ಕರ್ನಾಟಕ

ಬಿಜೆಪಿ ರಾಜ್ಯದಲ್ಲಿ 25 ಸ್ಥಾನ ಗೆಲ್ಲಲು ಇದು ಪ್ಲಸ್ ಪಾಯಿಂಟ್ ಆಯ್ತಾ?

Pinterest LinkedIn Tumblr


ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರ ಅಭೂತಪೂರ್ವ ಗೆಲುವನ್ನು ಸಾಧಿಸಿದೆ. ಕರ್ನಾಟಕದಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದೆ. ಗೆದ್ದಿದ್ದೇವೆ ಎಂದು ಬೀಗುವುದಲ್ಲ. ಬಿಜೆಪಿ ಸಂಸದರ ಜವಾಬ್ದಾರಿ ಇನ್ನೂ ಹೆಚ್ಚಿದೆ.

ಕರ್ನಾಟಕದಿಂದ ಆಯ್ಕೆಯಾಗಿರುವ ಬಿಜೆಪಿಯ ಗೌರವಾನ್ವಿತ 25 ಮಂದಿ ಸಂಸದರೇ… ಮೊದಲನೆಯದಾಗಿ ನಿಮ್ಮ ಅಭೂತಪೂರ್ವ ಗೆಲುವಿಗೆ ಶುಭಾಶಯಗಳು.

ನೇರವಾಗಿ ವಿಷಯಕ್ಕೆ ಬರೋಣ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕ ಮಾತ್ರ ಭಾರತೀಯ ಜನತಾ ಪಕ್ಷಕ್ಕೆ ಅಭೂತಪೂರ್ವ ಜಯ ದಕ್ಕಿಸಿಕೊಟ್ಟಿದೆ. ಹೀಗಿದ್ದಾಗ ಈ ಮಣ್ಣಿನ ಋುಣ ತೀರಿಸುವ ಅದ್ಭುತಾವಕಾಶ ನಿಮ್ಮೆದುರಿಗಿದೆ.

ದಕ್ಷಿಣದ ಉಳಿದ ರಾಜ್ಯಗಳ ಜನರಂತೆ ತಮ್ಮ ರಾಜ್ಯವನ್ನೊಂದೇ ಆದ್ಯತೆಯಾಗಿ ಇರಿಸಿಕೊಳ್ಳದೆ ಕನ್ನಡಿಗರು ದೇಶವೂ ರಾಜ್ಯದಷ್ಟೇ ಮುಖ್ಯ ಎಂಬುದನ್ನು ಅರಿತೇ ನಿಮಗೆ ಇಷ್ಟುದೊಡ್ಡ ಜಯ ದೊರಕಿಸಿಕೊಟ್ಟಿದ್ದಾರೆ. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷರೇ 22 ಗೆಲ್ತೀವಿ ಅಂತಿದ್ದಾಗ 25 ಸೀಟು ಗೆಲ್ಲಿಸಿಕೊಟ್ಟಿದ್ದಾರೆ. ಹಾಗಾದಾಗ ನಿಮ್ಮ ಜವಾಬ್ದಾರಿ ತುಂಬಾ ಜಾಸ್ತಿ ಇದೆ.

ರಾಷ್ಟ್ರದ ವಿಷಯದಲ್ಲಿ ನೀವು ರಾಜಿಯಾಗುವುದಿಲ್ಲ, ರಾಷ್ಟ್ರವಾದ ನಿಮ್ಮ ಶಕ್ತಿ ಅಂತ ನಿರೂಪಿಸಿದ್ದೀರಿ. ಆದರೆ ರಾಜ್ಯದ ಸಂಸದರಾದ ನೀವು 25 ಜನರು ಈ ನೆಲ ಜಲ ಭಾಷೆಗೆ ಏನಾದರೂ ಮಾಡಲೇಬೇಕಲ್ಲವೇ?

