ಕರ್ನಾಟಕ

ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಬಳ್ಳಾರಿ ನಗರ ಬಂದ್

Pinterest LinkedIn Tumblr


ಬಳ್ಳಾರಿ: ಗಣಿನಾಡು ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ಮಾಡಲು ಹೊರಟಿರುವ ಸರ್ಕಾರ ನಡೆಯನ್ನು ವಿರೋಧಿಸಿ ಬಳ್ಳಾರಿ ನಗರ ಬಂದ್ ಗೆ ಕರೆ ನೀಡಲಾಗಿದೆ.

ಬಂದ್ ಗೆ ಅಖಂಡ ಬಳ್ಳಾರಿ ಜಿಲ್ಲಾ ಸಮಿತಿ ಕರೆ ನೀಡಿದ್ದು ,ನಗರದ ರಾಯಲ್ ವೃತ್ತದಲ್ಲಿ ಬೃಹತ್ ಹೋರಾಟ ನಡೆಸಲಾಗುತ್ತಿದೆ. ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು ಸೇರಿ 25ಕ್ಕೂ ಹೆಚ್ಚು ಸಂಘ ಸಂಸ್ಥೆಗಳು, ಸ್ವಾಮೀಜಿಗಳು, ಚೇಂಬರ್ ಆಫ್ ಕಾರ್ಮಸ್ ಬಂದ್‍ಗೆ ಬೆಂಬಲ ನೀಡಿವೆ. ಬೆಳಗ್ಗೆ 6 ಗಂಟೆಗೆ ರಸ್ತೆಗಿಳಿದ ಪ್ರತಿಭಟನಾ ನಿರತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಗಡಿಗಿ ಚನ್ನಪ್ಪ ವೃತ್ತದಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಂದ್ ಬಗ್ಗೆ ಮೊದಲೇ ಜಾಗೃತಿ ಮೂಡಿಸಿದ್ದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ದೂರದೂರುಗಳಿಂದ ಬರುವ ಬಸ್ ಬೆಳಗಿನ ಜಾವವೇ ನಿಲ್ದಾಣ ಸೇರಿದ್ದವು. ಇನ್ನು ಚಿತ್ರಮಂದಿರ, ವಾಣಿಜ್ಯ ಮಳಿಗೆ, ಅಂಗಡಿ ಮುಂಗಟ್ಟುಗಳೆಲ್ಲವೂ ಸ್ವಯಂ ಪ್ರೇರಣೆಯಿಂದ ಮುಚ್ಚಿದ್ದವು. ಖಾಸಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಾಲಿಕೆ ಕಚೇರಿ ಮೇಲಿನ ಮೊಬೈಲ್ ಟವರ್ ಹತ್ತಿ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ವಿಜಯನಗರ ಜಿಲ್ಲೆ ರಚನೆಗೆ ಬೆಂಬಲಿಸಿ ಅನರ್ಹ ಶಾಸಕ ಆನಂದ್ ಸಿಂಗ್ ಬೆಂಬಲಿಸಿದ ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮನೆಗೆ ಪ್ರತಿಭಟನಾ ನಿರತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಜೊತೆಗೆ ಆನಂದ್ ಸಿಂಗ್ ಪೋಟೋಗಳಿಗೆ ಚಪ್ಪಲಿ ಹಾರ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಕೊಂಡಯ್ಯ ವಿಜಯನಗರ ಜಿಲ್ಲೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲು ಇದೇ ವೇಳೆ ಒತ್ತಾಯಿಸಿದ ಘಟನೆಯೂ ನಡೆಯಿತು.

ಪ್ರತಿಭಟನೆಯಲ್ಲಿ ರೈತ ಸಂಘದದ ಪುರುಷೋತ್ತಮಗೌಡ, ಜಿಒಂ ಸದಸ್ಯರಾದ ಮುಂಡ್ರಿಗಿ ನಾಗರಾಜ್, ಕನ್ನಡಪರ ಸಂಘಟನೆಗಳ ಮುಖಂಡರಾದ ಎರ್ರಿಸ್ವಾಮಿ, ಬಿ.ಎಂ.ಪಾಟೀಲ್, ಕೊಳಗಲ್ಲು ಅಂಜಿನಿ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗಿಯಾಗಿದ್ದರು.

Comments are closed.