ಕರ್ನಾಟಕ

ಗೆಲುವಿನ ನಗೆ ಬೀರಲಿರುವ ಗೌಡರ ಮೊಮ್ಮಗ ಪ್ರಜ್ವಲ್!?

Pinterest LinkedIn Tumblr


ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಾಲಿನ ನಾಲ್ಕು ಅತಿ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಹಾಸನವೂ ಒಂದು. ಇವತ್ತು ಹೊರಬಂದ ಮತಗಟ್ಟೆ ಸಮೀಕ್ಷೆ ಪ್ರಕಾರ ಹಾಸನವು ಜೆಡಿಎಸ್​ನ ಭದ್ರಕೋಟೆಯಾಗಿ ಮುಂದುವರಿಯಲಿದೆ. ಜೀವನದಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರು ರಾಜಕೀಯ ಅನುಭವಿ ಎ. ಮಂಜು ಅವರನ್ನು ಸೋಲಿಸುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.

ಹಾಸನ ಚುನಾವಣೆ ಎರಡು ಕಾರಣಕ್ಕೆ ಪ್ರಾಮುಖ್ಯತೆ ಪಡೆದಿದೆ. ಒಂದನೆಯದು, ದೇವೇಗೌಡರ ಮೊಮ್ಮಗ ಹಾಗೂ ಹೆಚ್.ಡಿ. ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶ ಕೊಟ್ಟಿದ್ದು; ಎರಡನೆಯದು, ದೇವೇಗೌಡರ ಕುಟುಂಬದ ಕಡುವಿರೋಧಿ ಅರಕಲಗೂಡು ಎ.ಮಂಜು ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಆ ಪಕ್ಷದ ಅಭ್ಯರ್ಥಿಯಾಗಿ ನಿಂತು ಸೆಡ್ಡು ಹೊಡೆದದ್ದು. ದೇವೇಗೌಡರು ಬಿಟ್ಟು ಆ ಕುಟುಂಬದಿಂದ ಬೇರೆ ಯಾರೇ ನಿಂತರೂ ಪ್ರತಿಸ್ಪರ್ಧಿಯಾಗುವುದೇ ಸೈ ಎಂದು ತೊಡೆ ತಟ್ಟುತ್ತಲೇ ಮಂಜು ಅಖಾಡಕ್ಕೆ ಧುಮುಕಿದವರು.

ಪ್ರಜ್ವಲ್​ಗೆ ಅನುಕೂಲವಾದ ಅಂಶಗಳು:

ಈ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಎದುರಿಸದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ತಮ್ಮ ಕುಟುಂಬ ಹಾಕಿದ ರಾಜಕೀಯ ಬುನಾದಿಯೇ ಆಧಾರ. ಜೊತೆಗೆ, ತಮ್ಮ ತಂದೆ ರೇವಣ್ಣ, ತಾಯಿ ಭವಾನಿ ರೇವಣ್ಣ ಅವರ ಪರ ಚುನಾವಣಾ ಪ್ರಚಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅನುಭವಗಳೂ ಅವರಿಗೆ ಪ್ಲಸ್ ಪಾಯಿಂಟ್. ಮಂಡ್ಯದಲ್ಲಿ ತಮ್ಮ ಚಿಕ್ಕಪ್ಪನ ಮಗನಿಗೆ ಸೃಷ್ಟಿಯಾಗಿದ್ದ ಪ್ರತಿಕೂಲ ವಾತಾವರಣ ಹಾಸನಕ್ಕೆ ಆವರಿಸದಿದ್ದುದು ಪ್ರಜ್ವಲ್ ಅದೃಷ್ಟ. ರಾಜಕೀಯ ಚಾಣಾಕ್ಷ್ಯರೆನಿಸಿದ ತಮ್ಮ ತಂದೆ ಹೆಚ್.ಡಿ. ರೇವಣ್ಣ ಅವರ ರಾಜಕೀಯ ವಿದ್ಯೆಗಳು ಪ್ರಜ್ವಲ್ ನೆರವಿಗೆ ಬಂದಂತಿವೆ. ಪ್ರಜ್ವಲ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾಗುತ್ತಿದ್ದಂತೆಯೇ ರೇವಣ್ಣ ಅವರು ಜಿಲ್ಲೆಯ ಅನೇಕ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿ ಬೆಂಬಲ ಕೋರುವ ಮುತ್ಸದ್ದಿತನವನ್ನು ತೋರಿದರು. ಇದು ಪ್ರಜ್ವಲ್ ರೇವಣ್ಣಗೆ ಹೆಚ್ಚೂಕಡಿಮೆ ಶ್ರೀರಕ್ಷೆಯಾಗಿ ಪರಿಣಮಿಸಿದಂತಿದೆ. ಹಾಗೆಯೇ, ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಪ್ರಜ್ವಲ್ ಸಾಕಷ್ಟು ಚಿರಪರಿಚಿತರಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ ನಿಂತಿರದಿದ್ದರೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ ಸ್ವಂತವಾಗಿಯೇ ಒಂದಷ್ಟು ಬೆಂಬಲ ವರ್ಗ ಸೃಷ್ಟಿಸಿಕೊಂಡಿದ್ದರು. ಇದೂ ಕೂಡ ಅವರಿಗೆ ಅನುಕೂಲ ಮಾಡಿಕೊಟ್ಟಿರಬಹುದು.

