ಕರ್ನಾಟಕ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸ್ಪರ್ಧೆಯಿಲ್ಲ: ದಿನೇಶ್ ಗುಂಡೂರಾವ್

Pinterest LinkedIn Tumblr


ಬೆಂಗಳೂರು: ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲೂ, ಬಿಜೆಪಿ ವಾಮಮಾರ್ಗ ಹಾದಿ ಇಡಿದಿದೆ. ಬಿಜೆಪಿ ನೂರಾರು ಕೋಟಿ ಖರ್ಚು ಮಾಡಿ ಷಡ್ಯಂತ್ರದಿಂದ ಸರ್ಕಾರ ರಚನೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಅವರು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದರು.

ನಗರದಲ್ಲಿಂದು ಅನರ್ಹ ಶಾಸಕರ ಬಗ್ಗೆ ಮಾತನಾಡಿದ ಅವರು, ಅವರ ಭವಿಷ್ಯ ಏನು ಅಂತ ಗೊತ್ತಿಲ್ಲ, ಮಸ್ಕಿ ಹಾಗೂ ಆರ್.ಆರ್. ನಗರದ ಅನರ್ಹ ಶಾಸಕರು ಅನಾಥರಾಗಿದ್ದಾರೆ. ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದರು.

ಇನ್ನು ಯಡಿಯೂರಪ್ಪ ಅನರ್ಹ ಶಾಸಕರ ಸಭೆ ನಡೆಸಿರುವ ಬಗ್ಗೆ ಮಾತನಾಡಿದ ಅವರು, ಅಡ್ವೋಕೇಟ್ ಜನರಲ್ ಜೊತೆ ಕುಳಿತಿದ್ದಾರೆ. ಇದು ಏನನ್ನು ತೋರಿಸುತ್ತದೆ(?) ಸರ್ಕಾರ ಬೀಳಿಸಲು ಅವರು ಷಡ್ಯಂತ್ರ ಮಾಡಿದರು. ಇವತ್ತಿನ ಸಭೆ ಕೂಡ ಸುಪ್ರೀಂಕೋರ್ಟ್​ನಲ್ಲಿ ಪ್ರಬಲ ಸಾಕ್ಷಿಯಾಗುತ್ತದೆ ಎಂದು ಅವರು ತಿಳಿಸಿದರು.

ಅನರ್ಹ ಶಾಸಕರ ಬಗ್ಗೆ ಸೋಮವಾರ ಪ್ರಕರಣ ಕೋರ್ಟಿಗೆ ಬರಲಿದೆ, ಈ 15 ಅನರ್ಹ ಶಾಸಕರು ಸ್ಪರ್ಧೆ ಮಾಡುವಂತಿಲ್ಲ, ಸಂವಿಧಾನಕ್ಕೆ ಅಪಚಾರ ಮಾಡಿದವರಿಗೆ ಕಾನೂನಿನ ಮೂಲಕ ತಕ್ಕ ಶಾಸ್ತಿ ಆಗಬೇಕು. ಜನರಿಂದಲೂ ಇಂತಹ ಶಾಸಕರು ತಿರಸ್ಕಾರ ಆಗಬೇಕು ಎಂದು ದಿನೇಶ್ ಗುಂಡೂರಾವ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಅನರ್ಹ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳ ಆಯ್ಕೆ ಮಾಡಿ ಘೋಷಿಸುತ್ತೇವೆ. ನಾವು ಎಲ್ಲ ಕ್ಷೇತ್ರಗಳಲ್ಲಿ ಈಗಾಗಲೇ ತಯಾರಿ ಮಾಡಿಕೊಂಡಿದ್ದೇವೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸ್ಪರ್ಧೆಯಿಲ್ಲ, ನಾವು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ ಎಂದ ಅವರು, ಕೆಲವು ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ನೇರ ಸ್ಪರ್ಧೆ ಇದೆ. ಜೆಡಿಎಸ್​ಗೆ ಬಹಳ ಕಡೆ ಬೇಸ್ ಇಲ್ಲ ಹೀಗಾಗಿ ಮೈತ್ರಿ ಸ್ಪರ್ಧೆ ಬೇಡ ಎಂದು ತೀರ್ಮಾನಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಅವರು ಸ್ಪಷ್ಟನೆ ನೀಡಿದರು.

Comments are closed.