ಕರ್ನಾಟಕ

ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳಲ್ಲಿ ಕರ್ನಾಟಕ ಇಡೀ ದೇಶದಲ್ಲೇ ನಾಲ್ಕನೇ ಸ್ಥಾನ

Pinterest LinkedIn Tumblr

ಬೆಂಗಳೂರು : ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ದಕ್ಷಿಣ ರಾಜ್ಯಗಳ ಪೈಕಿ ಕಳೆದ ವರ್ಷ ಮಕ್ಕಳ ವಿರುದ್ಧ ಅತಿಹೆಚ್ಚು ಅಪರಾಧ ಕೃತ್ಯಗಳು ಸಂಭವಿಸಿರುವುದು ಕರ್ನಾಟಕದಲ್ಲಿ. ಇಡೀ ದೇಶದಲ್ಲಿ ಮಕ್ಕಳ ವಿರುದ್ಧದ ಅಪರಾಧ ಕೃತ್ಯಗಳ ಸಂಖ್ಯೆ ಶೇಕಡ 20ರಷ್ಟು ಹೆಚ್ಚಳವಾಗಿದ್ದರೆ ಕರ್ನಾಟಕದಲ್ಲಿ ಶೇಕಡ 32ರಷ್ಟು ಏರಿಕೆಯಾಗಿದೆ.

ದಕ್ಷಿಣ ರಾಜ್ಯಗಳ ಪೈಕಿ ಕೇರಳದಲ್ಲಿ ಶೇಕಡ 23.7ರಷ್ಟು ಹೆಚ್ಚಳ ಕಂಡುಬಂದಿದೆ. ತಮಿಳುನಾಡಿನಲ್ಲಿ ಶೇಕಡ 23.6 ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳ ಪ್ರಮಾಣ ಕ್ರಮವಾಗಿ ಶೇಕಡ 29.8 ಮತ್ತು 23.1ರಷ್ಟು ಹೆಚ್ಚಳ ಕಂಡಿದೆ. ಗಮನಾರ್ಹ ಅಂಶವೆಂದರೆ ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳಲ್ಲಿ ಕರ್ನಾಟಕ ಇಡೀ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಶುವಲ್ ಅಫೆನ್ಸ್ (ಪೋಕ್ಸೊ) ಕಾಯ್ದೆ-2012ರಡಿಯ ಅಪರಾಧ ಕೃತ್ಯಗಳಲ್ಲಿ ಶೇಕಡ 6ರಷ್ಟು ಪ್ರಕರಣಗಳು ರಾಜ್ಯದಿಂದ ವರದಿಯಾಗಿವೆ.

ಮೆಟ್ರೋಪಾಲಿಟನ್ ನಗರಗಳ ಪೈಕಿ ಬೆಂಗಳೂರು, ಮಕ್ಕಳ ವಿರುದ್ಧದ ಅಪರಾಧಗಳಲ್ಲಿ ಮೂರನೇ ಸ್ಥಾನದಲ್ಲಿದ್ದು, ಒಟ್ಟು 1582 ಪ್ರಕರಣಗಳು ದಾಖಲಾಗಿವೆ. ಈ ಅಂಕಿ ಅಂಶಗಳನ್ನು ಗಮನಿಸಿದಾಗ ಬೆಂಗಳೂರಿನ ಬಗ್ಗೆ ಯಾವುದೇ ಆಶಾಭಾವನೆ ಕಾಣಿಸುತ್ತಿಲ್ಲ. ದೆಹಲಿಯಲ್ಲಿ ಗರಿಷ್ಠ ಅಂದರೆ 6844 ಪ್ರಕರಣಗಳು ದಾಖಲಾಗಿದ್ದು, ಮುಂಬೈನಲ್ಲಿ 3290 ಪ್ರಕರಣಗಳು ದಾಖಲಾಗಿವೆ. ಈ ಎರಡು ನಗರಗಳು ಬೆಂಗಳೂರಿಗಿಂತ ಮುಂದಿವೆ. ಮಕ್ಕಳ ವಿರುದ್ಧದ ಅಪರಾಧಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದ್ದರೆ, ಮಕ್ಕಳ ಅಪರಹಣ, ಹತ್ಯೆ, ಅಪ್ರಾಪ್ತ ವಯಸ್ಸಿನ ಮಕ್ಕಳ ಸರಬರಾಜು ಮತ್ತು ಪೋಕ್ಸೋ ಕಾಯ್ದೆಯಡಿ ಅಪರಾಧಗಳ ವಿಚಾರದಲ್ಲಿ ಕುಖ್ಯಾತ ಮೂರು ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

