ಕರ್ನಾಟಕ

ಈ ಶಾಲೆಯೊಳಗೆ ಮಕ್ಕಳಿಗೆ ನಿಗೂಢ ಕಲ್ಲೇಟು!

Pinterest LinkedIn Tumblr


ಗುಳೇದಗುಡ್ಡ (ಬಾದಾಮಿ): ಈ ಶಾಲೆಯೊಳಗೆ ಮಕ್ಕಳು ಬಂದರೆ ಸಾಕು ಎಲ್ಲೆಲ್ಲಿಂದಲೋ ದೊಡ್ಡ ದೊಡ್ಡ ಗಾತ್ರದ ಕಲ್ಲುಗಳು ಬೀಳುತ್ತವೆ. ಭಯದ ವಾತಾವರಣದಲ್ಲೇ ಶಿಕ್ಷಕರು ಪಾಠ ಮಾಡುತ್ತಾರೆ. ಕಿರುಚುತ್ತಲೇ ನೋವಿನಲ್ಲೂ ಮಕ್ಕಳು ಪಾಠ ಕೇಳುತ್ತಾರೆ! ಬಾಗಲಕೋಟೆಯ ಬಾದಾಮಿಯ ಎಂಜಿನವಾರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದೊಂದು ತಿಂಗಳಿಂದ ಮಕ್ಕಳ ಮೇಲೆ ಕಲ್ಲುಗಳು ಬೀಳುತ್ತಿವೆ. ಹೀಗಾಗಿ ಶಾಲೆ ಎಂದರೆ ಮಕ್ಕಳು ಹೆದರುತ್ತಿದ್ದಾರೆ. ಕೈ, ಕಾಲು, ತಲೆಗೆ ಗಾಯವಾಗಿ ನರಳುತ್ತಿದ್ದಾರೆ. ಕೆಲವರು ಜ್ವರ ಬಂದು ಹಾಸಿಗೆ ಹಿಡಿದಿದ್ದಾರೆ. ಕಲ್ಲು ಬೀಳುವ ಮೂಲ ಮಾತ್ರ ಪತ್ತೆಯಾಗಿಲ್ಲ.

1ರಿಂದ 5ನೇ ತರಗತಿಗಳು ನಡೆಯುವ ಈ ಶಾಲೆಯಲ್ಲಿ 24 ವಿದ್ಯಾರ್ಥಿಗಳಿದ್ದು, ಇಬ್ಬರು ಶಿಕ್ಷಕರಿದ್ದಾರೆ. ಗ್ರಾಮಸ್ಥರೇ ಕಾವಲು ಕುಳಿತರೂ ಕಲ್ಲು ಬೀಳುವುದು ನಿಂತಿಲ್ಲ. ಕಿಟಕಿಗಳಿಗೆ ಜಾಳಿಗೆ ಬಡಿಸಿದರೂ ಫ‌ಲ ನೀಡಿಲ್ಲ. ವಿದ್ಯಾರ್ಥಿನಿಯರಿಗೇ ಹೆಚ್ಚಿನ ಪ್ರಮಾಣದ ಕಲ್ಲುಗಳು ಬೀಳುತ್ತಿವೆ.

ಪೊಲೀಸರ ಮುಂದೆಯೇ ಕಲ್ಲೇಟು
ಕಲ್ಲಿನ ಕಾಟದಿಂದ ಬೇಸತ್ತು ಗ್ರಾಮಸ್ಥರು ಬುಧವಾರ ಪೊಲೀಸರಿಗೆ ದೂರು ನೀಡಿದ್ದರು. ಪರಿಶೀಲನೆಗಾಗಿ ಆಗಮಿಸಿದ್ದ ಪೊಲೀಸರ ಎದುರು ಸಹ ಕಲ್ಲುಗಳು ಬಿದ್ದವು!.

ಮಠದಲ್ಲಿ ಕುಳಿತರೂ ಕಲ್ಲೇಟು!
ಕಲ್ಲಿನ ಕಾಟ ತಾಳಲಾರದೆ ಶಿಕ್ಷಕಿ ಜಯಶ್ರೀ ಬಗಾಡೆ, ಮಕ್ಕಳನ್ನು ಕರೆದುಕೊಂಡು ಗ್ರಾಮದ ಒಪ್ಪತ್ತೇಶ್ವರ ಮಠ ಹಾಗೂ ಹನುಮಪ್ಪನ ದೇವಸ್ಥಾನದಲ್ಲಿ ಪಾಠ ಮಾಡುತ್ತಿದ್ದಾರೆ. ಬುಧವಾರ ಹನುಮಪ್ಪನ ಗುಡಿಯಲ್ಲಿ ಪಾಠ ಮಾಡುತ್ತಿದ್ದಾಗ ಅರ್ಚನಾ ಹಾಗೂ ಸಂಜನಾ ಎಂಬ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿ ಬಗಾಡೆಯವರಿಗೂ ಕಲ್ಲು ಬಿದ್ದಿದೆ. ಇದರಿಂದ ಭಯಗೊಂಡು ಮಕ್ಕಳು ಶಾಲೆ ಬಿಟ್ಟು ಮನೆಗೆ ತೆರಳಿದ್ದಾರೆ.

ಗ್ರಾಮದ ಶಾಲೆಯಲ್ಲಿ ಕಲ್ಲುಗಳು ಬೀಳುತ್ತಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದ್ದು, ಗ್ರಾಮದ ಜನರಿಗೆ ಸಹಕಾರ ನೀಡುತ್ತೇವೆ. ಅವರಿಗೆ ರಕ್ಷಣೆಯನ್ನೂ ಕೊಡುತ್ತೇವೆ.

Comments are closed.