ಕರ್ನಾಟಕ

ರಾಜಕೀಯ ತಿರುವು ಪಡೆಯುತ್ತಿರುವ ಸಿದ್ದಾರ್ಥ ಸಾವು

Pinterest LinkedIn Tumblr


ಲಂಡನ್‌/ನವದೆಹಲಿ: ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನ ಲೋಕಸಭೆ ಸದಸ್ಯ ಮನೀಶ್‌ ತಿವಾರಿ ಈ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗಬೇಕು ಎಂದು ಒತ್ತಾಯಿಸಿ ನಿಲುವಳಿ ಸೂಚನೆ ಗೊತ್ತುವಳಿ ಮಂಡಿಸಲು ನೋಟಿಸ್‌ ನೀಡಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳದಿಂದಲೇ ಅವರು ಅಸುನೀಗಿದ್ದಾರೆ ಎಂದು ಟೀಕಿಸಿದ್ದಾರೆ.

ಇದೇ ವೇಳೆ ನವದೆಹಲಿಯಲ್ಲಿ ಮಾತ ನಾಡಿದ ಕರ್ನಾಟಕದ ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು, ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳದಿಂದ ಅವರು ಅಸುನೀಗಿದ್ದಾರೆ. ಅದಕ್ಕೆ ಬಿಜೆಪಿ ಯೇ ಕಾರಣ ಎಂದು ದೂರಿದ್ದಾರೆ. ಸಿದ್ಧಾರ್ಥ ಇತರರಂತೆ ಮೋಸ ಮಾಡಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮತ್ತು ಅಮಿತ್‌ ಶಾ ಗೃಹ ಸಚಿವರಾದ ಬಳಿಕ ಇಂಥ ಬೆಳವಣಿಗೆಯಾಗುತ್ತಿದೆ ಎಂದು ಟೀಕಿಸಿದ್ದಾರೆ. ಅದಕ್ಕೆ ತಿರುಗೇಟು ನೀಡಿರುವ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, “ಕಾಂಗ್ರೆಸ್‌ಗೆ ರಾಜಕೀಯ ಮಾಡುವುದಕ್ಕೆ ಯಾವುದೇ ವಿಚಾರ ಆದೀತು. ವಿನಾಕಾರಣ ಅವರು ವಿವಾದ ಮಾಡುತ್ತಾರೆ’ ಎಂದು ಟೀಕಿಸಿದ್ದಾರೆ.

ಮಮತಾ ಬೇಸರ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ದೇಶದ ದೈತ್ಯ ಉದ್ಯಮಿಗಳಿಗೆ ಇರುವ ಕಿರುಕುಳಗಳ ಬಗ್ಗೆ ಕೇಳಿದ್ದೆ. ಸಿದ್ದಾರ್ಥ ಅವರು ಐಟಿಗೆ ಬರೆದ ಪತ್ರದಲ್ಲೂ ಅವು ಬಹಿರಂಗವಾಗಿದೆ. ರಾಜಕೀಯ ಸೇಡಿನ ಭೀತಿಯಿಂದಾಗಿ ಇಂಥವನ್ನು ಪ್ರಶ್ನಿಸಲು ವಿಪಕ್ಷಗಳಲ್ಲೂ ಧೈರ್ಯವಿಲ್ಲ ಎಂದಿದ್ದಾರೆ.

ಉತ್ಸಾಹ ಸಾಯಲು ಬಿಡಬಾರದು: ಉದ್ಯಮಿ ಆನಂದ್‌ ಮಹಿಂದ್ರಾ ಟ್ವೀಟ್‌ ಮಾಡಿ, “ಸಿದ್ದಾರ್ಥ ಅವರ ಪ್ರಕರಣ ದೇಶದ ಎಲ್ಲಾ ಉದ್ಯಮಿಗಳಿಗೆ ಎಚ್ಚರಿಕೆಯ ಕರೆ ಗಂಟೆ. ಉದ್ಯಮಿಗಳು ತಮ್ಮಲ್ಲಿನ ಉತ್ಸಾಹವನ್ನು ಸಾಯಲು ಬಿಡಬಾರದು’ ಎಂದು ಕರೆ ನೀಡಿದ್ದಾರೆ.

ಷೇರು ಕುಸಿತ: ಕೆಫೆ ಕಾಫಿ ಡೇಯ ಷೇರು ಗಳ ಕುಸಿತ ಬುಧವಾರವೂ ಮುಂದುವರಿ ದ್ದು, ಶೇ.20ರಷ್ಟು ಕುಸಿತವಾಗಿವೆ.

ನನ್ನದೂ ಸಿದ್ಧಾರ್ಥ ಸ್ಥಿತಿಯೇ – ಮಲ್ಯ: ಸಿದ್ಧಾರ್ಥ ಆತ್ಮಹತ್ಯೆ ವಿಚಾರ ಜಗತ್ತಿನಾದ್ಯಂತ ಸುದ್ದಿಯಾಗುತ್ತಲೇ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಟ್ವೀಟ್‌ ಮಾಡಿ, “ನನ್ನ ಸ್ಥಿತಿಯೂ ಸಿದ್ಧಾರ್ಥ ಅವರದ್ದೇ ಆಗಿದೆ. ನಾನು ಪೂರ್ತಿ ಪ್ರಮಾಣದಲ್ಲಿ ಸಾಲ ಮರು ಪಾವತಿ ಮಾಡುತ್ತೇನೆ ಎಂದರೂ ಕೇಳುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ. “ಸರ್ಕಾರ, ಬ್ಯಾಂಕುಗಳ ಕಿರುಕುಳದಿಂದ ಎಂಥವರೂ ಹತಾಶಗೊಳ್ಳುತ್ತಾರೆ’ ಎಂದಿದ್ದಾರೆ. ಮಲ್ಯ ಹೇಳಿಕೆಯನ್ನು ಟೀಕಿಸಿರುವ ಟ್ವಿಟಿಗರು, “ನೀವು ಮೋಸ ಮಾಡಿ, ದೇಶ ಬಿಟ್ಟು ಓಡಿ ಹೋಗಿ, ಈಗ ನಾಟಕ ಆಡುತ್ತಿದ್ದೀರ. ಸಿದ್ಧಾರ್ಥ ನಿಮ್ಮ ಹಾಗಲ್ಲ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Comments are closed.