ಕರ್ನಾಟಕ

ಸುದ್ದಿಗೋಷ್ಠಿಯಲ್ಲಿ ದೇವೇಗೌಡರ ಕ್ಷಮಿಸಿಯಾಚಿಸಿದ ಹೆಚ್​. ವಿಶ್ವನಾಥ್

Pinterest LinkedIn Tumblr


ಮೈಸೂರು (ಆ. 4): ಮೈತ್ರಿ ಸರ್ಕಾರ ಪತನವಾಗಲು ರಾಜೀನಾಮೆ ನೀಡಿದ ನಾವು 20 ಶಾಸಕರಾಗಲೀ, ಬಿಜೆಪಿ ನಾಯಕರಾಗಲೀ ಕಾರಣರಲ್ಲ. ಇದಕ್ಕೆ ಸಮ್ಮಿಶ್ರ ಸರ್ಕಾರದ ನಾಯಕರೇ ಕಾರಣ. ಅವರು ನಮ್ಮನ್ನು ಶಾಸಕರಂತೆ ನಡೆಸಿಕೊಳ್ಳಲೇ ಇಲ್ಲ ಎಂದು ಜೆಡಿಎಸ್​ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ನಾನು ರಾಜೀನಾಮೆ ವಿಚಾರ ಹಂಚಿಕೊಳ್ಳಲು ಬಂದಿದ್ದೇನೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿದೆ. ಈಗ ಮತ್ತೊಂದು ಸರ್ಕಾರ ಸ್ಥಾಪನೆಯಾಗಿದೆ. ಸರ್ಕಾರ ಪತನಕ್ಕಾಗಲೀ, ಹೊಸ ಸರ್ಕಾರ ಸ್ಥಾಪನೆಗಾಗಲೀ ರಾಜೀನಾಮೆ ನೀಡಿದ ನಾವು 20 ಜನ ಕಾರಣರಲ್ಲ. ಇದಕ್ಕೆ ಬಿಜೆಪಿಯೂ ಹೊಣೆಯಲ್ಲ. ಈ ಬೆಳವಣಿಗೆಗೆ ಮೈತ್ರಿ ಪಕ್ಷದ ನಾಯಕರೇ ಕಾರಣ ಎಂದು ಹೆಚ್​. ವಿಶ್ವನಾಥ್ ಹೇಳಿದ್ದಾರೆ.

ಕಾಂಗ್ರೆಸ್​- ಜೆಡಿಎಸ್​ ನಾಯಕರು ತಮ್ಮ ಪಕ್ಷದ ಶಾಸಕರಿಗೆ ಗೌರವ ನೀಡಲಿಲ್ಲ. ಸರ್ಕಾರ ಪತನಕ್ಕೆ ಆ 2 ಪಕ್ಷದ ಮುಖಂಡರೇ ನೇರಹೊಣೆ. ನಾನು ರಾಜೀನಾಮೆ ನೀಡಿದ್ದಕ್ಕೆ ಹುಣಸೂರಿನ ಮತದಾರರಲ್ಲಿ ಕ್ಷಮೆ ಕೇಳುತ್ತಿದ್ದೇನೆ. ರಾಜೀನಾಮೆ ನೀಡುವ ಸನ್ನಿವೇಶ ಸೃಷ್ಟಿಯಾಯಿತು. ಇದಕ್ಕಾಗಿ ಸಾರ್ವಜನಿಕರಲ್ಲಿ, ಮತದಾರರಲ್ಲಿ ಕ್ಷಮೆ ಕೇಳುತ್ತೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.

ದೇವೇಗೌಡರೇ ನನ್ನ ಕ್ಷಮಿಸಿ;

ನಾನು ನಮ್ಮ ಪಕ್ಷದ ಮುಖಂಡರಾದ ದೇವೇಗೌಡರ ಬಳಿ ಕ್ಷಮೆ ಯಾಚಿಸುತ್ತೇನೆ. ದೇವೇಗೌಡರು ನನಗೆ ಕರೆದು ಅವಕಾಶ ಕೊಟ್ಟರು. ನನ್ನನ್ನು ಜೆಡಿಎಸ್​ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದರು. ಆದರೆ, ಪರಿಸ್ಥಿತಿ ಹಾಗೂ ಸನ್ನಿವೇಶದ ಹಿನ್ನಲೆ ಶಾಸಕ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ದೇವೇಗೌಡರ ಪೋಟೋನ ಇವತ್ತು ಕೂಡ ನಾನು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತೇನೆ. ಈಗಲೂ ದೇವೇಗೌಡರ ಕ್ಷಮೆ ಯಾಚಿಸುತ್ತೇನೆ ಎಂದು ಮೈಸೂರಿನಲ್ಲಿ ಹೆಚ್. ವಿಶ್ವನಾಥ್ ಹೇಳಿದ್ದಾರೆ.

Comments are closed.