ಕರ್ನಾಟಕ

ಬಿಜೆಪಿ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿದ್ದ ಅನರ್ಹ ಶಾಸಕರಿಗೆ ನಿರಾಸೆ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂಕೋರ್ಟ್: ಅನರ್ಹ ಶಾಸಕರ ಸ್ಥಿತಿ ಅತಂತ್ರ

Pinterest LinkedIn Tumblr

ಬೆಂಗಳೂರು: ಜೆಡಿಎಸ್‌-ಕಾಂಗ್ರೆಸ್‌ನ ಅನರ್ಹಗೊಂಡ ಶಾಸಕರ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದ್ದು, ಅನರ್ಹರಿಗೆ ಮತ್ತೆ ಹಿನ್ನಡೆಯಾಗಿದೆ. ಜುಲೈ 26 ಹಾಗೂ ಆಗಸ್ಟ್‌ 1 ರಂದು ಶಾಸಕತ್ವದ ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ 17 ಮಂದಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ ಸೋಮವಾರ ನಿರಾಕರಿಸಿದೆ.

ನೂತನ ಸಚಿವರಿಗೆ ಖಾತೆ ಹಂಚಿಕೆ ಮತ್ತು ಡಿಸಿಎಂ ಆಯ್ಕೆ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ಭಾರಿ ಬೆಳವಣಿಗೆ ನಡೆಯುತ್ತಿದ್ದು, ಬಿಜೆಪಿ ನಂಬಿ ರಾಜೀನಾಮೆ ಸಲ್ಲಿಸಿದ್ದ ಶಾಸಕರು ಪರಿತಪಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಶಾಸಕತ್ವದ ಅನರ್ಹತೆಗೆ ಸಂಬಂಧಿಸಿ ತೀರ್ಪು ಹೊರ ಬೀಳುವ ವರೆಗೆ ನೂತನ ಸರಕಾರದಲ್ಲಿ ಸಚಿವ ಸ್ಥಾನ ಹೊಂದುವಂತಿಲ್ಲ. ಒಂದು ವೇಳೆ ಉಪ ಚುನಾವಣೆ ಎದುರಾದರೂ ಸ್ಪರ್ಧಿಸುವಂತಿಲ್ಲ. ಹಾಗಾಗಿ ಹೊಸ ಸರಕಾರದಲ್ಲಿ ಸಚಿವರಾಗುತ್ತೇವೆ, ಉಪ ಮುಖ್ಯಮಂತ್ರಿಯಾಗುತ್ತೇವೆ, ಪ್ರಭಾವಿ ಖಾತೆ ಹೊಂದುತ್ತೇವೆ ಎಂದೆಲ್ಲಾ ಕನಸು ಕಂಡಿರುವ 17 ಅನರ್ಹ ಶಾಸಕರ ಸ್ಥಿತಿ ಅತಂತ್ರಗೊಂಡಿದೆ.

ಪಕ್ಷಾಂತರ ನಿಷೇಧ ಕಾಯಿದೆಯ ಪ್ರಕಾರ, ಅನರ್ಹಗೊಂಡ ಶಾಸಕರು ಹಾಲಿ ವಿಧಾನಸಭೆಯ ಅವಧಿಯ ಮುಗಿಯುವ ವರೆಗೆ ( 2023) ಯಾವುದೇ ರೂಪದಲ್ಲಿ ಸದನವನ್ನು ಪ್ರವೇಶಿಸುವಂತಿಲ್ಲ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಅಂದು ತೀರ್ಪು ನೀಡಿದ್ದರು. ಅಂದರೆ ಮರುಚುನಾವಣೆಗೆ ಸ್ಪರ್ಧಿಸಬಾರದು ಎಂಬ ಆದೇಶ ಇದಾಗಿದ್ದು ಅನರ್ಹ ಶಾಸಕರು ಸ್ಪೀರರ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿದ್ದರು.

Comments are closed.