ಚಿಕ್ಕಮಗಳೂರು: ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ಧಾರ್ಥ ಅವರು ಸಾವನ್ನಪ್ಪಿ ಹತ್ತಿರತ್ತಿರ ನಾಲ್ಕು ತಿಂಗಳು ಕಳೆಯುತ್ತಿವೆ. ಅಧಿಕ ಸಾಲದ ಸುಳಿಯಲ್ಲಿ ಸಿಲುಕಿ, ಜುಲೈ 29ಕ್ಕೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಸಿದ್ಧಾರ್ಥ್.
ಇದೀಗ ನಾಲ್ಕು ತಿಂಗಳ ನಂತರ ಸಿದ್ಧಾರ್ಥ ಒಡೆತನದ ಡಾರ್ಕ್ ಫಾರೆಸ್ಟ್ ಫರ್ನಿಚರ್ ಕಂಪೆನಿಯನ್ನು ಬಂದ್ ಮಾಡಲು ನಿರ್ಧರಿಸಲಾಗಿದ್ದು, ಏಕಾಏಕಿ ಕಂಪನಿ ಮುಚ್ಚಿದ ಪರಿಣಾಮ ನೂರಾರು ಕಾರ್ಮಿಕರು ಕಂಗಾಲಾಗಿದ್ದಾರೆ.
ಇಂದಿನಿಂದ ಕಂಪನಿ ಸ್ಥಗಿತಗೊಳಿಸುವುದಾಗಿ ಕಂಪನಿ ಆಡಳಿತ ಮಂಡಳಿ ಕಾರ್ಮಿಕರಿಗೆ ನೋಟಿಸ್ ನೀಡಿ ಬಂದ್ ಮಾಡಿದೆ. ಚಿಕ್ಕಮಗಳೂರು ನಗರದ ಎಬಿಸಿ ಆವರಣದಲ್ಲಿರುವ ಈ ಕಂಪನಿ ಸಿದ್ಧಾರ್ಥ ಅವರ ಮರಣದ ನಂತರ ಸಾಕಷ್ಟು ನಷ್ಟ ಅನುಭವಿಸಿದ್ದು, ಈ ಕಾರಣದಿಂದ ಬಂದ್ ಮಾಡುತ್ತಿರುವುದಾಗಿ ನೋಟೀಸ್ ನಲ್ಲಿ ನಮೂದಿಸಲಾಗಿದೆ. ಇಂದು ಎಬಿಸಿ ಬಳಿ ನೂರಾರು ಕಾರ್ಮಿಕರು ಜಮಾಯಿಸಿದ್ದರು.
ಸಿದ್ಧಾರ್ಥ ಅವರು ಡಾರ್ಕ್ ಫಾರೆಸ್ಟ್ ಫರ್ನೀಚರ್ ಕೋ. ಎಂಬ ಟಿಂಬರ್ ವ್ಯಾಪಾರದ ಉದ್ಯಮಕ್ಕೂ ಕೈ ಹಾಕಿದ್ದರು. ಆದರೆ ಈಚೆಗೆ ಉದ್ಯಮದಲ್ಲಿ ಸಂಕಷ್ಟ ಎದುರಾಗಿತ್ತು.
ಎಂಟು ವರ್ಷದ ಹಿಂದೆ ಕೆಫೆ ಕಾಫಿ ಡೇ ಅಂಗ ಸಂಸ್ಥೆಯಾಗಿ ಡ್ಯಾಫ್ಕೋ ಕಂಪನಿಯನ್ನು ಉದ್ಯಮಿ ದಿವಂಗತ ಸಿದ್ಧಾರ್ಥ್ ಹೆಗಡೆ ಪ್ರಾರಂಭ ಮಾಡಿದ್ದರು. ಮ್ಮ ಕೆಫೆ ಕಾಫಿ ಡೇ ಕಂಪನಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿದೇಶಗಳಲ್ಲಿ ಕಾಫಿ ಡೇಗಳು ತಲೆ ಎತ್ತುತ್ತಿರುವ ಸಂದರ್ಭ ತಮ್ಮ ಕಾಫಿ ಡೇಗಳಿಗೆ ಸ್ವತಃ ಫರ್ನಿಚರ್ ಗಳನ್ನು ತಮ್ಮದೇ ವಿಭಿನ್ನ ರೀತಿಯಲ್ಲಿ ತಯಾರು ಮಾಡುವ ಉದ್ದೇಶದಿಂದ ಈ ಟ್ಯಾಫ್ಕೋ ಕಂಪನಿಯನ್ನು ಪ್ರಾರಂಭ ಮಾಡಲಾಗಿತ್ತು.
