ಕರ್ನಾಟಕ

ಸೆ.25ಕ್ಕೆ ಡಿಕೆಶಿ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

Pinterest LinkedIn Tumblr

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ತೀರ್ಪನ್ನು ದೆಹಲಿ ವಿಶೇಷ ಕೋರ್ಟ್ ಸೆಪ್ಟೆಂಬರ್ 25ಕ್ಕೆ ಕಾಯ್ದಿರಿಸಿದೆ.

ಡಿಕೆ ಶಿವಕುಮಾರ್‌ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ರೋಸ್ ಅವೆನ್ಯೂ ನ್ಯಾಯಾಲಯದ ಸೆಪ್ಟೆಂಬರ್‌ 25ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

ಕಳೆದ ಮೂರು ದಿನಗಳಿಂದ ನಡೆದ ವಾದ-ಪ್ರತಿವಾದ ಇಂದು ಅಂತ್ಯಗೊಂಡಿದ್ದು, ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹರ್‌ ಬುಧವಾರಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ.

ಜಾರಿ ನಿರ್ದೇಶನಾಲಯ(ಇಡಿ)ದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್ ಅವರು​, ಆದಾಯ ತೆರಿಗೆ ಕಾಯ್ದೆ ಅಕ್ರಮ ಹಣವನ್ನು ಸಕ್ರಮ ಮಾಡಲು ಇರುವುದಲ್ಲ. ಆದರೆ, ಡಿಕೆಶಿ ಮಾಡಿರುವುದು ಅನೈತಿಕ ಕೃತ್ಯ. ಅಕ್ರಮ ಹಣವನ್ನು ಸಕ್ರಮ ಎಂದು ಬಿಂಬಿಸುವ ಯತ್ನ ಮಾಡಿದ್ದಾರೆ. ಆಸ್ತಿಗೆ ತೆರಿಗೆ ಕಟ್ಟಿ ತನ್ನ ಹಣವೆಲ್ಲ ಸಕ್ರಮ ಸಂಪಾದನೆಯಿಂದ ಗಳಿಸಿದ್ದು ಎಂದು ಪ್ರತಿಪಾದಿಸುತ್ತಿದ್ದಾರೆ. ವೈಟ್ ಮನಿ ಯಾವಾಗಲೂ ವೈಟ್ ಆಗಿರುತ್ತದೆ. ಕಪ್ಪು ಹಣ ಕಪ್ಪು ಹಣವೇ ಆಗಿರುತ್ತದೆ. ಸೆಕ್ಷನ್ 9 ಪ್ರಕಾರ ಅಕ್ರಮ ಆಸ್ತಿಯನ್ನು ಜಪ್ತಿ ಮಾಡಿ ಸರ್ಕಾರದ ವಶಕ್ಕೆ ಒಪ್ಪಿಸಬೇಕು. ಇದು ದೇಶದ ಆಸ್ತಿ, ಸರ್ಕಾರದ ಆಸ್ತಿ. ಒಬ್ಬ ವ್ಯಕ್ತಿ ಈ ಆಸ್ತಿ ತನಗೆ ಸೇರಿದ್ದು ಎಂದು ಅದನ್ನು ಅನುಭವಿಸುವಂತಿಲ್ಲ. ದೇಶದ ಪ್ರತಿಯೊಬ್ಬನಿಗೂ ಈ ಆಸ್ತಿಯ ಮೇಲೆ ಅಧಿಕಾರ ಇದೆ ಎಂದು ಪ್ರತಿಪಾದಿಸಿದರು.

ಆರೋಪಿ ಡಿಕೆ ಶಿವಕುಮಾರ್ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದ ನಟರಾಜ್ ಅವರು, ದಿನದಲ್ಲಿ 8-9 ಗಂಟೆ ವಿಚಾರಣೆ ನಡೆಸಿದ್ದರೂ ಉಪಯೋಗವಾಗಿದ್ದು 4 ಗಂಟೆ ಮಾತ್ರ. ತಮಗೆ ಗೊತ್ತಿದ್ದ ಮೂಲಭೂತ ವಿಷಯಗಳ ಬಗ್ಗೆಯೂ ಡಿಕೆ ಮಾಹಿತಿ ಹಂಚಿಕೊಂಡಿಲ್ಲ. ತನಿಖೆಗೆ ಸಂಪೂರ್ಣ ಅಸಹಕಾರ ತೋರಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ನೀಡದಂತೆ ಮನವಿ ಮಾಡಿದರು.

ಡಿಕೆ ಶಿವಕುಮಾರ್ ಗೆ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು.

Comments are closed.