ಕರ್ನಾಟಕ

ಹೊಸ ಸರ್ಕಾರ ನಿರ್ಮಾಣದ ಹೊಸ್ತಿಲಲ್ಲಿ ಹಳೆಯ ಹೆಸರು ಇಟ್ಟುಕೊಂಡ ಯಡಿಯೂರಪ್ಪ!

Pinterest LinkedIn Tumblr


ಬೆಂಗಳೂರು (ಜು. 24): ರಾಜಕಾರಣದಲ್ಲಿ ಜನರ ಬೆಂಬಲದ ಜೊತೆಗೆ ಅದೃಷ್ಟವೂ ಕೈಗೂಡಬೇಕಾಗುತ್ತದೆ. ಅದು ಕರ್ನಾಟಕ ರಾಜ್ಯ ರಾಜಕಾರಣದ ಮಟ್ಟಿಗಂತೂ ಸತ್ಯವೆಂದೇ ಹೇಳಬಹುದು. ರಾಜಕೀಯದಲ್ಲಿ ಏನು ಬೇಕಾದರೂ ನಡೆಯುತ್ತದೆ. ಇದೀಗ 14 ತಿಂಗಳ ಅಧಿಕಾರದಿಂದ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಕೆಳಗಿಳಿದಿದೆ. ನಾಳೆ ಬಿಜೆಪಿಯ ಮುಖ್ಯಮಂತ್ರಿಯಾಗಿ ಬಿ.ಎಸ್​. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಇದೆಲ್ಲದರ ನಡುವೆಯೇ ಇದ್ದಕ್ಕಿದ್ದಂತೆ ಯಡಿಯೂರಪ್ಪ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ.

2007ರ ನವೆಂಬರ್​ನಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಯಡಿಯೂರಪ್ಪ ಅದಕ್ಕೂ ಮೊದಲು ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಹೆಸರನ್ನು ಯಡ್ಯೂರಪ್ಪ ಎಂದು ಬದಲಾಯಿಸಿಕೊಂಡಿದ್ದರು. ಈ ಕುರಿತು ಮಾಧ್ಯಮ ಪ್ರಕಟಣೆಯನ್ನೂ ಬಿಡುಗಡೆ ಮಾಡಿದ್ದರು. ಕನ್ನಡದಲ್ಲಿ ಯಡಿಯೂರಪ್ಪ ಎಂದೇ ಇದ್ದ ಅವರು ಹೆಸರು ಇಂಗ್ಲಿಷ್​ನಲ್ಲಿ ಯಡ್ಯೂರಪ್ಪ ಎಂದಾಗಿತ್ತು. ಇದೀಗ ಮತ್ತೆ ಅಧಿಕಾರದ ಗದ್ದುಗೆ ಏರಲು ಸಿದ್ಧರಾಗಿರುವ ಯಡಿಯೂರಪ್ಪ ತಮ್ಮ ಹೆಸರನ್ನು ಮತ್ತೆ ಯಡಿಯೂರಪ್ಪ ಎಂದು ಹಳೇ ಹೆಸರನ್ನೇ ಉಳಿಸಿಕೊಂಡಿದ್ದಾರೆ.

ನಿನ್ನೆ ಹೆಚ್​.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದ ನಂತರ ಬಿಜೆಪಿ ವಿಜಯೋತ್ಸವ ಆಚರಿಸಿತ್ತು. ನಿನ್ನೆ ಕುಮಾರಸ್ವಾಮಿ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸಲ್ಲಿಸಿದ್ದರು. ನಿನ್ನೆ ಸಂಜೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಅವರಿಗೆ ಬರೆದ ಪತ್ರದಲ್ಲಿ ತಾವು ಮೈತ್ರಿ ಸರ್ಕಾರದ ವಿರುದ್ಧ ವಿಜಯ ಸಾಧಿಸಿರುವ ಸಂಗತಿಯನ್ನು ತಿಳಿಸಿದ್ದಾರೆ. ಈ ಲೆಟರ್​ಹೆಡ್​ನಲ್ಲಿ ಯಡ್ಯೂರಪ್ಪ ಎಂಬ ಹೆಸರಿನ ಬದಲಾಗಿ ಯಡಿಯೂರಪ್ಪ ಎಂದೇ ಇರುವುದು ಅಚ್ಚರಿ ಮೂಡಿಸಿದೆ.

2006ರಲ್ಲಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಜೊತೆಗಿನ ಜೆಡಿಎಸ್​​ ಮೈತ್ರಿ ಮುರಿದ ನಂತರ ಕುಮಾರಸ್ವಾಮಿಗೆ ಬಿಜೆಪಿ ಬೆಂಬಲ ಘೋಷಿಸಿತ್ತು. ಆದರೆ, ಒಪ್ಪಂದದ ಪ್ರಕಾರ 20 ತಿಂಗಳ ನಂತರ 2007ರಲ್ಲಿ ಬಿಜೆಪಿಯ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕಾದಾಗ ಜೆಡಿಎಸ್​ ಮಾತು ತಪ್ಪಿತ್ತು. ಇದರಿಂದ ಆಕ್ರೋಶಗೊಂಡ ಬಿಜೆಪಿ ಸಚಿವರು ಮತ್ತು ಯಡಿಯೂರಪ್ಪ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸ್​ ಪಡೆಯಿತು. ಆಗ ಸಂಖ್ಯಾಶಾಸ್ತ್ರಜ್ಙರನ್ನು ಭೇಟಿಯಾಗಿದ್ದ ಯಡಿಯೂರಪ್ಪ ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಹೆಸರನ್ನು ಯಡ್ಯೂರಪ್ಪ ಎಂದು ಬದಲಾಯಿಸಿಕೊಂಡಿದ್ದರು. ಅದಾಗಿ ಒಂದೇ ತಿಂಗಳಲ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾದರು.

ಇದೀಗ ಮತ್ತೆ ಯಡಿಯೂರಪ್ಪ ಎಂದೇ ಲೆಟರ್​ಹೆಡ್​ ಪ್ರಿಂಟ್ ಮಾಡಿಸಿರುವ ಯಡಿಯೂರಪ್ಪ ಮತ್ತೆ ಸಂಖ್ಯಾಶಾಸ್ತ್ರಜ್ಞರ ಮೊರೆಹೋಗಿದ್ದಾರೆ ಎನ್ನಲಾಗಿದೆ. ‘ಹೆಸರಲ್ಲೇನಿದೆ ಬಿಡಿ’ ಎನ್ನುವವರು ಯಡಿಯೂರಪ್ಪನವರಿಗೆ ಖುಲಾಯಿಸಿದ ಅದೃಷ್ಟ ನೋಡಿ ಅಚ್ಚರಿಪಡುವಂತಾಗಿದೆ. ಅಂದಹಾಗೆ, ನಾಳೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Comments are closed.