆ ನಡೆಸಿ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ದೆಹಲಿಯ ನಿರ್ಭಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಇದುವರೆಗೆ ನೂರಾರು ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಅವುಗಳಲ್ಲಿ ಹಲವು ಪ್ರಕರಣಗಳಿಗೆ ಸರಿಯಾದ ನ್ಯಾಯ ಸಿಗದೆ ಅಲ್ಲೇ ಮುಚ್ಚಿಯೂ ಹೋಗಿವೆ. ಅದೇ ರೀತಿ ಹೈದರಾಬಾದ್ನಲ್ಲಿ ಕಳೆದ ಗುರುವಾರ 27 ವರ್ಷದ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ನಗರದ ಹೊರವಲಯದಲ್ಲಿ ಜೀವಂತವಾಗಿ ಸುಟ್ಟು ಹಾಕಲಾಗಿತ್ತು.
ಕೆಲಸ ಮುಗಿಸಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಪಶುವೈದ್ಯೆಯ ಸ್ಕೂಟಿ ಇದ್ದಕ್ಕಿದ್ದಂತೆ ರಸ್ತೆ ಮಧ್ಯೆ ಕೆಟ್ಟು ನಿಂತಿತ್ತು. ರಾತ್ರಿಯಾಗಿದ್ದರಿಂದ ಭಯವಾಗಿ ಮನೆಗೆ ಕರೆ ಮಾಡಿದ್ದ ವೈದ್ಯೆ ತನ್ನ ಅಕ್ಕನಿಗೆ ನಡೆದ ಘಟನೆ ವಿವರಿಸಿದ್ದಳು. ಅಲ್ಲೇ ಸ್ವಲ್ಪ ದೂರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಯಾರೋ ಅಪರಿಚಿತರು ತನಗೇನಾದರೂ ಮಾಡಬಹುದು ಎಂಬ ಭಯವಾಗುತ್ತಿದೆ ಎಂದು ಕೂಡ ಫೋನ್ನಲ್ಲಿ ಹೇಳಿದ್ದಳು. ಅದಾದ ಸ್ವಲ್ಪ ಹೊತ್ತಿನಲ್ಲಿ ಸ್ಕೂಟಿ ಸರಿಯಾಯಿತಾ? ಎಂಉದ ಕೇಳಲು ಮನೆಯವರು ಫೋನ್ ಮಾಡಿದಾಗ ಆಕೆಯ ಮೊಬೈಲ್ ನಾಟ್ ರೀಚಬಲ್ ಬರುತ್ತಿತ್ತು. ಇದರಿಂದ ಮನೆಯವರು ಗಾಬರಿಯಾಗಿದ್ದರು. ಆಕೆ ಮನೆಗೂ ಬಾರದೆ, ಸಂಪರ್ಕಕ್ಕೂ ಸಿಗದ ಕಾರಣ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮಾರನೇ ದಿನ ರಸ್ತೆ ಬದಿಯಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು.
ನಂತರ ಟೋಲ್ ಬಳಿಯಿದ್ದ ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಇಬ್ಬರು ಲಾರಿ ಚಾಲಕರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ನಾಲ್ವರರಿಗೆ ನ್ಯಾಯಾಂಗ ಬಂಧನ ವಿಧಿಸಿ ಶಡ್ನಾಗರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿತ್ತು. ದೇಶಾದ್ಯಂತ ಈ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಮೃತ ವೈದ್ಯೆಯ ಸಾವಿಗೆ ನ್ಯಾಯ ದೊರಕಿಸಬೇಕೆಂದು ಕಾಲೇಜುಗಳು, ಸಂಘ-ಸಂಸ್ಥೆಗಳು ಹೋರಾಟ, ಪ್ರತಿಭಟನೆಗಳನ್ನು ನಡೆಸುತ್ತಿವೆ.
ರಾತ್ರಿ ಆತಂಕದಿಂದ ಫೋನ್ ಮಾಡಿದ್ದ ಮಗಳಿಗೆ ವಾಪಾಸ್ ಫೋನ್ ಮಾಡಿದಾಗ ನಾಟ್ ರೀಚಬಲ್ ಬರುತ್ತಿದ್ದುದರಿಂದ ರಾತ್ರಿಯೇ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಆ ದೂರನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿದ್ದಾರೆ. ರಾತ್ರಿ ದೂರು ಬಂದ ಕೂಡಲೇ ಕಾರ್ಯೋನ್ಮುಖರಾಗಿದ್ದರೆ ಮಗಳ ಜೀವವನ್ನು ಉಳಿಸಲು ಸಾಧ್ಯವಿತ್ತು. ಪೊಲೀಸರು ಬೆಳಗಿನವರೆಗೆ ಕಾದಿದ್ದರಿಂದ ಆಕೆಯ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ಪಶುವೈದ್ಯೆಯ ಕುಟುಂಬಸ್ಥರು ಪೊಲೀಸರ ಮೇಲೆ ಆಕ್ರೋಶ ಹೊರಹಾಕಿದ್ದಾರೆ.

Comments are closed.