ವಿದೇಶದಿಂದ ಮರಗಳ ಆಮದು ವಿದೇಶಗಳಿಗೂ ಹೊರಟಿದ್ದ ಫರ್ನಿಚರ್ ಗಳು
ಕಂಪನಿ ಆರಂಭಗೊಂಡ ಉದ್ದೇಶದಂತೆ ರಾಜ್ಯ, ಹೊರ ರಾಜ್ಯಗಳಿಂದ ಹಿಡಿದು ವಿದೇಶದಲ್ಲಿರುವ ಕಾಫಿ ಡೇ ಗಳಿಗೂ ಮಲೆನಾಡು ಚಿಕ್ಕಮಗಳೂರಿನಿಂದಲೇ ಫರ್ನಿಚರ್ ಗಳನ್ನು ತಯಾರು ಮಾಡಿ ರವಾನೆ ಮಾಡಲಾಗುತ್ತಿತ್ತು. ಕಂಪನಿಗೆ ವಿದೇಶದಿಂದಲೂ ವುಡ್ ಗಳನ್ನು ತೆಗೆದುಕೊಂಡು ಬರಲಾಗುತ್ತಿತ್ತು. ಇಲ್ಲಿ ಗಯಾನವುಡ್, ಸಿಲ್ವರ್ ಬೀಚ್, ರೋಸ್ವವುಡ್ ಸೇರಿದಂತೆ ಸ್ಥಳೀಯ ಅಕೇಷಿಯಾ ಸಿಲ್ವರ್ ಮರಗಳನ್ನು ಬಳಸಿಕೊಂಡು ಫರ್ನಿಚರ್ ಗಳನ್ನು ತಯಾರು ಮಾಡಲಾಗುತ್ತಿತ್ತು.
ಕಂಪನಿ ಶುರುವಾದ ಸಂದರ್ಭ ಸುಮಾರು 600ಕ್ಕೂ ಹೆಚ್ಚು ರಾಜ್ಯ, ಹೊರ ರಾಜ್ಯದ ಜನರಿಗೆ ಉದ್ಯೋಗ ನೀಡಲಾಗಿತ್ತು. ಜೊತೆಗೆ ಕಂಪನಿಯೂ ತಮ್ಮ ಕೆಲಸಗಾರರಿಗೆ ಉತ್ತಮ ಸಂಬಳದ ಜೊತೆಗೆ ಹಲವು ಸೌಕರ್ಯಗಳನ್ನು ನೀಡಿತ್ತು. ಆದರೆ ಸಿದ್ದಾರ್ಥ್ ಹೆಗಡೆ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ ನಡೆದ ಬಳಿಕ ಡ್ಯಾಫ್ಕೋ ಸಹ ಸಂಕಷ್ಟಕ್ಕೆ ಸಿಲುಕಿತ್ತು. ಅದರಲ್ಲೂ ಕಂಪನಿಯ ಸಂಸ್ಥಾಪಕ ಸಿದ್ಧಾರ್ಥ್ ಹೆಗಡೆ ಸಾವನ್ನಪ್ಪಿದ ಬಳಿಕ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿತ್ತು. ಆದರೆ ಈಗ ಏಕಾಏಕಿ ಕಂಪನಿ ಮುಚ್ಚಲಾಗಿದ್ದು ಕಾರ್ಮಿಕರು ಅತಂತ್ರರಾಗಿದ್ದಾರೆ.

Comments are closed.