ಕರ್ನಾಟಕ

ಹಸೆಮಣೆ ಏರಬೇಕಾಗಿದ್ದ ದಿನವೇ ಮಸಣ ಸೇರಿದ: 4 ದಿನಗಳ ಹಿಂದೆ ಕಾಣೆಯಾಗಿದ್ದ ತೌಸೀಫ್

Pinterest LinkedIn Tumblr


ಬೆಳಗಾವಿ: ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ತನ್ನ ಮದುವೆಯ ದಿನವೇ ಸಾವಿಗೀಡಾಗಿದ್ದು, ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಸೋಮವಾರ ಯುವಕನ ಮೃತದೇಹ ಪತ್ತೆಯಾಗಿದೆ.

ಇಲ್ಲಿಯ ಗಾಂಧಿ ನಗರ ಬಳಿಯ ಅಮನ್ ನಗರದ ತೌಸೀಫ್ ಇಮ್ತಿಯಾಜ್ ನಾಯಕ (28) ಎಂಬ ಯವಕನ‌ ಮೃತದೇಹ ತಾಲೂಕಿನ ಶಿರೂರ್ ಡ್ಯಾಂನಲ್ಲಿ ಸಿಕ್ಕಿದೆ. ಸೋಮವಾರ ಈತನ ಮದುವೆ ನಿಗದಿ ಆಗಿತ್ತು. ಹಸೆಮಣೆ ಏರಬೇಕಾಗಿದ್ದ ಯುವಕ ಮಸಣಕ್ಕೆ ಸೇರಿದ್ದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.

ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಡ್ಯಾಂ ನಲ್ಲಿ ಬಿದ್ದಿದ್ದ ಮೃತದೇಹವನ್ನು ಹೊರ ತೆಗೆದಿದ್ದಾರೆ. ಈತ ಮೃತಪಟ್ಟ ಸ್ಥಳದಲ್ಲಿಯೇ ದ್ವಿಚಕ್ರ ವಾಹನವೂ ಸಿಕ್ಕಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.

ದುಬೈಯಲ್ಲಿ ಸುಮಾರು ಏಳೆಂಟು ವರ್ಷಗಳಿಂದ ತೌಸೀಫ್ ನೌಕರಿ ಮಾಡುತ್ತಿದ್ದನು. ಆಗಾಗ ತನ್ನ ಸ್ವಂತ ಊರು ಬೆಳಗಾವಿಗೆ ಬಂದು ಹೋಗುತ್ತಿದ್ದನು. ಕೆಲವು ತಿಂಗಳ ಹಿಂದೆಯಷ್ಟೇ ತೌಸೀಫ್ ನ ವಿವಾಹಕ್ಕೆ ದಿನಾಂಕ ನಿಗದಿ ಮಾಡಿತ್ತು. ಮದುವೆಗಾಗಿ ದುಬೈದಿಂದ ಬಂದಿದ್ದ ತೌಸೀಫ್ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದನು.

ತೌಸೀಫ್ ನ ಮದುವೆ ಆಮಂತ್ರಣ ಪತ್ರಿಕೆಗಳನ್ನು ಎಲ್ಲ ಕಡೆಗೂ ಹಂಚಲಾಗಿತ್ತು. ಮದುವೆಗೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ತೌಸೀಫ್ ಖರೀದಿಸಿ ತಂದಿದ್ದನು. ಇನ್ನೇನೂ ಮದುವೆಗೆ ಇನ್ನು ಮೂರ್ನಾಲ್ಕು ದಿನಗಳು ಬಾಕಿ ಇರುವಾಗಲೇ ತೌಸೀಫ್ ನ. 14 ರಂದು ಮನೆಯಲ್ಲಿ ಮೊಬೈಲ್ ಇಟ್ಟು ಹೊರ ಹೋಗಿದ್ದನು.‌ ಜತೆಗೆ ತನ್ನ ದ್ವಿಚಕ್ರ ವಾಹನವನ್ನೂ ತೆಗೆದುಕೊಂಡು ಹೋಗಿದ್ದನು. ಈ ಬಗ್ಗೆ ತೌಸೀಫ್ ನಾಪತ್ತೆ ಆಗಿರುವ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮದುವೆ ದಿನಾಂಕ ಸಮೀಪಿಸುತ್ತಿದ್ದಂತೆ ತೌಸೀಫ್ ನ ಕುಟುಂಬಸ್ಥರು ಹಾಗೂ ಸಂಬಂಧಿಕರು ಎಲ್ಲ ಕಡೆಯೂ ಹುಡುಕಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈತನ ಫೋಟೊ ಹಾಕಿ ವೈರಲ್ ಮಾಡಲಾಗಿತ್ತು. ಆದರೆ ಸೋಮವಾರವೇ ವಿವಾಹ ಇದ್ದಿದ್ದರಿಂದ ಬೆಳಗ್ಗೆವರೆಗೂ ಎಲ್ಲ ಕಡೆಯೂ ಹುಡುಕುವ ಪ್ರಯತ್ನ ನಡೆದಿತ್ತು.‌ ಆದರೆ ಸಂಜೆ ಹೊತ್ತಿಗೆ ತೌಸೀಫ್ ಹೆಣವಾಗಿ ಪತ್ತೆ ಆಗಿದ್ದಾನೆ.

ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿರೂರ್ ಡ್ಯಾಂ ಬಳಿ ತೌಸೀಫ್ ತನ್ನ ದ್ವಿಚಕ್ರ ವಾಹನವನ್ನು ಹಚ್ಚಿ ಡ್ಯಾಂನಲ್ಲಿ ಜಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆಯೋ ಅಥವಾ ಯಾರಾದರೂ ಈತನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಸ್ಥಳಕ್ಕೆ ಯಮಕನಮರಡಿ ಎಎಸ್ ಐ ಕೆಳಗಡೆ ಹಾಗೂ ಸಿಬ್ಬಂದಿ ವಾಳಕೆ ಭೇಟಿ ನೀಡಿ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Comments are closed.