ಕರ್ನಾಟಕ

ಈ ಹಿಂದೆ ದೊರೆತ ಅಧಿಕೃತ ಪಾಸ್‌ಪೋರ್ಟ್‌ ಮೂಲಕವೇ ವಿದೇಶಕ್ಕೆ ಹಾರಿದ ನಿತ್ಯಾನಂದ?

Pinterest LinkedIn Tumblr


ಬೆಂಗಳೂರು: ಸದಾ ವಿವಾದದಿಂದಲೇ ಸುದ್ದಿಯಾಗುವ ಸ್ವಾಮಿ ನಿತ್ಯಾನಂದ ಮತ್ತೊಮ್ಮೆ ದೇಶಾದ್ಯಂತ ಸದ್ದು ಮಾಡುತ್ತಿದ್ದಾರೆ. 2010ರಲ್ಲಿ ಭಕ್ತೆಯೊಬ್ಬರು ನಿತ್ಯಾನಂದ ಸ್ವಾಮಿಯ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಆ ವೇಳೆ ಹೆಚ್ಚು ಬೆಳಕಿಗೆ ಬಂದ ನಿತ್ಯಾನಂದ ಸ್ವಾಮಿ ಈಗ ಅಧಿಕೃತ ಪಾಸ್‌ಪೋರ್ಟ್‌ನೊಂದಿಗೆ ದೇಶ ತೊರೆದಿದ್ದಾರೆ ಎನ್ನಲಾಗುತ್ತಿದೆ.

ಇನ್ನು, ಹಲವು ತಿಂಗಳುಗಳ ಹಿಂದೆ ವಶಪಡಿಸಿಕೊಂಡಿದ್ದ ನಿತ್ಯಾನಂದರ ಪಾಸ್‌ಪೋರ್ಟ್‌ ಅನ್ನು ಸುಮಾರು 20 ದಿನಗಳ ಹಿಂದೆ ವಾಪಸ್‌ ನೀಡಲಾಗಿದೆ ಎಂದು ರಾಮನಗರ ಜಿಲ್ಲೆಯ ಪಬ್ಲಿಕ್ ಪ್ರಾಸಿಕ್ಯೂಟರ್‌ ರಘು ವಿಜಯ ಕರ್ನಾಟಕ ಸೋದರ ಪತ್ರಿಕೆ ಬೆಂಗಳೂರು ಮಿರರ್‌ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ರಾಮನಗರದ ಕೋರ್ಟ್‌ ಹಾಲ್‌ ನಂ. 3 ರಲ್ಲಿ ಸ್ವಾಮಿ ನಿತ್ಯಾನಂದ ಹಾಗೂ ಆರತಿ ರಾವ್‌ ನಡುವೆ ಕೇಸ್‌ ಬಾಕಿ ಉಳಿದಿದ್ದು, ಸ್ವಾಮಿ ನಿತ್ಯಾನಂದ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಕೋರಿದ್ದಾರೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಸದ್ಯ ಬಿಡದಿ ಆಶ್ರಮದಲ್ಲಿ ಭಕ್ತರೇ ಇಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ. ನಾವು ಗುರುವಾರ ನಿತ್ಯಾನಂದರ ಬಿಡದಿ ಆಶ್ರಮಕ್ಕೆ ತೆರಳಿದ್ದೆವು. ಆ ವೇಳೆ ಅಲ್ಲಿ ಯಾವ ಭಕ್ತರೂ ಕಣ್ಣಿಗೆ ಬೀಳಲಿಲ್ಲ. 10 ಮಂದಿ ಆಶ್ರಮದ ಉಸ್ತುವಾರಿಗಳು ಮಾತ್ರ ಇದ್ದರು ಎಂದು ಹೇಳಿದ್ದಾರೆ.

ಜತೆಗೆ, ದೇಶದ ಇತರೆ ಭಾಗಗಳಲ್ಲಿರುವ ನಿತ್ಯಾನಂದನ ಆಶ್ರಮಗಳಿಗೆ ಬಿಡದಿ ಆಶ್ರಮದಲ್ಲಿದ್ದ ಭಕ್ತರು ಶಿಫ್ಟ್ ಆಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಲ್ಲದೆ, ಬಿಡದಿ ಆಶ್ರಮಕ್ಕೆ ನಿತ್ಯಾನಂದ ಕಾಲಿಡದೆ ಒಂದು ವರ್ಷ ಮೀರಿದೆ ಎಂದೂ ಸ್ಥಳೀಯ ಜನತೆ ಹೇಳಿದ್ದಾರೆ. ಬಿಡದಿಯ ಆಶ್ರಮ ನಿರ್ವಹಣೆ ಮಂಡಳಿ ಕೃಷಿ ಭೂಮಿಯಲ್ಲಿ ಕಟ್ಟಡ ಕಟ್ಟಲು ಯತ್ನಿಸಿದ ಆರೋಪಕ್ಕೂ ಈಡಾಗಿದ್ದರು.

ವಿದೇಶಾಂಗ ಇಲಾಖೆಯ ಸಂಪರ್ಕದಲ್ಲಿ ಗುಜರಾತ್ ಪೊಲೀಸ್‌
ಇನ್ನೊಂದೆಡೆ, ಇಬ್ಬರು ಯುವತಿಯರನ್ನು ನಿತ್ಯಾನಂದನ ಆಶ್ರಮದಲ್ಲಿ ಅಕ್ರಮವಾಗಿ ವಶಕ್ಕಿಟ್ಟುಕೊಳ್ಳಲಾಗಿದೆ ಎಂದು ಅವರ ಪೋಷಕರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ ಬಳಿಕ ಆ ಯುವತಿಯರ ಪಾಸ್‌ಪೋರ್ಟ್‌ ಮಾಹಿತಿಯನ್ನು ಗುಜರಾತ್ ಪೊಲೀಸರು ಇಮ್ಮಿಗ್ರೇಷನ್‌ ಅಧಿಕಾರಿಗಳ ಜತೆಗೆ ಪರಿಶೀಲನೆ ನಡೆಸುತ್ತಿದ್ದಾರೆ.

ನವೆಂಬರ್ 26 ರಂದು ಆ ಇಬ್ಬರನ್ನೂ ಹೈ ಕೋರ್ಟ್ ಎದುರು ಗುಜರಾತ್ ಪೊಲೀಸರು ವಿಚಾರಣೆಗೆ ಹಾಜರುಪಡಿಸಬೇಕಾಗಿದೆ. ಈ ಹಿನ್ನೆಲೆ ಅವರು ಇರುವ ಜಾಗದ ಬಗ್ಗೆ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಇನ್ನೊಂದೆಡೆ ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಮ್ಮ ಪೋಷಕರನ್ನು ಭೇಟಿಯಾಗಲು ಇಷ್ಟವಿಲ್ಲ ಎಂದು ಯುವತಿಯರು ಪೊಲೀಸರಿಗೆ ವಿಡಿಯೋ ಸಂದೇಶ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.

Comments are closed.