ಕರ್ನಾಟಕ

ನನ್ನನ್ನು ಸೇರಿ 184 ಜನರಿಗೆ ಇಡಿ ನೋಟಿಸ್ ನೀಡಿದೆ; ಲಕ್ಷ್ಮಿ ಹೆಬ್ಬಾಳ್ಕರ್

Pinterest LinkedIn Tumblr


ಬೆಂಗಳೂರು (ಸೆ.18): ಅಕ್ರಮ ಹಣ ದೊರೆತ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್​ ಪ್ರಬಲ ನಾಯಕ ಡಿಕೆ ಶಿವಕುಮಾರ್​ ಅವರನ್ನು ವಿಚಾರಣೆ ನಡೆಸುತ್ತಿದೆ. ಡಿಕೆಶಿ ಆಪ್ತರಲ್ಲೊಬ್ಬರಾದ ಲಕ್ಷ್ಮಿ ಹೆಬ್ಬಾಳ್ಕರ್​ಗೂ ಇಡಿ ನೊಟೀಸ್​ ನೀಡಿದೆ ಎನ್ನಲಾಗಿತ್ತು. ಈ ವಿಚಾರವನ್ನು ನ್ಯೂಸ್​18 ಕನ್ನಡಕ್ಕೆ ಖಚಿತ ಪಡಿಸಿರುವ ಲಕ್ಷ್ಮೀ, ಅಚ್ಚರಿಯ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ.

ಒಬ್ಬರಲ್ಲ, ಇಬ್ಬರಲ್ಲ ಇಡಿ ಪಟ್ಟಿಯಲ್ಲಿ 184 ಜನ ಇದ್ದಾರಂತೆ. ಈ ಎಲ್ಲರಿಗೂ ಇಡಿ ನೋಟೀಸ್​ ನೀಡಿದೆ. “184 ಜನರಿಗೆ ಇಡಿ ನೋಟಿಸ್​ ನೀಡಿದೆ. ಅವರಲ್ಲಿ ನಾನು ಒಬ್ಬ ಅಷ್ಟೆ,” ಎಂದು ಹೇಳುವ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್​ ಅಚ್ಚರಿ ಮೂಡಿಸಿದ್ದಾರೆ.

“ಸೆಪ್ಟೆಂಬರ್​ 14ಕ್ಕೆ ಇಡಿ ನೋಟಿಸ್​ ಬಂದಿತ್ತು. ಟೈಂ ಕೇಳಿದ್ದು ನಿಜ. ಮನೆಯಲ್ಲೇ ವಿಚಾರಣೆಗೆ ಮನವಿ ಮಾಡಿದ್ದೇನೆ. ಇಡಿ ಅವರು ವಿಚಾರಣೆಗೆ ಕರೆದಿದ್ದಾರೆ. ಬೆಂಗಳೂರು, ಬೆಳಗಾವಿಯಲ್ಲೇ ವಿಚಾರಣೆಗೆ ಮನವಿ ಮಾಡಿದ್ದೇನೆ. ನನಗೆ ಈ ಬಗ್ಗೆ ಭಯ ಇಲ್ಲ. 2 ಸಲ ಐಟಿ ದಾಳಿಯಾದಾಗ ಏನೂ ಸಿಕ್ಕಿಲ್ಲ. ಡಿಕೆಶಿ ಜೊತೆ ವ್ಯವಹಾರದ ಬಗ್ಗೆ ದಾಖಲೆ ಇರೋದು ಗೊತ್ತಿಲ್ಲ. ಡಿಕೆಶಿ ನನ್ನ ರಾಜಕೀಯ ಗುರು,” ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೊಂಡಿದ್ದಾರೆ.

ಐಟಿ ದಾಳಿಗೆ ಒಳಗಾಗುವಷ್ಟು ದೊಡ್ಡ ವ್ಯವಹಾರವನ್ನು ಲಕ್ಷ್ಮಿ ಮಾಡಿಲ್ಲವಂತೆ. ಹೀಗಾಗಿ ಕುಟುಂಬ, ಸಹೋದರನ ವ್ಯವಹಾರದ ಬಗ್ಗೆ ಕೇಳಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಬೇನಾಮಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆಯೇ 184 ಜನರಿಗೆ ನೋಟಿಸ್​ ನೀಡಲಾಗಿದೆ ಎಂಬುದು ಮೂಲಗಳ ಮಾಹಿತಿ. ಹೀಗಾಗಿ ಎಲ್ಲರನ್ನೂ ಕರೆದು ಈಗ ಇಡಿ ವಿಚಾರಣೆ ನಡೆಸಲಿದೆ.

ಡಿಕೆಶಿಗೆ ಇಂದು ಮಹತ್ವದ ದಿನ:

ದೆಹಲಿಯ ನಿವಾಸದಲ್ಲಿ ಪತ್ತೆಯಾದ 8.6 ಕೋಟಿ ಪ್ರಕರಣದ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಒಳಪಟ್ಟಿರುವ ಮಾಜಿ ಸಚಿವ, ಕಾಂಗ್ರೆಸ್​ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ಜಾನಮೀನು ಅರ್ಜಿ ವಿಚಾರಣೆಯನ್ನು ಇಂದು ಇಡಿ ವಿಶೇಷ ನ್ಯಾಯಾಲಯ ನಡೆಸಲಿದೆ. ಹೀಗಾಗಿ ಡಿಕೆಶಿ ಪಾಲಿಗೆ ಇಂದು ಮಹತ್ವದ ದಿನವಾಗಿದೆ.

ಏನಿದು ಡಿಕೆಶಿ ಪ್ರಕರಣ?:

ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್​ ಅವರಿಗೆ ಸೇರಿದ ಫ್ಲಾಟ್​ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಡಿಕೆಶಿ ಹಾಗೂ ಆಪ್ತರ ಮನೆಗಳಲ್ಲಿ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಇಡಿ ಸಮನ್ಸ್ ರದ್ದು ಕೋರಿ ಸಚಿವ ಡಿಕೆಶಿ ಹಾಗೂ ಆಪ್ತರು ಅರ್ಜಿ ಸಲ್ಲಿಸಿದ್ದರು. ಹಣದ ಮೂಲದ ಬಗ್ಗೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಇಡಿ ಸಮನ್ಸ್ ನೀಡಿತ್ತು.

Comments are closed.