ಕರ್ನಾಟಕ

ವಿಶ್ವಾಸ ಮತಯಾಚಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧಾರ

Pinterest LinkedIn Tumblr

ಬೆಂಗಳೂರು: ವಿಶ್ವಾಸಮತ ಯಾಚನೆ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ವಿಧಾನಸಭೆ ಕಲಾಪದ ವೇಳೆ ಸಿಎಂ ಕುಮಾರಸ್ವಾಮಿ ಈ ಘೋಷಣೆ ಮಾಡಿದ್ದು, ಸ್ಪೀಕರ್‌ ರಮೇಶ್‌ ಕುಮಾರ್‌ಗೆ ಸಮಯ ನಿಗದಿಪಡಿಸಲು ಮನವಿ ಮಾಡಿದ್ದಾರೆ.

ವಿಶ್ವಾಸಮತ ಯಾಚನೆಗೆ ತಾವು ಸಿದ್ದರಿದ್ದು ಸಮಯ ನಿಗದಿಪಡಿಸುವಂತೆ ಸ್ಪೀಕರ್ ಅವರಲ್ಲಿ ಸಿಎಂ ಕುಮಾರಸ್ವಾಮಿ ಕೋರಿದ್ದಾರೆ. ವಿಧಾನಸಭೆಯಲ್ಲಿ ಸಂತಾಪ ಸೂಚಕ ಭಾಷಣದ ವೇಳೆ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿ ಸಿಎಂ ಕುಮಾರಸ್ವಾಮಿ ಈ ಹೇಳಿಕೆಗಳನ್ನು ನೀಡಿದ್ದಾರೆ.

ಅತೃಪ್ತರ ರಾಜೀನಾಮೆ ಅಂಗೀಕರಿಸುವಂತಿಲ್ಲ, ಅನರ್ಹತೆಯೂ ಇಲ್ಲ: ಮಂಗಳವಾರದ ವರೆಗೂ ಯಥಾಸ್ಥಿತಿ
ಇನ್ನು, ಸಿಎಂ ಈ ಘೋಷಣೆ ಹೊರಡಿಸುತ್ತಿದ್ದಂತೆ ಬಿಜೆಪಿ ನಾಯಕರಲ್ಲೂ ಟೆನ್ಷನ್ ಶುರುವಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ವಿಧಾನಸಭೆಯ ಯಡಿಯೂರಪ್ಪನವರ ಕೊಠಡಿಯಲ್ಲಿ ಶಾಸಕರ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಬಿಜೆಪಿ ಅವಿಶ್ವಾಸ ಮತ ಯಾಚನೆ ಕೋರುವ ಮುನ್ನ ಸಿಎಂ ಕುಮಾರಸ್ವಾಮಿ ಈ ಘೋಷಣೆ ಹೊರಡಿಸಿರುವುದು ಬಿಜೆಪಿ ನಾಯಕರಿಗೆ ಶಾಕ್‌ ನೀಡಿದೆ. ಸುಪ್ರೀಂಕೋರ್ಟ್ ಇಂದಿನ ಆದೇಶದ ಬಗ್ಗೆಯೂ ಅಸಮಾಧಾನವಾದ ಬೆನ್ನಲ್ಲೇ ಬಿಜೆಪಿಗೆ ದೊಡ್ಡ ಶಾಕ್‌ ಆದಂತಿದೆ. ಇನ್ನು, ವಿಶ್ವಾಸಮತ ಯಾಚನೆಗೆ ಸಿಎಂ ಕುಮಾರಸ್ವಾಮಿ ಸ್ಪೀಕರ್‌ ರಮೇಶ್‌ ಕುಮಾರ್ಗೆ ಶುಕ್ರವಾರ ಮನವಿ ಮಾಡಿಕೊಂಡಿದ್ದರೂ ಸ್ಪೀಕರ್‌ಗೆ ಉತ್ತರಿಸಲು 7 ದಿನಗಳ ಸಮಯಾವಕಾಶವಿದೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಮಂಗಳವಾರದ ವರೆಗೆ ಯಥಾಸ್ಥಿತಿ ಮುಂದುವರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದರಿಂದ ಅತೃಪ್ತ ಶಾಸಕರಿಗೂ ಅನರ್ಹತೆ ಭೀತಿಯಿಂದ ತಾತ್ಕಾಲಿಕ ಮುಕ್ತಿ ದೊರೆತಿದೆ. ಸಮ್ಮಿಶ್ರ ಸರಕಾರಕ್ಕೂ ನಾಲ್ಕು ದಿನಗಳ ಕಾಲ ಜೀವದಾನ ದೊರೆತಂತಾಗಿದೆ.

ಅತೃಪ್ತ ಶಾಸಕರು ಸ್ಪೀಕರ್ ವಿರುದ್ಧ ಸಲ್ಲಿಸಿದ ಅರ್ಜಿ ಹಾಗೂ ಸ್ಪೀಕರ್ ಮತ್ತು ರಾಜ್ಯ ಸರಕಾರ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಿದ್ದು, ವಿಚಾರಣೆ ಅಪೂರ್ಣವಾಗಿದೆ. ಸ್ಪೀಕರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಮತ್ತು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಅವರ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು. ಅಲ್ಲಿಯವರೆಗೂ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿತು.

Comments are closed.