
ಬೆಳಗಾವಿ: ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿಯೇ ಇದೆ. ಕಳೆದ 10 ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಪ್ರವಾಹ ತಲೆದೋರಿದ್ದು, ನೆರೆ ಸಂತ್ರಸ್ತರು ಪರಿತಪಿಸುತ್ತಿದ್ದಾರೆ. ಈವರೆಗೆ ಸುಮಾರು 10ಕ್ಕೂ ಹೆಚ್ಚು ಮಂದಿ ಮಳೆಗೆ ಬಲಿಯಾಗಿದ್ದಾರೆ.
ಮಹಾಮಳೆಗೆ ಸಿಲುಕಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಪ್ರವಾಸ ಸಂತ್ರಸ್ತರಿಗೆ ಸರ್ಕಾರದಿಂದ ಸಕಲ ಸೌಲಭ್ಯ ನೀಡಲಾಗುತ್ತದೆ. ಯಾರೂ ಹೆದರುವ ಅವಶ್ಯಕತೆಯಿಲ್ಲ ಎಂದು ಧೈರ್ಯ ಹೇಳಿದ್ದಾರೆ.

ಭೀಮಾ ನದಿಯಲ್ಲಿ ಕೊಚ್ಚಿಹೋದ ಯುವಕ
ಉಕ್ಕಿ ಹರಿಯುತ್ತಿರುವ ಭೀಮಾ ನದಿಯಲ್ಲಿ ಚಂದ್ರಪ್ಪ(34) ಎಂಬ ವ್ಯಕ್ತಿ ಕೊಚ್ಚಿ ಹೋಗಿದ್ಧಾರೆ. ಈ ಘಟನೆ ಯಾದಗಿರಿ ತಾಲೂಕಿನ ಕೌಳೂರು ಗ್ರಾಮದಲ್ಲಿ ನಡೆದಿದೆ. ಪಂಪ್ಸೆಟ್ ತೆಗೆಯಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ.
ಹೇಮಾವತಿ ನದಿಯಲ್ಲಿ ಕೊಚ್ಚಿ ಹೋದ ಯುವಕ
ಉಕ್ಕಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ನಿನ್ನೆ ಶ್ರೀ ಹರ್ಷ(22) ಎಂಬ ಯುವಕ ಕೊಚ್ಚಿ ಹೋಗಿದ್ದು, ಇಂದೂ ಸಹ ಮೃತದೇಹಕ್ಕಾಗಿ ಶೋಧ ಮುಂದುವರೆದಿದೆ. ಗದ್ದೆಯಿಂದ ಮನೆಗೆ ಬರುವಾಗ ನೋಡನೋಡುತ್ತಿದ್ದಂತೆ ಕೊಚ್ಚಿಹೋಗಿದ್ದ.
ಗೋಡೆ ಕುಸಿದು ಮಹಿಳೆ ಸಾವು
ಭಾರೀ ಮಳೆಗೆ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಚೇರ್ಕಾಡಿಯ ಬೆನಗಲ್ ಗ್ರಾಮದಲ್ಲಿ ನಡೆದಿದೆ. ಗಂಗಾ ಮರಕಾಲ್ತಿ (52) ಮೃತಪಟ್ಟ ಮಹಿಳೆ. ಮುಂಜಾನೆ ಹಸುವಿನ ಹಾಲು ಕರೆಯಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ.
ಧಾರವಾಡದಲ್ಲಿ ಮಳೆಗೆ ಓರ್ವ ಬಲಿ
ಬೇಡ್ತಿಹಳ್ಳದಲ್ಲಿ ಕೊಚ್ಚಿಹೋಗಿದ್ದ ಗೂಡ್ಸ್ ವಾಹನದ ಚಾಲಕ ಸಾವನ್ನಪ್ಪಿದ್ಧಾನೆ.ಹಳ್ಳದ ನೀರಿನಲ್ಲಿ ನಿಂತಿದ್ದ ವಾಹನದಲ್ಲಿ ಶವ ಪತ್ತೆಯಾಗಿದೆ. ಧಾರವಾಡ ತಾಲೂಕಿನ ಮುರಕಟ್ಟಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಬಾಲಕಿ ಸೇರಿ 7 ಜನ ಸಾವು
ಬೆಳಗಾವಿಯಲ್ಲಿ ಭಾರೀ ಮಳೆಯಿಂದ ಪ್ರವಾಹಕ್ಕೆ 6 ಜನ ಬಲಿಯಾಗಿದ್ದಾರೆ ಎನ್ನಲಾಗಿದೆ. 40ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಸೇತುವೆ ದಾಟುವಾಗ ನೀರಿನ ರಭಸಕ್ಕೆ ಬಾಲಕಿಯೊಬ್ಬಳು ಕೊಚ್ಚಿ ಹೋಗಿ ಮೃತಪಟ್ಟಿದ್ಧಾಳೆ. ನಾಗರಮುನ್ನೋಳಿ ಗ್ರಾಮದ ಶಿಲ್ಪಾ(10) ಮೃತ ಬಾಲಕಿ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಾರಮುನ್ನೋಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭಾರೀ ಮಳೆಗೆ ಗೋಡೆ ಕುಸಿದು ಮನೆಯಲ್ಲಿ ಮಲಗಿದ್ದ ವೃದ್ಧ ಸಾವನ್ನಪ್ಪಿದ್ದಾನೆ. ಬೆಳಗಾವಿಯ ಮದಿಹಳ್ಳಿ ಗ್ರಾಮದ ಬಾಳಪ್ಪಾ ಕಬ್ಬೂರಿ (75) ಮೃತ ವ್ಯಕ್ತಿ.
Comments are closed.