ಕರ್ನಾಟಕ

ನೀವು ಹೇಳಿದ್ದಂತೆ ನಡೆದುಕೊಳ್ಳಿ. ಇಲ್ಲವೇ ನಮಗೆ ತೊಟ್ಟು ವಿಷ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ: ಸಿಎಂ ಯಡಿಯೂರಪ್ಪ ವಿರುದ್ಧ ಅನರ್ಹರ ಶಾಸಕರ ಆಕ್ರೋಶ

Pinterest LinkedIn Tumblr

ಬೆಂಗಳೂರು : ಕೇಂದ್ರ ಚುನಾವಣಾ ಆಯೋಗ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಅನರ್ಹ ಶಾಸಕರ ಜೊತೆಗೆ ದೆಹಲಿಗೆ ತೆರಳಿದ್ದಾರೆ.

ಇದಕ್ಕೂ ಮುನ್ನ ಉಪಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅನರ್ಹ ಶಾಸಕರೊಂದಿಗೆ ಸಿಎಂ ಯಡಿಯೂರಪ್ಪ ಅರಣ್ಯ ಇಲಾಖೆಯ ಗೆಸ್ಟ್​ ಹೌಸ್​ನಲ್ಲಿ ಸಭೆ ನಡೆಸಿದರು. ಈ ವೇಳೆ ಬಿಎಸ್​ ವೈ ಹಾಗೂ ಆಪರೇಷನ್ ಕಮಲದ ರೂವಾರಿಗಳ ವಿರುದ್ಧ ಅನರ್ಹರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ನಡೆಯ ವಿರುದ್ಧ ಏರುಧ್ವನಿಯಲ್ಲಿ ಮಾತನಾಡಿದ ಕೆಲ ಅನರ್ಹ ಶಾಸಕರು, ಮೊದಲು ನೀವು ಹೇಳಿದ್ದಂತೆ ನಡೆದುಕೊಳ್ಳಿ. ಇಲ್ಲವೇ ನಮಗೆ ತೊಟ್ಟು ವಿಷ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಆಕ್ರೋಶ ಹೊರಹಾಕಿದರು.ಈ ವೇಳೆ ನಾನೇನು ಮಾಡಬೇಕು ಹೇಳಿ ಅನರ್ಹ ಶಾಸಕರನ್ನು ಸಮಾಧಾನ ಪಡಿಸಲು ಯಡಿಯೂರಪ್ಪ ಪ್ರಯತ್ನಿಸಿದರು.

ನೀವು ನಮ್ಮ ಜೊತೆ ದೆಹಲಿಗೆ ಬಂದು ಕಾನೂನು ಹೋರಾಟಕ್ಕೆ ಸಹಾಯ ಮಾಡಬೇಕು. ಕಾನೂನು ಹೋರಾಟದಲ್ಲಿ ಏಕಾಂಗಿ ಆಗಿದ್ದೇವೆ ಎಂಬ ಮನೋಭಾವನೆ ನಮ್ಮಲ್ಲಿ ಬರುವುದು ಬೇಡ. ನಮ್ಮ ಜೊತೆ ದೆಹಲಿಗೆ ಬಂದು ಕಾನೂನು ಹೋರಾಟ ಬಗ್ಗೆ ದೆಹಲಿ ಮಟ್ಟದ ವಕೀಲರ ಜೊತೆ ಚರ್ಚಿಸಿ ಎಂದು ಅನರ್ಹರು ಶಾಸಕರು ಸಿಎಂ ಅವರಿಗೆ ಕೇಳಿಕೊಂಡಿದ್ದಾರೆ.

ಇದೇ ವೇಳೆ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಬೆಂಗಳೂರಿಗೆ ಬರುವಾಗ ನಾನು ದೆಹಲಿಗೆ ಬರೋದು ಸೂಕ್ತವೇ ಎಂದು ಬಿಎಸ್ ವೈ ಪ್ರಶ್ನಿಸಿದರು. ರಾಷ್ಟ್ರೀಯ ನಾಯಕರಿಗೂ ನಮ್ಮ ವಿಚಾರ ಗೊತ್ತು. ನಮಗಾಗಿ ದೆಹಲಿಗೆ ಬಂದರೆ ಹೈಕಮಾಂಡ್ ನಾಯಕರು ಮರುಮಾತಡಲ್ಲ. ನೀವು ಬರಲೇಬೇಕು ಎಂಬ ಅನರ್ಹರ ಮಾತಿಗೆ ಮಣಿದ ಸಿಎಂ ಏಕಾಏಕಿ ದೆಹಲಿಗೆ ಪ್ರಯಾಣ ಬೆಳೆಸುವ ತೀರ್ಮಾನಕ್ಕೆ ಬಂದಿದ್ದಾರೆ.

ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಹಾಗೂ ಸಿಎಂ ಅವರ ದೆಹಲಿ ಪ್ರಯಾಣ ಹೊಸ ಚರ್ಚೆಗೆ ಕಾರಣವಾಗಿದೆ.

Comments are closed.