ಕರ್ನಾಟಕ

ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಇಲ್ಲ ಎಂದ ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಮೈತ್ರಿ ಸರ್ಕಾರ ರಚನೆ ಮಾಡಿದ್ದೇವೆ. ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಸರ್ಕಾರವನ್ನು ದುರ್ಬಲಗೊಳಿಸುವ ಕೆಲಸವನ್ನು ನಿರಂತರವಾಗಿ ಬಿಜೆಪಿ ಮಾಡ್ತಾನೇ ಬಂದಿದೆ. ಸತತ ಒಂದು ವರ್ಷದಿಂದ ಈ ಕೆಲಸವನ್ನು ಯಡಿಯೂರಪ್ಪ ಮಾಡ್ತಾನೇ ಬಂದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಸಚಿವರ ಸಭೆ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರ ಈ ಕೃತ್ಯಕ್ಕೆ ಕೆಲ ಮಾದ್ಯಮಗಳೂ ಬೆಂಬಲ ನೀಡುತ್ತಿವೆ. ಮೋದಿಯವರ ಆಡಳಿತ ವೇಳೆ ಕೆಲ ಉಪಚುನಾವಣೆಗಳಲ್ಲಿ ಬಿಜೆಪಿ ಸೋತಿತ್ತು. ಆಗ ನೈತಿಕ ಹೊಣೆ ಹೊತ್ತು ಮೋದಿಯವರು ರಾಜೀನಾಮೆ ಕೊಟ್ರಾ? ಇದೀಗ ಜನಾದೇಶ ಮೋದಿ ಪರವಾಗಿದೆ.‌ ಜನಾದೇಶವನ್ನ ನಾವು ಒಪ್ಪುತ್ತೇವೆ ಎಂದು ಹೇಳಿದರು.

ಬಿಎಸ್​ವೈ ಚುನಾವಣೆಗೆ ಹೋಗುವ ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾವು ಯಡಿಯೂರಪ್ಪ ಹೇಳಿದ ಹಾಗೇ ಕೇಳೋದಿಲ್ಲ. ಜನಾದೇಶಕ್ಕೆ ಮಾತ್ರ ನಾವು ಬೆಲೆ, ಗೌರವ ನೀಡುತ್ತೇವೆ. ನಮಗೆ ಆಪರೇಷನ್ ಕಮಲ ಹಾಗೂ ಬಿಜೆಪಿ ಬಗ್ಗೆ ಯಾವುದೇ ಭಯವಿಲ್ಲ ಎಂದರು.

ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಇಲ್ಲ.‌ ಮುಂದಿನ ದಿನದಲ್ಲಿ ಮಾಡುವುದಾದರೆ ಪುನಾರಚನೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ರಮೇಶ್​ ಜಾರಕಿಹೊಳಿ ಪಕ್ಷ ಬಿಡಲ್ಲ.‌ ಅವರ ಜೊತೆ ಚರ್ಚೆ ನಡೆದಿದೆ.‌ ನಾನೂ ಕೂಡ ಮಾತನಾಡುತ್ತೇನೆ. ರೋಷನ್ ಬೇಗ್ ಅವರಿಗೆ ಕೆಪಿಸಿಸಿ ಅಧ್ಯಕ್ಷರು ನೊಟೀಸ್ ನೀಡಿದ್ದಾರೆ. ರೋಷನ್ ಬೇಗ್ ಏನು ಸಮಜಾಯಿಷಿ ನೀಡುತ್ತಾರೆ ನೋಡೋಣ ಎಂದು ಹೇಳಿದರು.

ಸುದ್ದಿಗೋಷ್ಠಿ ವೇಳೆ ಡಿಸಿಎಂ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಗೂ ಮುನ್ನ ಪರಮೇಶ್ವರ್ ನಿವಾಸದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಕುರಿತು ಸಚಿವರ ಸಭೆ ನಡೆಯಿತು. ಸತತ ಎರಡು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಸಂಪುಟ ಪುನಾರಚನೆಗೆ ಸಚಿವರು ಒಮ್ಮತ ಸೂಚಿಸಲಿಲ್ಲ.