ಮಂಜು ಲೆಕ್ಕಾಚಾರಗಳು ಏನಿದ್ದವು?

ಇನ್ನು, ಹಾಸನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇರುವ ಸಾಂಪ್ರದಾಯಿಕ ಜಿದ್ದಾಜಿದ್ದಿಯ ಅಂಶವನ್ನು ನೆಚ್ಚಿಕೊಂಡು ಅರಕಲಗೂಡು ಮಂಜು ಅವರು ಬಿಜೆಪಿ ಸೇರಿ ಗೌಡ ಕುಟುಂಬದ ವಿರುದ್ಧ ತೊಡೆತಟ್ಟುವ ಧೈರ್ಯ ತೋರಿದ್ದರು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಒಟ್ಟು ಮತಗಳು ಜೆಡಿಎಸ್ ಗಳಿಸಿದ್ದಕ್ಕಿಂತ ಹೆಚ್ಚೇ ಇದೆ. ಎರಡೂ ಪಕ್ಷಗಳ ಬೆಂಬಲಿಗರು ಈ ಬಾರಿ ತಮ್ಮ ಕೈಹಿಡಿದರೆ ಗೆಲುವಿನ ಮಾಲೆ ಸುಲಭವಾಗಿ ಸಿಗುತ್ತದೆ. ನರೇಂದ್ರ ಮೋದಿ ಅವರ ಅಲೆಯೂ ತಮಗೆ ಅನುಕೂಲ ಮಾಡಿಕೊಡುತ್ತದೆ ಎಂಬ ಲೆಕ್ಕಾಚಾರದಲ್ಲಿ ಮಂಜು ಇದ್ದರು. ಆದರೆ, ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರೆಲ್ಲರನ್ನೂ ಸಂಪೂರ್ಣವಾಗಿ ಸೆಳೆಯುವಲ್ಲಿ ಮಂಜು ಸ್ವಲ್ಪಮಟ್ಟಿಗೆ ವಿಫಲರಾದಂತಿದೆ. ತೆನೆಹೊತ್ತ ಮಹಿಳೆಯನ್ನು ಅಲುಗಾಡಿಸುವಷ್ಟು ಪ್ರಬಲವಾಗಿ ಇಲ್ಲಿ ಮೋದಿ ಅಲೆ ಎದ್ದಿಲ್ಲದಿರಬಹುದು.

