ಕರ್ನಾಟಕ

800 ರೂ. ಡ್ರೆಸ್​ ಖರೀದಿಸಲು ಹೋಗಿ 80 ಸಾವಿರ ಕಳೆದುಕೊಂಡಳು!

Pinterest LinkedIn Tumblr


ಬೆಂಗಳೂರು(ನ.27): ಇತ್ತೀಚೆಗೆ ಆನ್​ಲೈನ್​​ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸಿಲಿಕಾನ್​ ಸಿಟಿಯಲ್ಲಿ ಒಂದು ಮೋಸದ ಜಾಲವೇ ಇದೆ. ಇಂಥಹ ಪ್ರಕರಣಗಳು ಪ್ರತಿದಿನ ಬೆಳಕಿಗೆ ಬರುತ್ತವೆ. ಯುವತಿಯೊಬ್ಬಳು ಆನ್​ಲೈನ್​​ಲ್ಲಿ ಡ್ರೆಸ್​​ ಖರೀದಿಸಲು ಹೋಗಿ ಮೋಸ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ದಕ್ಷಿಣ ಬೆಂಗಳೂರಿನ ಗೊಟ್ಟಿಗೆರೆ ನಿವಾಸಿ ಶ್ರವಣ ಮೋಸ ಹೋದ ಯುವತಿ. ಆನ್​​ಲೈನ್​ಲ್ಲಿ 800 ರೂಪಾಯಿಯ ಕುರ್ತಾ ಖರೀದಿಸಲು ಹೋಗಿ 80 ಸಾವಿರ ಹಣ ಕಳೆದುಕೊಂಡಿದ್ದಾಳೆ. ಇ-ಕಾಮರ್ಸ್​​ ಆ್ಯಪ್​ ಮೂಲಕ ನವೆಂಬರ್ 8ರಂದು ಕುರ್ತಾ ಒಂದನ್ನು ಆರ್ಡರ್​​ ಮಾಡಿದ್ದಳು. ಅದರ ಬೆಲೆ 800 ರೂ.ಮಾತ್ರ. ಆದರೆ ಆರ್ಡರ್​ ಮಾಡಿದ್ದ ಕುರ್ತಾ ಆಕೆಯ ಕೈ ತಲುಪಿರಲಿಲ್ಲ. ಹೀಗಾಗಿ ಯುವತಿ ಆ್ಯಪ್​ನಲ್ಲಿ ಲಭ್ಯವಿದ್ದ ಕಸ್ಟಮರ್ ಕೇರ್​ ಸೆಲ್​ಗೆ ಕರೆ ಮಾಡಿದ್ದಳು.

ಕರೆ ಸ್ವೀಕರಿಸಿದ ಕಸ್ಟಮರ್ ಕೇರ್​ ಎಕ್ಸಿಕ್ಯೂಟಿವ್​, ನಿಮ್ಮ ಆರ್ಡರ್​​ ಕ್ಯಾನ್ಸಲ್​ ಮಾಡುತ್ತೇವೆ, ನಾವು ಆನ್​ಲೈನ್​ನಲ್ಲಿ ಕಳಿಸಿವ ಲಿಂಕ್​​ ಕ್ಲಿಕ್​ ಮಾಡಿ, ಅಲ್ಲಿ ಬರುವ ಅಫ್ಲಿಕೇಶನ್​ ಭರ್ತಿ ಮಾಡಿ ಎಂದು ಹೇಳಿದ್ದರು. ಅದರಂತೆಯೇ ಯುವತಿ ಅಫ್ಲಿಕೇಶನ್​ ಪೂರ್ಣ ಮಾಡಿ, ಅಲ್ಲಿ ಕೇಳಿದ್ದ ಬ್ಯಾಂಕ್​ ಖಾತೆಯ ಮಾಹಿತಿಯನ್ನು ನೀಡಿದ್ದಳು.

ಬಳಿಕ ಆಕೆಯ ಮೊಬೈಲ್​ಗೆ ಒಟಿಪಿ(OTP) ನಂಬರ್ ಬಂದಿತ್ತು. ಕಸ್ಟಮರ್​ ಕೇರ್​ ಎಕ್ಸಿಕ್ಯೂಟಿವ್​ OTP ನಂಬರ್​ ಶೇರ್ ಮಾಡುವಂತೆ ಮಹಿಳೆಗೆ ಹೇಳಿದ್ದ. ಅದರಂತೆಯೇ ಆಕೆ OTP ನಂಬರ್​ ಕೊಟ್ಟಿದ್ದಳು. ನಂಬರ್ ಶೇರ್​ ಮಾಡಿದ ಕೆಲವೇ ಕ್ಷಣಗಳಲ್ಲಿ 79,600 ರೂಪಾಯಿ ಮಹಿಳೆಯ ಬ್ಯಾಂಕ್​ ಖಾತೆಯಿಂದ ಕಡಿತಗೊಂಡಿರುವ ಮೆಸೇಜ್​ ಬಂದಿದೆ.

ಸದ್ಯ ಯುವತಿ ಶ್ರವಣ ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ್ದು, ಮೋಸ ಹೋದ ಪರಿಯನ್ನು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

Comments are closed.