ಕರ್ನಾಟಕ

ತುಂಗಾಭದ್ರಾ ಅಣೆಕಟ್ಟೆಯಿಂದ ಹೆಚ್ಚಿದ ಹೊರಹರಿವು; ಸಂಪೂರ್ಣ ಜಲಾವೃತಗೊಂಡ ಹಂಪಿ ಕ್ಷೇತ್ರ!

Pinterest LinkedIn Tumblr


ಹಂಪಿ (ಆಗಸ್ಟ್​.12): ಒಂದೆಡೆ ಕೃಷ್ಣೆಯ ಒಡಲಲ್ಲಿ ಪ್ರವಾಹ ತಣ್ಣಗಾಗುತ್ತಿರುವ ಇದೇ ಸಂದರ್ಭದಲ್ಲಿ ತುಂಗಭದ್ರಾ ಬೋರ್ಗರೆಯುತ್ತಿದ್ದು, ವಿಶ್ವಪ್ರಸಿದ್ಧ ಹಂಪಿ ಸ್ಮಾರಕಗಳು ಹಾಗೂ ದೇವಾಲಯಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿವೆ.

ಮಲೆನಾಡಿನಲ್ಲಿ ಕಳೆದ 10 ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ತುಂಗಾ ಹಾಗೂ ಭದ್ರಾ ಎರಡೂ ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ಹೊಸಪೇಟೆಯ ತುಂಗಭದ್ರಾ ಜಲಾಶಯ ಭಾನುವಾರವೇ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಹೆಚ್ಚುವರಿ ನೀರನ್ನು ನಿನ್ನೆ ಸಂಜೆಯಿಂದಲೆ ಅಣೆಕಟ್ಟೆಯ ಎಲ್ಲಾ ಗೇಟುಗಳನ್ನು ತೆಗೆದು ಹೊರಬಿಡಲಾಗುತ್ತಿದೆ.

ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ ನೀರನ್ನು ಹೊರಹರಿಸಲಾಗಿದ್ದು, ಪರಿಣಾಮ ವಿಶ್ವಪ್ರಸಿದ್ಧ ಹಂಪಿಯ ಸ್ಮಾರಕಗಳು, ದೇವಾಲಯಗಳ ಜೊತೆಗೆ ಜನವಸತಿ ಪ್ರದೇಶಗಳು ಸಂಪೂರ್ಣವಾಗಿ ನೀರುಪಾಲಾಗಿವೆ.

ಹಂಪಿಯ ಪ್ರಸಿದ್ಧ ಕ್ಷೇತ್ರ ವಿರೂಪಾಕ್ಷೇಶ್ವರ ದೇವಾಲಯ ಅದರ ಎದುರಿನ ಬಸವಣ್ಣ ಸಾಲು ಮಂಟಪ, ಪುರದಂರದಾಸ ಮಂಟಪ, ಸಾಲುಮಂಟಪ, ನವವೃಂದಾವನ ಹಾಗೂ ಕಂಪ್ಲಿ ಸೇತುವೆ ಪ್ರವಾಹದಿಂದಾಗಿ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಹೀಗಾಗಿ ಪ್ರವಾಸಿಗಳಿಗೆ ತಾತ್ಕಾಲಿಕವಾಗಿ ಹಂಪಿಗೆ ಆಗಮಿಸದಂತೆ ಮಾಹಿತಿ ನೀಡಲಾಗಿದೆ.

ಇದರ ಜೊತೆಗೆ ರಾಮಲಕ್ಷ್ಮಣ, ಯಂತ್ರೋದ್ಧಾರಕ ಆಂಜನೇಯ ರಸ್ತೆ ಮಾರ್ಗ ಸಹ ಕಡಿತಗೊಂಡಿದ್ದು ಶ್ರಾವಣ ಸೋಮವಾರದ ದರುಶನಕ್ಕಾಗಿ ಬಂದ ಭಕ್ತಗಣ ವಿರೂಪಾಕ್ಷನ ದರ್ಶನ ಪಡೆಯದೆ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಹಂಪಿಯ ಅಂಗಳದಲ್ಲೇ ಇರುವ ಎರಡು ಪೊಲೀಸ್ ಠಾಣೆಗಳೂ ಸಹ ಸಂಪೂರ್ಣ ಜಲಾವೃತವಾಗಿದ್ದು, ಪೊಲೀಸರು ಎರಡೂ ಪೊಲೀಸ್ ಠಾಣೆಯ ವಸ್ತುಗಳನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸುವಲ್ಲಿ ನಿರತರಾಗಿದ್ದಾರೆ.

ಕಂಪ್ಲಿ ನಿರಾಶ್ರಿತರ ಕಣ್ಣೀರು:

ತುಂಗಭದ್ರಾ ಜಲಾಶಯದ ನೀರು ಅಪಾಯದ ಮಟ್ಟವನ್ನೂ ಮೀರು ಹರಿಯುತ್ತಿರುವ ಕಾರಣ ಕಂಪ್ಲಿಯ ಜನವಸತಿ ಭಾಗ, ಬಸ್ ನಿಲ್ದಾಣ ಸೇರಿದಂತೆ ಮೊನ್ನೆ ತೆರೆಯಲಾಗಿದ್ದ ಗಂಜಿ ಕೇಂದ್ರ ಸಹ ಮುಳುಗಡೆಯಾಗಿದೆ. ಪರಿಣಾಮ ಎಲ್ಲರನ್ನೂ ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ವಿಪರೀತ ಪ್ರವಾಹದಿಂದಾಗಿ ಕಂಪ್ಲಿಯ 150 ಕುಟುಂಬಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಗಂಜಿ ಕೇಂದ್ರದಲ್ಲಿ ನಿರಾಶ್ರಿತರು ತಮ್ಮ ಮನೆ-ಮಠ ನೆನೆದುಕೊಂಡು ಕಣ್ಣೀರಿಡುತ್ತಿರುವ ದೃಶ್ಯ ಮನಕಲಕಲಕುವಂತಿದೆ. ಅಲ್ಲದೆ, ತಮಗೆ ಬೇರೆಡೆ ನಿವೇಶನ ನೀಡುವಂತೆ ಅವರು ತಹಶೀಲ್ದಾರರ ಬಳಿ ಮೊರೆಯಿಡುತ್ತಿದ್ದಾರೆ. ಇದಕ್ಕೆ ಸ್ಪಂದಿಸಿರುವ ತಹಶೀಲ್ದಾರ್ ರೇಣುಕಾ ಎಲ್ಲರಿಗೂ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Comments are closed.