ಅಲ್ಲದೇ, ಈ ಚುನಾವಣೆ ಜೆಡಿಎಸ್ ಪಾಲಿಗೆ ಅಸ್ತಿತ್ವದ ಪ್ರಶ್ನೆಯೂ ಆಗಿದ್ದರಿಂದ ಒಕ್ಕಲಿಗ ಸಮುದಾಯದವರು ಸಂಪೂರ್ಣವಾಗಿ ಜೆಡಿಎಸ್ ಪರ ನಿಂತಿರುವಂತಿದೆ. ಹಾಸನದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಜೆಡಿಎಸ್ ಹಿಡಿತಲ್ಲೇ ಇವೆ. ಹೊಳೆನರಸೀಪುರ, ಶ್ರವಣಬೆಳಗೊಳದಲ್ಲಿ ಅತೀ ಹೆಚ್ಚು ಮತಗಳು ಪ್ರಜ್ವಲ್ ಅವರಿಗೆ ಸಿಕ್ಕಿರುವ ಸಾಧ್ಯತೆ ಇದೆ. ಅಲ್ಲದೇ, ಕಡೂರು ಹೊರತುಪಡಿಸಿ ಉಳಿದ ಏಳು ಕ್ಷೇತ್ರಗಳಲ್ಲಿ ಒಕ್ಕಲಿಗರ ಬಾಹುಳ್ಯವಿದೆ. ಇದು ಜೆಡಿಎಸ್​ಗೆ ವರದಾನವಾಗಿ ಪರಿಣಮಿಸಿದೆ.

ಇನ್ನು ಹಾಸನ, ಕಡೂರಿನಲ್ಲಿ ಬಿಜೆಪಿ ಶಾಸಕರಿದ್ಧಾರೆ. ಸಕಲೇಶಪುರ, ಬೇಲೂರು, ಅರಸೀಕೆರೆಯಲ್ಲೂ ಬಿಜೆಪಿ ಪ್ರಬಲವಾಗಿದೆ. ಅರಕಲಗೂಡಿನಲ್ಲಿ ಕಾಂಗ್ರೆಸ್ ಪ್ರಬಲವಿದೆ. ಈ ಆರು ವಿಧಾನಸಭಾ ಕ್ಷೇತ್ರಗಳಿಂದ ತಮ್ಮ ಗೆಲುವಿಗೆ ಬೇಕಷ್ಟು ಮತಗಳು ಸಿಗಬಹುದು ಎಂಬ ಮಂಜು ಲೆಕ್ಕಾಚಾರ ತಪ್ಪಿ ಹೋದಂತಿದೆ.

ಮತಗಟ್ಟೆ ಸಮೀಕ್ಷೆಗಳು ಪ್ರಜ್ವಲ್ ರೇವಣ್ಣ ಅವರು ಗೆಲ್ಲಬಹುದೆಂದು ಅಭಿಪ್ರಾಯಪಡುತ್ತಿದ್ದರೂ ಮೇ 23ರಂದು ಮತದಾರರ ನಿಜ ನಿರ್ಣಯ ಹೊರಬರಲಿದೆ.

2014ರ ಚುನಾವಣೆಯ ಫಲಿತಾಂಶ:
ಹೆಚ್.ಡಿ. ದೇವೇಗೌಡ(ಜೆಡಿಎಸ್): 5,09,841
ಎ. ಮಂಜು(ಕಾಂಗ್ರೆಸ್): 4,09,379
ಸಿ.ಹೆಚ್. ವಿಜಯಶಂಕರ್(ಬಿಜೆಪಿ): 1,65,688

ಹಾಸನ ಲೋಕಸಭೆ ಕ್ಷೇತ್ರದ ವಿವರ:
ಒಟ್ಟು ವಿಧಾನಸಭಾ ಕ್ಷೇತ್ರಗಳು: 8
ಒಟ್ಟು ಮತದಾರರು: 16,29,587
ಪುರುಷರು: 8,22,399
ಮಹಿಳೆಯರು: 8,07,188

ವಿವಿಧ ವಿಧಾನಸಭಾ ಕ್ಷೇತ್ರಗಳ ಮತದಾರರ ಪ್ರಮಾಣ:
1) ಶ್ರವಣಬೆಳಗೊಳ: 2,01,509
2) ಹೊಳೆನರಸೀಪುರ: 2,12,593
3) ಹಾಸನ: 2,16,363
4) ಅರಕಲಗೂಡು: 2,19,519
5) ಸಕಲೇಶಪುರ: 1,97,437
6) ಬೇಲೂರು: 1,93,040
7) ಅರಸೀಕೆರೆ: 2,10,725
8) ಕಡೂರು: 2,00,813

Comments are closed.