ಕಾವೇರಿ ಶತಮಾನದ ಸಮಸ್ಯೆ

ಇದಕ್ಕೊಂದು ಶಾಶ್ವತ ಪರಿಹಾರ ದೊರಕಿಸಲು ಇದು ಸಕಾಲ. ನಮಗೂ ಅರಿವಿದೆ, ಈ ಸಮಸ್ಯೆ ನ್ಯಾಯಾಲಯದಲ್ಲಿದೆ, ಇದಕ್ಕೆ ಇದರದ್ದೇ ಆದ ರಾಜಕೀಯ ದಾಳಗಳಿವೆ ಎಂದು. ಆದರೆ ಕಾವೇರಮ್ಮ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಬಾರದು. ಎಲ್ಲೆಲ್ಲೋ ಸಾವಿರಾರು ಕೋಟಿ ಹರಿದು ಹೋಗುವಾಗ, ನಮ್ಮ ನಾಡಿನ ಜನರ ದಾಹವನ್ನು ನೀಗಿಸುವಂತೆ ಕಾವೇರಿ ಕೊಳ್ಳದಲ್ಲಿ ಕೆಲಸ ಮಾಡಿ ತೋರಿಸಿ. ಕಾವೇರಿಗಾಗಿ ಒಗ್ಗಟ್ಟಿನ ಧ್ವನಿಯಾಗಿ ನಿಲ್ಲಿ.

ಮಹದಾಯಿ ಇನ್ನೊಂದು ಸಮಸ್ಯೆ

ಉತ್ತರ ಕರ್ನಾಟಕದ ಎಲ್ಲ ಜನರ ಬೇಡಿಕೆ, ಕೋರಿಕೆ, ಮನವಿ, ಹೋರಾಟ ಮಹದಾಯಿಗಾಗಿ. ಯಾಕೆ ನಿಮಗೆ ಅದರ ಬಗ್ಗೆ ನಿರ್ಲಕ್ಷ್ಯ? ನಿಮ್ಮನ್ನು ಉತ್ತರ ಕರ್ನಾಟಕದ ಜನರಂತೂ ನೂರಕ್ಕೆ ನೂರರಷ್ಟು ನಂಬಿದ್ದಾರೆ. ಯಾಕೆ ನೀವು ಅವರ ಧ್ವನಿಯಾಗಬಾರದು? ಮಹದಾಯಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸುವ ಮೂಲಕ ನೀವೆಲ್ಲಾ ಯಾಕೆ ಮಹಾನುಭಾವರಾಗಬಾರದು?

ರೈತರದು ಮತ್ತೊಂದು ಸಮಸ್ಯೆ

ರಾಜ್ಯದ ಸಾವಿರಾರು ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಕೇಂದ್ರದ ಯಾವುದೇ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಅವುಗಳನ್ನು ಪ್ರತಿ ರೈತನಿಗೂ ತಲುಪಿಸುವ ನಿಟ್ಟಿನಲ್ಲಿ ನೀವು ಶ್ರಮಿಸುವುದು ಅನಿವಾರ್ಯ. ಇಲ್ಲವಾದಲ್ಲಿ 25 ಜನ ಗೆದ್ದರೇನು ಲಾಭ? ಹೇಗಿದ್ದರೂ ಕೇಂದ್ರ ಸರ್ಕಾರ ನಿಮ್ಮದೇ ಇರುತ್ತದೆ.

ಹಿಂದಿ ಸಾಕು, ಕನ್ನಡ ಬೇಕು

ಬಿಜೆಪಿಯ ವಿಚಾರದಲ್ಲಿ ರಾಜ್ಯದ ಕನ್ನಡಿಗರ ಬೇಸರವಿರುವುದೇ ಹಿಂದಿ ವಿಚಾರದಲ್ಲಿ. ನಾವ್ಯಾರೂ ಹಿಂದಿ ಭಾಷೆಯ ವಿರೋಧಿಗಳಲ್ಲ, ಹಿಂದಿಯ ಅನಗತ್ಯ ಹೇರಿಕೆಯ ವಿರೋಧಿಗಳಷ್ಟೇ. ದಕ್ಷಿಣ ಭಾರತದಲ್ಲೇ ಅತಿಹೆಚ್ಚು ತೆರಿಗೆ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡುವ ರಾಜ್ಯ ನಮ್ಮದು.

