ಕರ್ನಾಟಕ

ಗೆದ್ದಾದ ಬಳಿಕ ಸುಮಲತಾರಿಗೆ ಇದೀಗ ಎದುರಾಗಿದೆ ನಿಜವಾದ ಸವಾಲು !

Pinterest LinkedIn Tumblr

ಮೈಸೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಗೆ ಜಿಲ್ಲೆಯಲ್ಲಿ ಸಿಕ್ಕಿರುವ ಗೆಲುವು ಅಭೂತಪೂರ್ವ. ಭಾರತೀಯ ಜನತಾ ಪಕ್ಷದಿಂದ ಹಿಡಿದು ರೈತ ಸಂಘ, ಚಲನಚಿತ್ರೋದ್ಯಮ ಮತ್ತು ಬಂಡಾಯ ಕಾಂಗ್ರೆಸ್ ಶಾಸಕರ ಬೆಂಬಲ ದೊರೆತು ಜಿಲ್ಲೆಯಲ್ಲಿ ಅಮೋಘ ಯಶಸ್ಸು ಸಾಧಿಸಿದ್ದಾರೆ. ಆದರೆ ಗೆದ್ದಾದ ಬಳಿಕ ಸುಮಲತಾ ಅವರಿಗೆ ಇದೀಗ ನಿಜವಾದ ಸವಾಲು ಆರಂಭವಾಗಿದೆ.

ಮಂಡ್ಯ ಜಿಲ್ಲೆಗೆ ತಾವು ಚುನಾವಣಾ ಪ್ರಚಾರದ ವೇಳೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಮಂಡ್ಯ ಜನರ ಪ್ರೀತಿಯನ್ನು ಉಳಿಸಿಕೊಳ್ಳುವುದು ಕಷ್ಟ. ಆದರೆ ಜಿಲ್ಲೆಯಲ್ಲಿರುವ 8 ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಜನತೆಗೆ ಬೇಕಾಗಿರುವ ಕೆಲಸ ಮಾಡಿಸಿಕೊಡುವುದು ಹೇಳಿದಷ್ಟು ಸುಲಭವಲ್ಲ.

ಸುಮಲತಾ ಅವರಿಗೆ ಜೆಡಿಎಸ್ ನ ಸವಾಲು ಶಾಸಕರದ್ದು ಮಾತ್ರವಲ್ಲ, ಅದು ಜಿಲ್ಲಾ ಪಂಚಾಯತ್ ನಿಂದ ಹಿಡಿದು ತಾಲ್ಲೂಕು ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳವರೆಗೆ ಮುಂದುವರಿದಿದೆ. ಇಲ್ಲಿ ಕೂಡ ಜೆಡಿಎಸ್ ನದ್ದೇ ಪಾರುಪತ್ಯವಿದೆ. ಜಿಲ್ಲೆಯ ಮತದಾರರ ಬೇಡಿಕೆಗಳನ್ನು ಈಡೇರಿಸಲು ಸುಮಲತಾ ಅವರು ಈ ನಾಯಕರುಗಳ ಜೊತೆ ಪ್ರತಿ ಹಂತದಲ್ಲಿಯೂ ನಗುಮುಖ ಹಾಕಿಕೊಂಡು ವ್ಯವಹರಿಸುತ್ತಿರಬೇಕಾಗುತ್ತದೆ.ಇಲ್ಲವೇ ಸೆಣಸಾಡಬೇಕಷ್ಟೆ.

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಾರುಪತ್ಯ ಹೊಂದಿಲ್ಲ ಎಂಬುದು ಸುಮಲತಾ ಅವರಿಗೆ ಚೆನ್ನಾಗಿ ಗೊತ್ತಿದೆ, ಹೀಗಾಗಿ ಅವರು ಬಿಜೆಪಿ ಸೇರುವ ಸಾಧ್ಯತೆಯಿಲ್ಲ. ಅಂಬರೀಷ್ ಅವರ ಪರಂಪರೆಯಿಂದಾಗಿ ಸ್ಥಳೀಯ ಕಾಂಗ್ರೆಸ್ಸಿಗರ ಜೊತೆ ಸುಮಲತಾ ಉತ್ತಮ ಬಾಂಧ್ಯವ್ಯ ಹೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸುಮಲತಾ ಬಿಜೆಪಿ ಸೇರಿದರೆ ಅವರು ಬೆಂಬಲ ನೀಡದಿರಬಹುದು. ಆದರೆ ಕೇಂದ್ರದಲ್ಲಿ ಎನ್ ಡಿಎ ಸರ್ಕಾರದಿಂದ ಸುಮಲತಾ ಅವರಿಗೆ ಬೆಂಬಲ ಸಿಗಬೇಕೆಂದರೆ ಬಿಜೆಪಿ ನಾಯಕರ ಜೊತೆ ಕೂಡ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕಾಗುತ್ತದೆ.

