ಕರ್ನಾಟಕ

ಕೆ.ಆರ್​​ ಪೇಟೆ ಉಪಚುನಾವಣೆ; ಇಕ್ಕಟ್ಟಿನಲ್ಲಿ ಸುಮಲತಾ

Pinterest LinkedIn Tumblr


ಬೆಂಗಳೂರು(ಸೆ.10): ಕರ್ನಾಟಕದ ಉಪಚುನಾವಣೆಗೆ ಕೇಂದ್ರ ಚುನಾವಣೆ ಆಯೋಗವೂ ದಿನಾಂಕ ನಿಗದಿ ಘೋಷಿಸಿದೆ. ಮುಂಬರುವ ಡಿಸೆಂಬರ್​​​ 5ನೇ ತಾರೀಕಿನಂದು ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಪೈಕಿ ಮಂಡ್ಯದ ಕೆ.ಆರ್​​ ಪೇಟೆ ಮಾತ್ರ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಾಲಿಗೆ ಪ್ರತಿಷ್ಠೆ ಕಣವಾಗಿದೆ. ಈ ಮಧ್ಯೆ ಪಕ್ಷೇತರ ಸಂಸದೆ ಸುಮಲತಾರಿಗೆ ಮಾತ್ರ ಕೆ.ಆರ್​​ ಪೇಟೆ ಉಪಚುನಾವಣೆ ತಲೆನೋವಾಗಿ ಪರಿಣಮಿಸಿದೆ.

ಕೆ.ಆರ್​​ ಪೇಟೆ ಉಪಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಯಾರಿಗೆ ಬೆಂಬಲ ನೀಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಲೋಕಸಭಾ ಚುನಾವಣೆಯಲ್ಲಿ ಸುಮಲತಾರಿಗೆ ಬಿಜೆಪಿ ಅಧಿಕೃತ ಬೆಂಬಲ ನೀಡಿದರೆ, ಕಾಂಗ್ರೆಸ್​​ನ ಶೇಕಡ 90ರಷ್ಟು ಮಂದಿ ಅವರ ಗೆಲುವಿಗೆ ಶ್ರಮಿಸಿದ್ದರು. ಫಲಿತಾಂಶದ ಬಳಿಕ ಯಾವ ಪಕ್ಷವನ್ನು ಸುಮಲತಾ ಅಂಬರೀಶ್ ಸೇರಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಸುಮಲತಾ ಅಂಬರೀಶ್ ಋಣಕ್ಕೆ ಕಟ್ಟುಬಿದ್ದು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೋ, ಇಲ್ಲವೇ ಚುನಾವಣೆಯಲ್ಲಿ ಬೆಂಬಲಿಸಿದ್ದ ಬಿಜೆಪಿಗೆ ಬೆಂಬಲ ನೀಡಬೇಕೋ ಎಂದು ಗೊಂದಲಕ್ಕೆ ಸಿಲುಕಿದ್ದಾರೆ.

ಈಗಾಗಲೇ ಸಂಸದೆ ಸುಮಲತಾ ಅಂಬರೀಶ್ ನಮಗೇ ಬೆಂಬಲ ನೀಡಲಿದ್ದಾರೆ ಎಂದು ಕಾಂಗ್ರೆಸ್​​ನ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್​​​​ ಹೇಳಿದ್ದಾರೆ. ಈ ಹಿಂದೆಯೇ ನ್ಯೂಸ್​​18 ಜೊತೆಗೆ ಮಾತಾಡಿದ್ದ ಕೆ.ಆರ್​​ ಪೇಟೆ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್​​​, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶರ ಗೆಲುವಿಗಾಗಿ ಶ್ರಮಿಸಿದ್ದೇವೆ. ಸುಮಲತಾರನ್ನು ಕಾಂಗ್ರೆಸ್​​ ಅಭ್ಯರ್ಥಿಯೇ ಎಂದು ಭಾವಿಸಿ ಇಡೀ ಪಕ್ಷ ಜೆಡಿಎಸ್ ಅಭ್ಯರ್ಥಿ​ ವಿರುದ್ಧ ಟೊಂಕ ಕಟ್ಟಿ ನಿಂತು ಗೆಲ್ಲಿಸಿದ್ದೇವೆ. ಹಾಗಾಗಿ ನಾವು ಕೇಳದಿದ್ದರೂ ಕಾಂಗ್ರೆಸ್​ಗೆ ಬೆಂಬಲ ನೀಡಬೇಕಾದದ್ದು ಅವರ ಜವಾಬ್ದಾರಿ ಎಂದು ಹೇಳಿದ್ದಾರೆ.

