ಕರ್ನಾಟಕ

ಪೊಲೀಸ್‌ ನೌಕರಿ ತ್ಯಜಿಸಿ, ಕೃಷಿ ಕಡೆ ಮುಖ ಮಾಡಿದ ನವೀನ್‌

Pinterest LinkedIn Tumblr


ಬೆಂಗಳೂರು: ಸರ್ಕಾರಿ ನೌಕರಿ ಎಂದರೆ ಸಹಜವಾಗಿ ಎಲ್ಲರೂ ಮುಗಿ ಬೀಳುತ್ತಾರೆ. ಸರ್ಕಾರಿ ಕೆಲಸ ಸಿಕ್ಕಿದರೆ ಯಾರೂ ಬೇಡ ಎನ್ನುವುದಿಲ್ಲ. ಆದರೆ, ಇಲ್ಲೊಬ್ಬರು ಇದ್ದ ಪೊಲೀಸ್‌ ನೌಕರಿ ತ್ಯಜಿಸಿ, ಕೃಷಿ ಕಡೆ ಮುಖ ಮಾಡಿದ್ದಾರೆ.

ಅರಕಲಗೂಡು ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದ ಸಿ.ಎಂ.ನವೀನ್‌ ಕುಮಾರ್‌ ಅವರು, ಪೊಲೀಸ್‌ ನೌಕರಿ ತ್ಯಜಿಸಿ ಸಮಗ್ರ ಕೃಷಿ ಮಾಡುತ್ತಿದ್ದು, 12 ಎಕರೆಯಲ್ಲಿ ರಾಗಿ, ತೆಂಗು, ಮುಸುಕಿನ ಜೋಳ, ಅಲಸಂದೆ, ಅವರೆ, ಕಸವೆ, ಮೆಣಸಿನಕಾಯಿ, ಕಾಫಿ, ಕಾಳುಮೆಣಸು, ಪಪ್ಪಾಯಿ, ಶುಂಠಿ, ಹಲಸು, ಅಡಕೆ ಸೇರಿ ವಿವಿಧ ಅಲ್ಪಾವಧಿ ಮತ್ತು ದೀರ್ಘಾವಧಿ ಬೆಳೆಗಳನ್ನು ಬೆಳೆದು, ವಾರ್ಷಿಕ ಹತ್ತರಿಂದ ಹನ್ನೆರಡು ಲಕ್ಷ ರೂ. ಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಸುಮಾರು 20ಕ್ಕೂ ಅಧಿಕ ಬೆಳೆ ಬೆಳೆಯುವ ನವೀನ್‌, ಸಾವಯವ ಗೊಬ್ಬರ, ಜೀವಾಮೃತ, ಕೊಟ್ಟಿಗೆ ಗೊಬ್ಬರ, ಮಣ್ಣಿನ ಫ‌ಲವತ್ತತೆಗಾಗಿ ಎರೆಹುಳು ಗೊಬ್ಬರ, ಕಾಂಪೋಸ್ಟ್‌ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರವಾಗಿ ಸೆಣಬು ಬೆಳೆದು ಭೂಮಿಯ ಫ‌ಲವತ್ತತೆ ಹೆಚ್ಚಿಸಿಕೊಂಡಿದ್ದಾರೆ.

ಮಲ್ಲಿಗೆ, ಸೇವಂತಿಗೆ ಸೇರಿ ಹೂವುಗಳನ್ನು ಬೆಳೆಸುತ್ತಿದ್ದು, ಜೇನು ಹುಳು ಸಾಕಣೆ ಮಾಡುತ್ತಿದ್ದಾರೆ. 12 ಎಕರೆ ಪ್ರದೇಶದಲ್ಲಿ ಐದು ಪೆಟ್ಟಿಗೆಯಲ್ಲಿ ಹುಳು ಸಾಕಣೆ ಮಾಡುತ್ತಿದ್ದಾರೆ. ಕೃಷಿಹೊಂಡದಲ್ಲಿ ಮೀನು ಸಾಕಣೆ, 25 ಮೇಕೆ, 10 ಹಸು, 20ಕ್ಕೂ ಅಧಿಕ ನಾಟಿ ಕೋಳಿ ಸಾಕಣೆ ಮಾಡಿದ್ದಾರೆ. ಕಣಿವೆಯ ಮೇಲೆ ಅರಣ್ಯ ಗಿಡಗಳಾದ ಸಾಗುವಾನಿ, ಸಿಲ್ವರ್‌ ಒಕ್‌, ಹೆಬ್ಬೇವನ್ನು ನೆಟ್ಟಿದ್ದು, ಹೊಲವು ಹಸಿರು ಹೊದಿಕೆಯಿಂದ ಕಂಗೊಳಿಸುತ್ತಿದೆ.

ಹಸುಗಳಿಗೆ ಮೇವಿಗಾಗಿ ಅಜೋಲ ಬೆಳೆಸುತ್ತಿದ್ದು, ಮೇವು ಕಟಾವು ಯಂತ್ರ, ಗೋಬರ್‌ ಗ್ಯಾಸ್‌ ಅನಿಲ ಅಳವಡಿಸಿಕೊಂಡಿದ್ದಾರೆ. 2015ರಲ್ಲಿ ಅರಕಲಗೂಡು ತಾಲೂಕು ಆಡಳಿತ ಮಂಡಳಿಯಿಂದ “ಯುವ ಪ್ರಗತಿಪರ ರೈತ’ ಪ್ರಶಸ್ತಿ, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಮೇಳ-2017ರಲ್ಲಿ ತಾಲೂಕು ಮಟ್ಟದ “ಅತ್ಯುತ್ತಮ ಯುವ ರೈತ’ ಪ್ರಶಸ್ತಿ, ಜಿಕೆವಿಕೆಯಲ್ಲಿ ನಡೆಯುತ್ತಿರುವ 2019ನೇ ಕೃಷಿಮೇಳದಲ್ಲಿ ಹಾಸನ ಜಿಲ್ಲಾ ಮಟ್ಟದ “ಅತ್ಯುತ್ತಮ ರೈತ’ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.