ಒಂದು ವರ್ಷದಲ್ಲಿ ಬರೀ ಉಪಚುನಾವಣೆ, ಲೋಕಸಭೆ ಸಭೆ ಚುನಾವಣೆ ಆಯ್ತು. ಇಷ್ಟನ್ನು ಬಿಟ್ಟು ಬೇರೆ ಮಾಡಲು ಅವಕಾಶ ಎಲ್ಲಿ ಸಿಕ್ಕಿದೆ? ಯಾರೋ‌ ಇಬ್ಬರು ಅಸಮಾಧಾನ ವ್ಯಕ್ತಪಡಿಸಿದರು ಅಂತ ನಮ್ಮನ್ನು ಕೈ ಬಿಡೋದು ಎಷ್ಟು ಸರಿ? 2 ವರ್ಷ ಆದ್ಮೇಲೆ ಬೇಕಿದ್ರೆ ಪುನರ್ ರಚನೆ ಮಾಡಿದ್ರೆ ಅದಕ್ಕೆ ಒಂದು ಅರ್ಥ ಇರುತ್ತೆ. ನಾವೇನು ಐದು ವರ್ಷ ಸಚಿವರಾಗಿಲ್ಲ. ದೇಶಪಾಂಡೆ, ಜಾರ್ಜ್ ಫರ್ನಾಂಡೀಸ್ , ಕೃಷ್ಣಬೈರೇಗೌಡ, ಯುಟಿ ಖಾದರ್ ಐದು ವರ್ಷ ಸಿದ್ದರಾಮಯ್ಯ ಸರ್ಕಾರದಲ್ಲೂ ಸಚಿವರಾಗಿದ್ರೂ ಈಗಲೂ ಸಚಿವರಾಗಿದ್ದಾರೆ. ಅವರನ್ನು ಸಂಪುಟದಿಂದ‌ ಕೈ ಬಿಡಲಿ ನಮ್ಮನ್ನೇಕೆ ಟಚ್ ಮಾಡ್ತೀರಾ ಎಂದು ಸಚಿವೆ ಜಯಮಾಲಾ ಅಸಮಾಧಾನ ವ್ಯಕ್ತಪಡಿಸಿದರು. ಸಚಿವರಾದ ವೆಂಕಟರಮಣಪ್ಪ, ತುಕಾರಾಂ ಮತ್ತು ಪುಟ್ಟರಂಗಶೆಟ್ಟಿ ಅವರೂ ಕೂಡ ಅಸಮಾಧಾನ ಹೊರಹಾಕಿದರು.

ಸತತ ಆರು ವರ್ಷದಿಂದ ಮಂತ್ರಿಯಾದವರು ಈಗ ತ್ಯಾಗ ಮಾಡಲಿ. ಪಕ್ಷ ಕಟ್ಟುವ ಕೆಲಸ ಮಾಡಲಿ. ಮಹಿಳಾ ಕೋಟಾದಲ್ಲಿ ಮಂತ್ರಿಯಾಗಿದ್ದೇನೆ ಎಂದು ಜಯಮಾಲಾ ಹೇಳಿದರೆ, ನಾನು ಸಚಿವನಾಗಿ‌ ನಾಲ್ಕು ತಿಂಗಳಾಗಿದೆ ಎಂದು ತುಕಾರಾಂ ಹೇಳಿದರು. ನಾನು ಒಂದು ವರ್ಷ ಸಚಿವನಾಗಿದ್ದೇನೆ. ಅದರಲ್ಲಿ ಅಧಿಕಾರಿಗಳ ಅಸಹಕಾರದಿಂದ ಕೆಲಸವೇ ಆಗಿಲ್ಲ ಎಂದು ವೆಂಕಟರಮಣಪ್ಪ ಹೇಳಿದರು. ಅಧಿಕಾರ ಜಾಸ್ತಿ ಅನುಭವಿಸಿದವರು ಮೊದಲು ಅಧಿಕಾರ ತ್ಯಾಗ ಮಾಡಲಿ ಎಂದು ಕೆಲ ಸಚಿವರಿಂದ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

Comments are closed.