ಹೀಗಿದ್ದಾಗ ಈ ನೆಲದಲ್ಲಿ ಕನ್ನಡ ಭಾಷೆಯ ಬಗ್ಗೆ ತಿರಸ್ಕಾರ ಭಾವ ಯಾಕೆ? ನಾವು ಕನ್ನಡಿಗರು ಕೇಳುವುದಿಷ್ಟೆ- ಹಿಂದಿ ಮಾತಾಡುವ ರಾಜ್ಯದಲ್ಲಿ ನಾವು ಕನ್ನಡ ಬಳಸಬೇಕು ಎನ್ನುವುದಿಲ್ಲ. ನಮ್ಮ ರಾಜ್ಯದಲ್ಲಿ ಕನ್ನಡವನ್ನು ನೂರ್ಕಾಲ ಜೀವಂತವಾಗಿಡಲು ಕನ್ನಡದ ಜೊತೆಗಿರಿ ಎಂದು ನಿಮ್ಮನ್ನು ಕೇಳುತ್ತೇವೆ.

ರಾಜ್ಯದಲ್ಲಿ ಹೆಚ್ಚು ಜನರಿಗೆ ಅರ್ಥವಾಗುವ, ಓದಲು ಬರೆಯಲು ಬರುವ ಭಾಷೆ ಕನ್ನಡ ಮತ್ತು ಇಂಗ್ಲಿಷ್‌. ಹೀಗಿದ್ದಾಗ ನಮಗೆ ಹಿಂದಿಯ ಅವಶ್ಯಕತೆ ಏನಿದೆ? ಈ ವಿಚಾರ ಬಂದಾಗ ನೀವು ಬಿಜೆಪಿ ಸಂಸದರಾಗುವ ಮೊದಲು ಕರ್ನಾಟಕದ ಸಂಸದರಂತೆ ವರ್ತಿಸಿ.

ಸಾಕಷ್ಟುಕೇಂದ್ರದ ಪರೀಕ್ಷೆಗಳು ಯಾಕೆ ಹಿಂದಿ, ಇಂಗ್ಲಿಷಿಗಷ್ಟೇ ಸೀಮಿತ? ಆಯಾ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಯಲ್ಲೇ ಪರೀಕ್ಷೆ ಬರೆಯಲು ಅವಕಾಶವಿರುವಾಗ, ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆದು ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡಿ. ಉದಾಹರಣೆಗೆ ಬ್ಯಾಂಕಿಂಗ್‌ ಪರೀಕ್ಷೆಗಳು. ನಮ್ಮವರ ಕೆಲಸ ನಮ್ಮವರಿಗೇ ಸಿಗಲಿ. ಅಲ್ಲೂ ಅವರೇ, ಇಲ್ಲೂ ಅವರೇ ಅಂದರೆ ಒಪ್ಪುವುದು ಹೇಗೆ?

ಕನ್ನಡಕ್ಕಾಗಿ ಇನ್ನಷ್ಟು..

ಕನ್ನಡ ಬರಿಯ ಅಮ್ಮನ ಭಾಷೆಯಾಗುವುದು ಮಾತ್ರವಲ್ಲದೆ ಅನ್ನದ ಭಾಷೆಯೂ ಆಗುವಂತೆ ಮಾಡುವುದು ನಿಮ್ಮ ಕೈಲಿದೆ. ಆ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಸತತವಾಗಿರಲಿ. ಹಾಗಾದಾಗ ಕನ್ನಡಿಗರ ಉದ್ಯೋಗ ಬೇಡಿಕೆಗೊಂದು ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ.

