ಕರ್ನಾಟಕ

ಕುಮಾರಸ್ವಾಮಿಗೆ ತಾಕತ್ತು​ ಇದ್ದರೆ ಸಿದ್ದರಾಮಯ್ಯನವರನ್ನು ಕಾವೇರಿ ನಿವಾಸದಿಂದ ಹೊರಹಾಕಲಿ; ಜಗದೀಶ್​​ ಶೆಟ್ಟರ್​

Pinterest LinkedIn Tumblr


ಹುಬ್ಬಳ್ಳಿ: ಕುಮಾರಸ್ವಾಮಿಗೆ ಧಮ್​ ಇದ್ದರೆ ಸಿದ್ದರಾಮಯ್ಯನವರನ್ನು ಕಾವೇರಿ ಬಂಗಲೆಯಿಂದ ಹೊರಗೆ ಹಾಕಲಿ ಎಂದು ಮಾಜಿ ಸಿಎಂ ಜಗದೀಶ್​​ ಶೆಟ್ಟರ್​ ಸವಾಲು ಹಾಕಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೊತೆಗೆ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇರದಿದ್ದರೂ ಕಾವೇರಿ ನಿವಾಸದಲ್ಲಿ ವಾಸವಿರುವುದಕ್ಕೆ ಕಿಡಿಕಾರಿದರು. ಇದಕ್ಕಾಗಿ ಸಿಎಂ ಕುಮಾರಸ್ವಾಮಿ ಅವರಿಗೆ ಬಹಿರಂಗ ಸವಾಲೆಸೆದರು. ಕೆ.ಜೆ.ಜಾರ್ಜ್​ ಅವರ ಹೆಸರಿನಲ್ಲಿ ಸಿದ್ದರಾಮಯ್ಯ ಪುಕ್ಕಟೆಯಾಗಿ, ಅನಧಿಕೃತವಾಗಿ ಕಾವೇರಿ ನಿವಾಸದಲ್ಲಿ ವಾಸವಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರ ಮೇಲೆ ಲೋಕಾಯುಕ್ತದಲ್ಲಿ 71 ಕೇಸುಗಳಿವೆ. ಭ್ರಷ್ಟಾಚಾರ, ಅಧಿಕಾರ ದುರುಪಯೋಗದ ಪ್ರಕರಣಗಳಿವೆ. ನಿಮಗೆ ಯಡಿಯೂರಪ್ಪನವರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಜಾಮೀನು ಸಿಗದ ಕಾರಣ ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಡಿಕೆಶಿ ಜೊತೆ ಕುಳಿತು ಊಟ ಮಾಡ್ತೀರಲ್ಲ, ಅವರಿಗೆ ಜಾಮೀನು ಸಿಗದಿದ್ರೆ ಜೈಲಿಗೆ ಹೋಗ್ತಾರೆ. ನಿಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜಾಮೀನು ಸಿಗದಿದ್ದರೆ ಜೈಲಿಗೆ ಹೋಗುತ್ತಿದ್ದರು. ನಿಮ್ಮ ಅಹಂಕಾರ, ದಬ್ಬಾಳಿಕೆ ಬಹಳ ದಿನ ನಡೆಯಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರೇ ನನ್ನ ಬಗ್ಗೆ ಅನುಕಂಪ‌ ತೋರಿಸುವುದು ಬೇಡ. ಯಡಿಯೂರಪ್ಪ ಮತ್ತು ನನ್ನ ನಡುವೆ ಬಿರುಕು ಮೂಡಿಸುವ ಕುತಂತ್ರ ಕೈಬಿಡಿ. ಮೇ 23 ರ ನಂತರ ನಿಮ್ಮನ್ನು ಹೇಳುವವರು ಕೇಳುವವರು ಯಾರೂ ಇರಲ್ಲ. ಚಾಮುಂಡೇಶ್ವರಿಯಲ್ಲಿ ಸೋತ ನಂತರವೂ ನಿಮಗೆ ಬುದ್ದಿ ಬಂದಿಲ್ಲ. ನಿಮ್ಮ ಬಾಡಿ ಲಾಂಗ್ವೇಜ್ ನೋಡಿದರೆ ಸಣ್ಣ ಮಕ್ಕಳೂ ನಗುತ್ತಾರೆ ಎಂದು ವ್ಯಂಗ್ಯ ಮಾಡಿದರು.

ನಿನ್ನೆ ಕೂಡ ಸಿದ್ದರಾಮಯ್ಯ ವಿರುದ್ಧ ಶೆಟ್ಟರ್​​ ವಾಗ್ದಾಳಿ ನಡೆಸಿದ್ದರು. ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲೇ ಸಿದ್ದರಾಮಯ್ಯ ಇದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ಯಾವುದೇ ಸಿಎಂ ಅಧಿಕಾರ ಹೋದ ಮೇಲೆ ಎರಡು ತಿಂಗಳಲ್ಲಿ ಮನೆ ಖಾಲಿ ಮಾಡಬೇಕು. ಆದರೆ ಒಂದು ವರ್ಷ ಆದರೂ ಕಾವೇರಿ ನಿವಾಸ ಖಾಲಿ ಮಾಡಿಲ್ಲ. ಸಿದ್ದರಾಮಯ್ಯ ಏನಾದರೂ ಬಾಡಿಗೆ ಕೊಟ್ಟಿದ್ದಾರಾ? ಅನಧಿಕೃತವಾಗಿ ಕಾವೇರಿ ಬಂಗಲೆಯಲ್ಲಿ ವಾಸವಾಗಿದ್ದಾರೆ. ಕೆ.ಜೆ. ಜಾರ್ಜ್ ಹೆಸರಿನಲ್ಲಿ ಮನೆ ಪಡೆದುಕೊಂಡು ಸಿದ್ದರಾಮಯ್ಯ ಆ ಮನೆಯಲ್ಲಿ ಇದ್ದಾರೆ. ಕಾವೇರಿ ನಿವಾಸದಲ್ಲಿ ಯಾವ ಆಧಾರದ ಮೇಲೆ ಇದ್ದಾರೆ ಎನ್ನುವುದರ ಬಗ್ಗೆ ಸಿದ್ದರಾಮಯ್ಯ ಉತ್ತರಿಸಬೇಕು ಎಂದು ಆಗ್ರಹಿಸಿದ್ದರು.

Comments are closed.