ಕರ್ನಾಟಕ

ಸಿದ್ದರಾಮಯ್ಯ, ಪರಮೇಶ್ವರ್ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ನಾಯಕರು

Pinterest LinkedIn Tumblr


ಸಂಪುಟ ವಿಸ್ತರಣೆಗೆ ಕೈ ಹಾಕಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಪ್ರಾರಂಭವಾಗಿದೆ. ಅತೃಪ್ತರನ್ನ ಸಮಾಧಾನ ಪಡಿಸುವ ಮುನ್ನವೇ ಹಿರಿಯ ನಾಯಕರು ತಿರುಗಿ ಬಿದ್ದಿದ್ದಾರೆ.

ಸಿದ್ದರಾಮಯ್ಯ, ಪರಮೇಶ್ವರ್ ವಿರುದ್ಧವೇ ಸಮರ ಸಾರಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆ ಪಕ್ಷದಿಂದಲೇ ಕಾಲ್ತೆಗೆಯುವ ನಿರ್ಧಾರಕ್ಕೂ ಬಂದಿದ್ದಾರೆ. ಹಿರಿಯ ನಾಯಕರ ಈ ವರ್ತನೆ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ.

ಅತೃಪ್ತರ ಬಂಡಾಯ ಶಮನ ಮಾಡಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ಸರಣಿ ಸಭೆ ನಡೆಸಿ ದಿನಾಂಕ ನಿಗದಿ ಮಾಡಿದ್ದಾರೆ. ಇಬ್ಬರು ಸಚಿವರ ಕೈ ಬಿಟ್ಟು ಪಕ್ಷೇತರರು ಸೇರಿದಂತೆ ಮೂವರಿಗೆ ಅವಕಾಶ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿಸುವ ಚಿಂತಿಸಿದ್ದರು. ಆದರೆ, ಎಲ್ಲವೂ ಸರಿಹೋಯ್ತು ಎಂದು ನಿಟ್ಟುಸಿರು ಬಿಡುವಾಗಲೇ ಪಕ್ಷದ ಹಿರಿಯರು ಸಿಡಿದೆದ್ದಿದ್ದಾರೆ. ತಮಗೆ ಸಚಿವ ಸ್ಥಾನ ಕೈತಪ್ಪಲಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಪ್ರಮುಖ ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಆಕ್ರೋಶಗೊಂಡಿದ್ದಾರೆ. ಸಿದ್ದರಾಮಯ್ಯ ಹಾಗೂ ಡಾ.ಜಿ.ಪರಮೇಶ್ವರ್ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ನೇತೃತ್ವದ ಅತೃಪ್ತರ ತಂಡ ಸರ್ಕಾರ ಹಾಗೂ ಪಕ್ಷದ ವಿರುದ್ಧ ತಿರುಗಿಬಿದ್ದಾಗಲೂ ತುಟಿ ಬಿಚ್ಚಿರಲಿಲ್ಲ. ಆದರೆ ಪಕ್ಷೇತರರಿಗೆ ಸಚಿವ ಸ್ಥಾನ ನೀಡುವ ತೀರ್ಮಾನ ತೆಗೆದುಕೊಂಡಿದ್ದು ಅವರಲ್ಲಿ ಕಿಚ್ಚು ಹೊತ್ತಿಸಿದೆ.

ಹಿರಿಯರಿಗೆ ಅವಕಾಶ ಇಲ್ಲ ಎಂದರೇ ಜಾರ್ಜ್, ದೇಶಪಾಂಡೆಗೆ ಅವಕಾಶ ಕೊಟ್ಟಿದ್ದೇಕೆ..? ಅವರಿಗೊಂದು ನ್ಯಾಯ, ನನಗೊಂದು ನ್ಯಾಯವಾ..? ಎಂದು ಪ್ರಶ್ನಿಸಿದ್ದಾರೆ. ಹಿರಿಯರಿಗೆ ಮಣೆ ಹಾಕದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲವೆಂದು ಹೇಳುವ ಮೂಲಕ ಪರೋಕ್ಷವಾಗಿ ಪಕ್ಷ ತೊರೆಯುವ ಎಚ್ಚರಿಕೆ ನೀಡಿದ್ದಾರೆ. ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡಬೇಕೆಂದು ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ನೇತೃತ್ವದಲ್ಲಿ ಕೆಪಿಸಿಸಿ ಮುಂದೆ ಬೆಂಬಲಿಗರ ಪ್ರತಿಭಟನೆಯೂ ನಡೆಯಿತು. ಅವರಿಗೆ ಸಚಿವ ಸ್ಥಾನ ಸಿಗದಿದ್ದರೆ ನಾವು ಮುಂದಿನ ದಾರಿ ನೋಡಿಕೊಳ್ಳಬೇಕಾಗುತ್ತೆ ಅಂತಲೂ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ, ಮತ್ತೊಬ್ಬ ಕಾಂಗ್ರೆಸ್ ಮುಖಂಡ ರೋಷನ್ ಬೇಗ್‌ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಮತ್ತೆ ಗುಡುಗಿದ್ದಾರೆ. ಸಿದ್ದರಾಮಯ್ಯನ ಮಾತಿನ ವೈಖರಿಯ ರೀತಿಯಲ್ಲೇ ವ್ಯಂಗ್ಯ ಮಾಡಿ ಟೀಕಿಸಿದ್ದಾರೆ. ರಾಮಲಿಂಗಾ ರೆಡ್ಡಿ ಪರ ನಿಲ್ತೇನೆ ಅಂತಲೂ ಹೇಳಿದ್ದಾರೆ.

Comments are closed.