ಕರ್ನಾಟಕ

ಮುಂಬೈಯಲ್ಲಿರುವ ಶಾಸಕರು ಅತೃಪ್ತರಲ್ಲ, ಎಲ್ಲರೂ ಸಂತೃಪ್ತರು; ಬಿಜೆಪಿಯವರು 15 ಶಾಸಕರಿಗೆ ಟೋಪಿ ಹಾಕುತ್ತಿದ್ದಾರೆ: ಡಿಕೆಶಿ

Pinterest LinkedIn Tumblr

ಬೆಂಗಳೂರು: ರಾಜಿನಾಮೆ ನೀಡಿ ಮುಂಬೈಗೆ ಹಾರಿರುವ ಅವರನ್ನು ಅತೃಪ್ತ ಶಾಸಕರು ಎಂದು ಕರೆಯಲು ಬಯಸುವುದಿಲ್ಲ. ಅವರು ತೃಪ್ತರು, ಸಂತೃಪ್ತರು. ನನ್ನ ಬಾಂಬೆ ಸ್ನೇಹಿತರು. ಬಾಂಬೆಯ ಆತಿಥ್ಯ ನನಗೆ ಬಹಳ ಇಷ್ಟವಾಯಿತು ಎಂದು ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ನಾವು ರಾಜಕಾರಣಿಗಳು ಎಂದು ಹೇಳಿಕೊಳ್ಳಲು ಆಗುತ್ತಿಲ್ಲ. ತಲೆ ಎತ್ತಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ, ನಾವು ಯಾವುದಾದರೂ ಮಾತನಾಡಿದರೆ ಒಂದು ವಿಚಾರಕ್ಕೆ, ಸಿದ್ಧಾಂತಕ್ಕೆ ಅಂಟಿಕೊಳ್ಳಬೇಕಲ್ಲವೇ ಎಂದು ತಿಳಿಸಿದ್ದಾರೆ.

ರಾಜೀನಾಮೆ ನೀಡಿದ ಶಾಸಕರೊಂದಿಗೆ ನಮ್ಮದು 30-40 ವರ್ಷದ ಸ್ನೇಹ. ಭಾವಪೂರ್ಣ ಶ್ರದ್ಧಾಂಜಲಿ ಎಂಬ ಫೋಟೊ ಹಾಕುತ್ತಿದ್ದಾರೆ. ನಿಮ್ಮ ನಾಯಕತ್ವದಲ್ಲಿಯೇ ಹೊರಟು ಹೋಗೋಣ ಎಂದು ನನಗೆ ಮುನಿರತ್ನ ಬುದ್ಧಿವಾದ ಹೇಳಿದ್ದರು. ಅದಕ್ಕೆ ಜನ ಒಪ್ಪೊಲ್ಲ ಎಂದು ಹೇಳಿದ್ದೆ, ಎಂದು ಹೇಳಿದ ಅವರು, ಯಡಿಯೂರಪ್ಪ ಅವರ ಛಲಕ್ಕೆ ಅಭಿನಂದಿಸುತ್ತೇನೆ. ಆರೇಳು ಸಲ ಪ್ರಯತ್ನಿಸಿದರು. ಕೊನೆಗೂ ಅವರ ಬಲೆಗೆ ಬಿದ್ದರಲ್ಲ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಶಾಸಕರು ರಾಜೀನಾಮೆ ಕೊಟ್ಟ ಸಂಗತಿ ತಿಳಿದಾಗ ಕನಕಪುರದಿಂದ ಓಡೋಡಿ ಬಂದೆ. ಮುನಿರತ್ನ, ಸೋಮಶೇಖರ್ ಎಲ್ಲ ಇದ್ದರು. ಆ ವೇಳೆ ರಾಜೀನಾಮೆ ಪತ್ರ ಕಿತ್ತು ಹರಿದು ಹಾಕಿದೆ, ಅವರೆಲ್ಲಾ ಮುಂದೆ ಅನುಭವಿಸುವ ನೋವನ್ನು ನೆನೆದು ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ. ನಮ್ಮ 15 ಶಾಸಕರಿಗೆ ಟೊಪ್ಪಿ ಹಾಕುತ್ತಿದ್ದಾರೆ 15 ಜನಕ್ಕೂ ರಾಜಕೀಯ ಸಮಾಧಿ ಹಾಕುತ್ತಿದ್ದಾರೆ. ಅದಕ್ಕೆ ಬೀಳಬೇಡ್ರಪ್ಪ ಎಂದು ಶಾಸಕರಿಗೆ ಬುದ್ದಿ ಹೇಳಿದ್ದಾಗಿ ಶಿವಕುಮಾರ್ ಹೇಳಿದ್ದಾರೆ.

Comments are closed.