ಕೇಂದ್ರದ ಎಲ್ಲಾ ವೆಬ್‌ಸೈಟ್‌ಗಳಲ್ಲಿ ಕನ್ನಡವೂ ಸ್ಥಾನ ಪಡೆಯಲಿ. ರಾಜ್ಯದ ಯಾವುದೇ ಮೂಲೆಯ ಕನ್ನಡಿಗನೂ ಕೇಂದ್ರದ ಪ್ರತಿ ವೆಬ್‌ಸೈಟ್‌ ನೋಡಿ ಮಾಹಿತಿ ಪಡೆಯುವಂತಾಗಲಿ. ಪ್ರಯತ್ನ ನಿಮ್ಮದು.. ಫಲ ಕನ್ನಡಿಗರಿಗೆ.

ಎಂಟನೇ ಪರಿಚ್ಛೇದದಲ್ಲಿರುವ 22 ಭಾಷೆಗಳೂ ರಾಷ್ಟ್ರದ ಅಧಿಕೃತ ಭಾಷೆಗಳು ಎಂದಾದ ಮೇಲೆ ಒಂದು ದೊಡ್ಡದು, ಮತ್ತೊಂದು ಸಣ್ಣದು ಹೇಗಾಗುತ್ತದೆ? ನಮ್ಮ ಭಾಷೆ ನಮ್ಮ ಹೆಮ್ಮೆ ಎಂಬುದನ್ನು ಸಂಸತ್ತಲ್ಲಿ ಅರ್ಥ ಮಾಡಿಸಿಕೊಡಿ.

ಎಂಟನೇ ಪರಿಚ್ಛೇದಕ್ಕೆ ರಾಜ್ಯದ ಬಹುಭಾಷಿಕರು ಮಾತಾಡುವ ತುಳು ಭಾಷೆಯನ್ನು ಸೇರಿಸುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಸಾಗಲಿ. 14 ಲಕ್ಷ ಜನ ಮಾತಾಡುವ ಬೋಡೋ, ನೇಪಾಳದ ನೇಪಾಳಿ, 20 ಲಕ್ಷ ಜನರ ಭಾಷೆಯಾಗಿರುವ ಮೈಥಿಲಿ ಎಂಟನೇ ಪರಿಚ್ಛೇದದಲ್ಲಿರುವಾಗ ಕರ್ನಾಟಕ, ಕೇರಳ, ಮಹಾರಾಷ್ಟ್ರದ ಲಕ್ಷಾಂತರ ಜನರ ಭಾಷೆಯಾಗಿರುವ ತುಳು ಯಾಕೆ ಎಂಟನೇ ಪರಿಚ್ಛೇದಕ್ಕೆ ಸೇರಬಾರದು?

ಜನ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಿ

ಎಲ್ಲ ವರ್ಗಕ್ಕೂ ನ್ಯಾಯ ಒದಗಿಸುವ ಕೆಲಸ ನಿಮ್ಮಿಂದಾಗಲಿ. ನೀವು ಬರಿಯ 25 ಸಂಸದರಷ್ಟೇ ಅಲ್ಲ, ಕರ್ನಾಟಕದ ಪ್ರತಿನಿಧಿಗಳೂ ಹೌದು. ದೇಶದ ಬಗೆಗಿರುವ ಕಾಳಜಿ ರಾಜ್ಯದ ಮೇಲೂ ಇರಲಿ. ಕರ್ನಾಟಕದ ಸಂಸದರಾಗಿರುವ ನೀವು ಪ್ರತಿಜ್ಞಾವಿಧಿಯನ್ನು ಕನ್ನಡದಲ್ಲೇ ಸ್ವೀಕರಿಸುವುದರೊಂದಿಗೆ ನಿಮ್ಮ ನೆಲಜಲದ ಪರವಾದ ಧ್ವನಿ ಗಟ್ಟಿಯಾಗಲಿ. ನಾಡಿನ ಜನ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಿ. ಈ ಸಲ ನೀವು ಎಚ್ಚರ ತಪ್ಪಿದರೆ ಮತ್ತೈದು ವರ್ಷದಲ್ಲಿ ಮತ್ತೊಂದು ಚುನಾವಣೆ ನಮ್ಮ ಕೈಲಿದೆ, ನಿನಪಿರಲಿ.

Comments are closed.