“ಎನ್‍ಸಿಆರ್‍ಬಿ ಅಂಕಿ ಅಂಶಗಳು ಮಕ್ಕಳ ಸಂಕಷ್ಟಗಳ ಬಗ್ಗೆ ವಾಸ್ತವತೆಯನ್ನು ಅರಿಯಬೇಕಾದ ಅನಿವಾರ್ಯತೆನ್ನು ಸೃಷ್ಟಿಸಿವೆ ಹಾಗೂ ನಮ್ಮ ಮಕ್ಕಳು ಎಷ್ಟರ ಮಟ್ಟಿಗೆ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ. ಸುರಕ್ಷಿತ ಹಾಗೂ ಸುಭದ್ರವಾಗಿರುವ ಭಾವನೆ ಮಕ್ಕಳಲ್ಲಿ ಮೂಡುವಂಥ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ. ನಮ್ಮ ಮಕ್ಕಳ ಸುರಕ್ಷೆಯನ್ನು ಖಾತರಿಪಡಿಸಲು ಬಜೆಟ್‍ನಲ್ಲಿ ಸಮರ್ಪಕ ಅನುದಾನ ನಿಗದಿಪಡಿಸುವ, ವಿಶೇಷ ಸುರಕ್ಷಾ ಯೋಜನೆಗಳ ಲಭ್ಯತೆ ಹೆಚ್ಚಿಸುವ, ಗುಣಮಟ್ಟದ ಸೇವೆಗಳ ಮತ್ತು ದೊಡ್ಡ ಪ್ರಮಾಣದ ಜಾಗೃತಿ ಅಭಿಯಾನಗಳ ಅಗತ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳ ಸಮರ್ಪಕ ಅನುಷ್ಠಾನದ ಅಗತ್ಯವಿದೆ” ಎಂದು ಕ್ರೈ ಸಂಸ್ಥೆಯ ನೀತಿ, ಸಂಶೋಧನೆ, ಪ್ರತಿಪಾದನೆ ಮತ್ತು ದಾಖಲಾತಿ ನಿರ್ದೇಶಕಿ ಪ್ರೀತಿ ಮಹರಾ ಹೇಳುತ್ತಾರೆ.

2017ರಲ್ಲಿ ಮಕ್ಕಳ ವಿರುದ್ಧ ದೇಶದಲ್ಲಿ ಒಟ್ಟು 129032 ಅಪರಾಧ ಕೃತ್ಯಗಳು ಸಂಭವಿಸಿವೆ ಅಂದರೆ ಪ್ರತಿದಿನ ಭಾರತದಲ್ಲಿ ಮಕ್ಕಳ ವಿರುದ್ಧ 350ಕ್ಕೂ ಹೆಚ್ಚು ಅಪರಾಧಗಳು ಸಂಭವಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ ಮಕ್ಕಳ ವಿರುದ್ಧದ ಅಪರಾಧಗಳು ಶೇಕಡ 200ರಷ್ಟು ಹೆಚ್ಚಳ ಕಂಡಿವೆ.

ಕ್ರೈ: ಚೈಲ್ಡ್ ರೈಟ್ಸ್ ಅಂಡ್ ಯೂ (ಕ್ರೈ), ಪ್ರತಿ ಮಗುವಿಗೂ ಬಾಲ್ಯದ ಹಕ್ಕು ಅಂದರೆ ಬಾಲ್ಯಜೀವನದ, ಕಲಿಕೆಯ, ಬೆಳೆಯುವ ಮತ್ತು ಆಡುವ ಹಕ್ಕು ಇದೆ ಎಂಬ ತತ್ವದ ಮೇಲೆ ನಂಬಿಕೆ ಇರುವ ಭಾರತೀಯ ಸರ್ಕಾರೇತರ ಸಂಸ್ಥೆ. ನಾಲ್ಕು ದಶಕಗಳಿಂದ ಕ್ರೈ ಮತ್ತು ಅದರ 850 ಉಪಕ್ರಮಗಳು ಭಾರತದ 23 ರಾಜ್ಯಗಳ ಎರಡು ಲಕ್ಷಕ್ಕೂ ಅಧಿಕ ಸೌಲಭ್ಯವಂಚಿತ ಮಕ್ಕಳ ಬದುಕಿನಲ್ಲಿ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಮಕ್ಕಳ ಪೋಷಕರು ಹಾಗೂ ಸಮುದಾಯಗಳ ಜತೆ ಕಾರ್ಯ ನಿರ್ವಹಿಸಿವೆ.

Comments are closed.