
ಬೆಳಗಾವಿ(ಸೆ.23): ಪ್ರವಾಹ ಪೀಡಿತ ರೈತರಿಗೆ ಬ್ಯಾಂಕ್ ನೋಟಿಸ್ ನೀಡದಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಆದರೆ ಈ ಆದೇಶವನ್ನೂ ಲೆಕ್ಕಿಸದೇ ಬ್ಯಾಂಕಿನಿಂದ ಮತ್ತೆ ಕಿರುಕುಳ ಮುಂದುವರೆದಿದ್ದು,ಇಬ್ಬರು ಅನ್ನದಾತರಿಗೆ ಕೊಲ್ಕತ್ತಾ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದ ರೈತರಾದ ನೀಲಕಂಠ ಲಕ್ಕನ್ನವರ ಹಾಗೂ ನಿಂಗಪ್ಪ ಲಕ್ಕಣ್ಣವರ್ ಎನ್ನುವ ಇಬ್ಬರು ರೈತರಿಗೆ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ. ಕೊಲ್ಕತ್ತಾ ನ್ಯಾಯಾಲಯದ ಆದೇಶದ ಮೇರೆಗೆ ರಾಮದುರ್ಗ ಠಾಣಾ ಪೋಲಿಸರು ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದಾರೆ. ಇದರಿಂದ ಇಬ್ಬರು ರೈತರು ಕಂಗಾಲಾಗಿದ್ದಾರೆ.
ಮಲಪ್ರಭಾ ನದಿಯ ಪ್ರವಾಹದಲ್ಲಿ ಹಂಪಿಹೊಳಿ ಗ್ರಾಮ ಪ್ರವಾಹದಲ್ಲಿ ಸಿಲುಕಿತ್ತು. ಇದರಿಂದಾಗಿ ರೈತರಾದ ನೀಲಕಂಠ ಲಕ್ಕನ್ನವರ ಅವರು ಲಕ್ಷಾಂತರ ಮೌಲ್ಯದ ಬೆಳೆ ಕಳೆದುಕೊಂಡಿದ್ದಾರೆ.
ಐದು ವರ್ಷದ ಹಿಂದೆ ಎಲ್ ಆ್ಯಂಡ್ ಟಿ ಫೈನಾನ್ಸ್ ನಿಂದ ಇಬ್ಬರು ರೈತರು ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ನಿಗದಿತ ಸಮಯದಲ್ಲಿ ಎರಡು ಕಂತು ರೈತರು ಪಾವತಿಸಿದ್ದರು.
ನಂತರ ಬರದಿಂದ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ರೈತರ ಟ್ರ್ಯಾಕ್ಟರ್ ನ್ನು ಬ್ಯಾಂಕ್ ಸಿಬ್ಬಂದಿಗಳು ಜಪ್ತಿ ಮಾಡಿದ್ದರು ಎನ್ನಲಾಗಿದೆ.
ರೈತರಿಗೆ ಯಾವುದೇ ವಾರೆಂಟ್, ನೋಟಿಸ್ ನೀಡದಂತೆ ಬ್ಯಾಂಕುಗಳಿಗೆ ತಾಕೀತು ಮಾಡಿದ್ದರೂ ಸಹ ಬ್ಯಾಂಕ್ ಅಧಿಕಾರಿಗಳು ಜಿಲ್ಲಾಡಳಿತ ಹಾಗೂ ಸರಕಾರದ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ವಾರೆಂಟ್ ಜಾರಿ ಮಾಡಿಸಿದ್ದಾರೆ. ಕಳೆದ ವಾರವಷ್ಟೇ ಸವದತ್ತಿ ರೈತನಿಗೆ ಬಂಧನ ವಾರೆಂಟ್ ಜಾರಿಯಾಗಿತ್ತು.
Comments are closed.