
ರಾಯಚೂರು/ ಬೆಳಗಾವಿ/ ಚಿಕ್ಕೋಡಿ (ಆ. 4): ಉತ್ತರ ಕರ್ನಾಟಕದಲ್ಲಿ ಒಂದು ಕಡೆ ಬರದಿಂದ ಜನರು ಮುಗಿಲಿನತ್ತ ಕಣ್ಣು ನೆಟ್ಟಿದ್ದರೆ ಇನ್ನೊಂದೆಡೆ ಪ್ರವಾಹದಿಂದ ಪ್ರಾಣ ಭೀತಿ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಯ್ನಾ ಡ್ಯಾಂನಿಂದ ನೀರು ಬಿಡಲಾಗಿದೆ. ಇದರಿಂದಾಗಿ ಕೃಷ್ಣಾ ನದಿ ತೀರದ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪಾಟಣ ತಾಲೂಕಿನ ಕೊಯ್ನಾ ಡ್ಯಾಂ ನಲ್ಲಿ90.46 ಟಿಎಂಸಿ ನೀರು ಸಂಗ್ರಹವಾಗಿದ್ದು, ಈ ಡ್ಯಾಂ 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಕೊಯ್ನಾ ಡ್ಯಾಂ ನಿಂದ ಇದೀಗ 19,580 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ನಿನ್ನೆ ಒಂದೇ ದಿನದಲ್ಲಿ ಮೂರು ಭಾರಿ ನೀರು ಬಿಡುಗಡೆ ಮಾಡಲಾಗಿದ್ದು, ಕ್ಷಣ ಕ್ಷಣಕ್ಕೂ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಾಜ್ಯಕ್ಕೆ ಕೃಷ್ಣಾ ನದಿಯ ಮೂಲಕ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಉತ್ತರ ಕರ್ನಾಟಕ ಜಿಲ್ಲೆಯ ಜನರು ಆತಂಕಕ್ಕೊಳಗಾಗಿದ್ದಾರೆ. ಕೃಷ್ಣಾ ನದಿ ತೀರದ ಬೆಳಗಾವಿ, ಬಾಗಲಕೋಟ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಯ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ ಜಿಲ್ಲೆಗಳ್ಲಲೂ ಉತ್ತಮವಾದ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯ ನೀರಿನ ಮಟ್ಟ ಹೆಚ್ಚುತ್ತಲೇ ಇದೆ. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯ ದಡದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕೊಯ್ನಾ ಡ್ಯಾಂನಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಇದರ ಜೊತೆಗೆ ನಾರಾಯಣಪುರ ಡ್ಯಾಂನಿಂದ 2.54 ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ. ಹೀಗಾಗಿ, ಕೃಷ್ಣಾ ನದಿಯ ಸುತ್ತಮುತ್ತ ಪ್ರವಾಹ ಉಂಟಾಗುವ ಸಾಧ್ಯಾತೆಯಿದ್ದು, ತುರ್ತು ಸ್ಥಿತಿಯಲ್ಲಿ ರಕ್ಷಿಸಲು ಎನ್ ಡಿಆರ್ ಎಫ್ 30 ಜನರು ಹಾಗೂ 2 ಬೋಟುಗಳ ವ್ಯವಸ್ಥೆ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣಾನದಿಗೆ ಆಲಮಟ್ಟಿ, ಬಸವಸಾಗರ ಡ್ಯಾಂನಿಂದ 2 ಲಕ್ಷ 70 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಯಾದಗಿರಿಯ ಕೌಳೂರು ಸೇತುವೆ ಮುಳುಗಡೆಯಾಗಿದೆ. ಶಹಾಪುರ- ದೇವದುರ್ಗ ರಸ್ತೆ ಸಂಚಾರ ಬಂದ್ ಆಗಿದೆ. ನದಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಜಿಲ್ಲಾಡಳಿತದಿಂದ 24 ಗಂಟೆಗಳ ಅಲರ್ಟ್ ಘೋಷಣೆ ಮಾಡಲಾಗಿದೆ.
ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ:
ಚಿಕ್ಕೋಡಿ ಜಿಲ್ಲೆಯಲ್ಲಿ ಕೂಡ ಪ್ರವಾಹದ ಭೀತಿ ಎದುರಾಗಿದ್ದು, ಇನ್ನೂ ಸಾಕಷ್ಟು ಜನವಸತಿ ಪ್ರದೇಶಗಳು ಪ್ರವಾಹ ಪೀಡಿತವಾಗುವ ಸಾಧ್ಯತೆಯಿದೆ. ಹೀಗಾಗಿ, ಚಿಕ್ಕೋಡಿಗೆ 80 ಜನರ ಭಾರತೀಯ ಸೈನಿಕರ ತಂಡ ಆಗಮಿಸಿದೆ. ಜಲಾವೃತವಾದ ಪ್ರದೇಶದಲ್ಲಿ ಎನ್ಡಿಆರ್ಎಫ್ ಸಿಬ್ಬಂದಿ ಸಾರ್ವಜನಿಕರ ರಕ್ಷಣೆಗೆ ಆಗಮಿಸಲಿದೆ. ಇಂದು ಆಂಧ್ರಪ್ರದೇಶದ ಗುಂಟೂರಿನಿಂದ 60 ಜನರ ಎನ್ಡಿಆರ್ಎಫ್ ತಂಡ ಚಿಕ್ಕೋಡಿಗೆ ಆಗಮಿಸಲಿದೆ.
ಕೃಷ್ಣಾನದಿಯಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿರುವುದರಿಂದ ಚಿಕ್ಕೋಡಿ ಗ್ರಾಮಗಳು ಪ್ರವಾಹ ಭೀತಿಯನ್ನು ಎದುರಿಸುತ್ತಿವೆ. ಕೃಷ್ಣಾನದಿ ತೀರದ ಪ್ರದೇಶದಲ್ಲಿರುವ ಜನರ ಸ್ಥಳಾಂತರ ಮಾಡಲಾಗಿದೆ. ಸ್ಥಳಾಂತರಗೊಂಡ ಜನರಿಗೆ 8 ಕಡೆ ಗಂಜಿಕೇಂದ್ರ ತೆರೆಯಲಾಗಿದೆ. ಚಿಕ್ಕೋಡಿ ತಾಲೂಕಿನ ಇಂಗಳಿ, ಯಡೂರವಾಡಿ, ಕಾಗವಾಡ ತಾಲೂಕಿನ ಜುಗೂಳು, ಶಹಾಪೂರ, ಬಣಜವಾಡ, ಅಥಣಿಯ ರಡೇರಟ್ಟಿ, ಸಪ್ತಸಾಗರ, ನಾಗನೂರು, ಶಿರಗೂರು ಗ್ರಾಮಗಳಲ್ಲಿ ಗಂಜಿಕೇಂದ್ರ ತೆರೆಯಲಾಗಿದೆ. ಆಯಾ ಗ್ರಾಮದ ಶಾಲೆ, ಸಮುದಾಯ ಭವನ, ಅಂಗನವಾಡಿ ಕೇಂದ್ರಗಳಲ್ಲಿ ಗಂಜಿಕೇಂದ್ರ ಸ್ಥಾಪನೆ ಮಾಡಲಾಗಿದೆ. ಈಗಾಗಲೇ ಸ್ಥಳಾಂತರಗೊಂಡ ಜನರಿಗೆ ಜಿಲ್ಲಾಡಳಿತ ಊಟ, ವಸತಿ ವ್ಯವಸ್ಥೆ ಕಲ್ಲಿಸಿಕೊಟ್ಟಿದೆ.
ಬಾಗಲಕೋಟೆಯಲ್ಲಿ ಮುಂದುವರೆದ ಪ್ರವಾಹ:
ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಮತ್ತೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿ ಪ್ರವಾಹ ಮುಂದುವರೆದಿದೆ. ಇಲ್ಲಿನ ಐತಿಹಾಸಿಕ ಲಕ್ಷ್ಮೀ ನರಸಿಂಹ ದೇವಸ್ಥಾನ ಮತ್ತು ಹೆಬ್ಬಿ ಬಸವೇಶ್ವರ ದೇಗುಲಗಳು ಜಲಾವೃತವಾಗಿವೆ. ಅಪಾಯಮಟ್ಟ ಮೀರಿ ಹರಿಯುತ್ತಿರೋ ಕೃಷ್ಣಾ ನದಿ ಮಧ್ಯೆ ಈಜಿ ಭಕ್ತರು ದೇವರ ದರ್ಶನಕ್ಕೆ ಹೋಗುತ್ತಿದ್ದಾರೆ. ಪವಿತ್ರ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಭಕ್ತರು ಪರದಾಡುವಂತಾಗಿದೆ.
Comments are closed.