ಇಲ್ಲಿ ಯಾವುದೇ ದ್ವಂದ್ವ ನೀತಿ ಅನುಸರಿಸಿದರೂ ಕೂಡ ಎನ್ ಡಿಎ ಮತ್ತು ರಾಜ್ಯ ಸರ್ಕಾರದಿಂದ ಬೆಂಬಲ ಸಿಗುವುದು ಸುಮಲತಾಗೆ ಕಷ್ಟ. ರಾಜ್ಯದಲ್ಲಿ ಜೆಡಿಎಸ್ ನ ಮೈತ್ರಿ ಪಕ್ಷವಾಗಿರುವುದರಿಂದ ಕಾಂಗ್ರೆಸ್ ಮುಕ್ತವಾಗಿ ಬಹಿರಂಗವಾಗಿ ಬೆಂಬಲ ನೀಡುತ್ತೇನೆ ಎಂದು ಹೇಳುವುದು ಕಷ್ಟ.

ಈ ಮಧ್ಯೆ ಜಿಲ್ಲೆಯಲ್ಲಿ ಈಡೇರಿಸಬೇಕಾದ ಬೇಡಿಕೆಗಳು ಸುಮಲತಾಗೆ ಹಲವು ಇದೆ. ಮಂಡ್ಯದಲ್ಲಿನ ನೀರಾವರಿ ಸಮಸ್ಯೆ, ಸಕ್ಕರೆ ಕಾರ್ಖಾನೆ, ಕಬ್ಬು ಬೆಳೆಗಾರರ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆ, ನಿರುದ್ಯೋಗ, ಜನರು ವಲಸೆ ಹೋಗುವುದನ್ನು ತಡೆಗಟ್ಟುವಿಕೆ ಇತ್ಯಾದಿಗಳನ್ನು ಈಡೇರಿಸಲು ರಾಜ್ಯ ರೈತ ಸಂಘ ಮುಂದಿನ ದಿನಗಳಲ್ಲಿ ಸುಮಲತಾ ಮೇಲೆ ಹೆಚ್ಚಿನ ಒತ್ತಡ ಹೇರಲಿದೆ.

ಈ ಮಧ್ಯೆ ಕಳೆದ ಭಾನುವಾರ ಸುಮಲತಾ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು ಕಾಂಗ್ರೆಸ್ ನ ನಾಯಕರಿಗೆ ಇಷ್ಟವಾಗಿಲ್ಲ, ಸುಮಲತಾ ತಮ್ಮ ಮುಂದಿನ ನಡೆಯನ್ನು ಕಾಂಗ್ರೆಸ್ ನ ತಮ್ಮ ಬೆಂಬಲಿಗರ ಜೊತೆ ಚರ್ಚಿಸಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ನಾವು ನಮ್ಮ ಕೆಲಸ ಮಾಡಿದ್ದೇವೆ, ಸುಮಲತಾ ಅವರು ಸಾಕಷ್ಟು ಬಹುಮತದಿಂದ ಗೆಲ್ಲಲು ನಮ್ಮ ಪರಿಶ್ರಮ ಕೂಡ ಸಾಕಷ್ಟಿದೆ. ಇಂತಹ ಸಂದರ್ಭದಲ್ಲಿ ತಮ್ಮ ಬೆಂಬಲಿಗರನ್ನು ಗೌರವದಿಂದ ನೋಡಿಕೊಳ್ಳುವುದು ಅವರ ಕರ್ತವ್ಯ. ಬಿಜೆಪಿಯಾಗಲಿ, ಚಲನಚಿತ್ರ ನಟರಾಗಲಿ ದೀರ್ಘಕಾಲದವರೆಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂಬುದನ್ನು ಸುಮಲತಾ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಜಿಲ್ಲೆಯ ಮಾಜಿ ಸಚಿವರೊಬ್ಬರು.

Comments are closed.