ಸುಮಲತಾ ಅಂಬರೀಶ್​​ ಗೆಲುವಿಗೆ ಕಾಂಗ್ರೆಸ್​​ನವರೇ ಕಾರಣ. ಅಂದಿನ ಸನ್ನಿವೇಶದಲ್ಲಿ ಅವರ ಬೆಂಬಲಕ್ಕೆ ನಿಂತವರು ನಾವೇ. ಈಗ ನಮ್ಮ ಬೆಂಬಲಕ್ಕೆ ಬರೋದು-ಬಿಡೋದು ಅವರಿಗೆ ಬಿಟ್ಟ ವಿಚಾರ. ಆದರೂ, ನಾವು ಕಾಂಗ್ರೆಸ್​​ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಕೇಳುತ್ತೇವೆ. ಸುಮಲತಾ ಅವರು ನಮಗೇ ಬೆಂಬಲ ನೀಡ್ತಾರೇ ಎಂಬ ನಂಬಿಕ ಇದೆ ಎಂದು ಕಳೆದ ವಿಧಾನಸಭೆ ಚುನಾವಣೆಯ ಕೆ.ಆರ್​​​ ಪೇಟೆ ಕಾಂಗ್ರೆಸ್​​ನ ಪರಾಜಿತ ಅಭ್ಯರ್ಥಿ ಬಿ.ಕೆ ಚಂದ್ರಶೇಖರ್​​​​​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ​

ಕೆಆರ್ ಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯೋಜಿಸಿದೆ. ಒಂದು ವೇಳೆ, ಸುಪ್ರೀಂ ಕೋರ್ಟ್​ನಲ್ಲಿ ನಾರಾಯಣ ಗೌಡರು ಅನರ್ಹತೆಯಿಂದ ಬಚಾವ್ ಆದಲ್ಲಿ ಅವರೇ ಅಭ್ಯರ್ಥಿಯಾಗುತ್ತಾರೆ. ಆದರೆ, ಅವರ ಅನರ್ಹತೆಯ ವಿಚಾರ ಇತ್ಯರ್ಥವಾಗದಿದ್ದರೆ, ಅಥವಾ ಅವರ ಶಾಸಕತ್ವದ ಅನರ್ಹತೆಯನ್ನು ಕೋರ್ಟ್ ಎತ್ತಿಹಿಡಿದರೆ ಪರ್ಯಾಯ ವ್ಯಕ್ತಿಯೊಬ್ಬರನ್ನು ಕ್ಷೇತ್ರದಿಂದ ಕಣಕ್ಕಿಳಿಸುವುದು ನಿಶ್ಚಿತ. ಆದರೆ, ಬಿಜೆಪಿಯ ಬೇರು ಗಟ್ಟಿ ಇಲ್ಲದ ಈ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂಬುದು ಪಕ್ಷಕ್ಕೆ ತಲೆನೋವಾಗಿರುವ ಸಂಗತಿ.

ಮೂಲಗಳ ಪ್ರಕಾರ, ನಾರಾಯಣ ಗೌಡರು ಸ್ಪರ್ಧಿಸದೇ ಹೋಗುವ ಪರಿಸ್ಥಿತಿ ಬಂದರೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕಿರಿಯ ಮಗ ಬಿ.ವೈ. ವಿಜಯೇಂದ್ರ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ. ಕೆಆರ್ ಪೇಟೆಯಲ್ಲಿ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳೂ ಇದ್ದಾರೆ. ಆದರೆ, ಅವರ್ಯಾರೂ ಕೂಡ ನಾರಾಯಣಗೌಡ ಅಥವಾ ವಿಜಯೇಂದ್ರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿಲ್ಲ. ಒಬ್ಬ ಟಿಕೆಟ್ ಆಕಾಂಕ್ಷಿ ಬೂಕಳ್ಳಿ ಮಂಜು ಅವರು ವಿಜಯೇಂದ್ರ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ಇತ್ತ ಕೆ.ಆರ್​​ ಪೇಟೆ ಜೆಡಿಎಸ್​​ ಭದ್ರಕೋಟೆ. ಇಲ್ಲಿಯೂ ಟಿಕೆಟ್​​ಗಾಗಿ ಸ್ಥಳೀಯ ಜೆಡಿಎಸ್​​​ ಕಾರ್ಯಕರ್ತರ ನಡುವೇ ಕಿತ್ತಾಟ ಶುರುವಾಗಿದೆ. ಟಿಕೆಟ್​ ಆಕಾಂಕ್ಷಿಗಳು ಹೆಚ್ಚಾದ ಕಾರಣ ಈ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬುದು ದೊಡ್ಡಗೌಡರಿಗೆ ಸವಾಲಾಗಿದೆ. ಆಕಾಂಕ್ಷಿಗಳ ರೇಸ್​ನಲ್ಲಿ ಬಿ.ಎಲ್​.ದೇವರಾಜು, ಬಸ್​ ಕೃಷ್ಣೇಗೌಡ, ಮಂಜುನಾಥ್, ಕೆ.ಟಿ. ಗಂಗಾಧರ್​, ಕಿಕ್ಕೇರಿ ಪ್ರಭಾಕರ್​ ಇದ್ದಾರೆ. ಈಗ ಇವರಲ್ಲಿ ಯಾರಿಗೆ ಟಿಕೆಟ್​ ನೀಡಬೇಕು ಎಂದು ಎಚ್​ಡಿಡಿ ಯೋಚಿಸುತ್ತಿದ್ದಾರೆ.

Comments are closed.