ಕೃಷಿಗೆ ಕುಟುಂಬಸ್ಥರ ವಿರೋಧ: ಬಿ.ಎ.ಪದವಿ ಗಳಿಸಿದ್ದ ನಾನು 2007ರಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆ ಆಯ್ಕೆಯಾಗಿದ್ದೆ. ಆದರೆ, ಸರ್ಕಾರಿಯಾಗಲಿ, ಖಾಸಗಿಯಾಗಲಿ, ನೌಕರಿಯಿಂದ ನೆಮ್ಮದಿಯ ಜೀವನ ಸಿಗುವುದಿಲ್ಲವೆಂದು ತಿಳಿದು ಕೆಲಸಕ್ಕೆ ಹೋಗಲಿಲ್ಲ. ನಮ್ಮದೇ 8 ಎಕರೆ ಜಮೀನಿನಲ್ಲಿ ಬೇಸಾಯ ಮಾಡಲು ತೀರ್ಮಾನಿಸಿದೆ. ಆದರೆ, ಕುಟುಂಬಸ್ಥರು ವಿರೋಧಿಸಿದರು.

ಹಾಗೇ ಊರಿನ ಜನರು ಟೀಕಿಸಿದರು. ಆದರೂ, ಪಟ್ಟು ಬಿಡದೆ ತಂತ್ರಜ್ಞಾನ ಬಳಸಿಕೊಂಡು ಸಮಗ್ರ ಕೃಷಿಗೆ ಮುಂದಾದೆ. ಪ್ರಸ್ತುತ ವಾರ್ಷಿಕ 10ರಿಂದ 12 ಲಕ್ಷ ರೂ. ಆದಾಯ ಬರುತ್ತಿದ್ದು, ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇನೆ. ಊರಿನ ಜನರು ಗೌರವದಿಂದ ಕಾಣುತ್ತಿದ್ದಾರೆ ಎಂದು ಪ್ರಗತಿಪರ ರೈತ ನವೀನ್‌ ಕುಮಾರ್‌ ತಿಳಿಸುತ್ತಾರೆ.

ಬಿಗ್‌ಬಾಸ್‌ಗೂ ಅವಕಾಶ: ರೈತರು ಬಿಗ್‌ಬಾಸ್‌ನಲ್ಲಿ ಭಾಗವಹಿಸುವುದು ಬಹಳ ಕಡಿಮೆ. ಅದರಲ್ಲಿಯೂ ರೈತರನ್ನೇ ಆಯ್ಕೆ ಮಾಡಬೇಕೆಂದಾದರೆ ಲಕ್ಷಾಂತರ ಪ್ರಗತಿಪರ ರೈತರು ಸಿಗುತ್ತಾರೆ. ಆದರೂ, 2017ರ ಬಿಗ್‌ಬಾಸ್‌ ಸೀಸನ್‌-5ರಲ್ಲಿ ನವೀನ್‌ ಕುಮಾರ್‌ ಅವರಿಗೂ ಅವಕಾಶ ದೊರೆತಿತ್ತು. ಆದರೆ, ಕಾರಣಾಂತರಗಳಿಂದ ಹೋಗಿರಲಿಲ್ಲ. ಮುಂದಿನ ವರ್ಷ ನಡೆಯುವ ಬಿಗ್‌ಬಾಸ್‌ಗೆ ಭಾಗವಹಿಸಲು ಇಚ್ಛಿಸಿದ್ದಾರೆ. ಅಲ್ಲದೆ, ಜಮೀನಿನಲ್ಲಿ ಔಷಧ ಗಿಡಗಳನ್ನು ಬೆಳೆಸಬೇಕೆಂದು ಚಿಂತಿಸಿ, ಪೂರಕ ಸಿದ್ಧತೆ ನಡೆಸುತ್ತಿದ್ದಾರೆ.

ಕಂಪನಿಗಳಲ್ಲಿ, ಸರ್ಕಾರಿ ಕೆಲಸ ಮಾಡುವುದಕ್ಕಿಂತ ಜಮೀನು ಇದ್ದವರು ನೆಮ್ಮದಿಯಿಂದ ಕೃಷಿ ಮಾಡುವುದು ಒಳಿತು. ಕಂಪನಿಗಳು ನೀಡುವ ಹಣಕ್ಕಿಂತಲೂ ದುಪ್ಪಟ್ಟು ಹಣ ಸಂಪಾದಿಸಬಹುದು. ಕೃಷಿಗೂ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಮಧ್ಯ ವರ್ತಿಗಳ ಹಾವಳಿ ತಪ್ಪಿಸಿ, ಬೆಳೆಯನ್ನು ನೇರ ಮಾರುಕಟ್ಟೆಗೆ ರವಾನಿಸಿದರೆ ಹೆಚ್ಚಿನ ಹಣ ಸಂಪಾದನೆ ಸಾಧ್ಯ.
-ಸಿ.ಎಂ.ನವೀನ್‌ ಕುಮಾರ್‌, ಹಾಸನ ಜಿಲ್ಲಾಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಪುರಸ್ಕೃತ

Comments are closed.