
ಬಳ್ಳಾರಿ: ಸರಕಾರಿ ಶಾಲಾ-ಕಾಲೇಜುಗಳಿಗೆ ನಿಗಧಿತ ಸಮಯಕ್ಕೆ ಬಂದು ಪಾಠ ಮಾಡುವ ಶಿಕ್ಷಕರು, ಉಪನ್ಯಾಸಕರು ಸಿಗೋದು ತುಸು ವಿರಳವೇ! ಆದರೆ ಇಲ್ಲೊಬ್ಬರು ಪ್ರೀತಿಯ ಉಪನ್ಯಾಸಕರಿದ್ದಾರೆ. ಡಾ| ಜಿಲಾನ್ ಖಾನ್ ಪ್ರತಿದಿನ ಕಾಲೇಜಿಗೆ ಚಾಚೂತಪ್ಪದೇ ಹಾಜರಾಗ್ತಾರೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಎಸ್ಎವಿಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಲವು ವರುಷಗಳ ಕಾಲ ಉಪನ್ಯಾಸಕರಾಗಿ, ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳು ಇವರ ಮೇಲೆ ಕಾಲೇಜಿನ ಹದಿನಾಲ್ಕುವರೆ ಲಕ್ಷ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಸರಕಾರ ಅಮಾನತು ಮಾಡಿದೆ. ಇದಾದ ಮೇಲೆ ತೆಪ್ಪಗೆ ಮನೆಯಲ್ಲಿರೋದು ಬಿಟ್ಟು ಕೂಡ್ಲಿಗಿ ಕಾಲೇಜಿಗೆ ಪ್ರತಿದಿನ ಬರ್ತಿದಾರೆ. ಒಂದೆರಡು ದಿನ ಬರ್ತಾರೆ ಬಿಡು ಎಂದುಕೊಂಡ ಕಾಲೇಜಿನ ಆಡಳಿತವರ್ಗಕ್ಕೆ ಬರೋಬ್ಬರಿ ಎಂಟು ತಿಂಗಳಿನಿಂದ ಎಂದಿನಂತೆ ಕಾಲೇಜಿಗೆ ಬರ್ತಾನೆ ಇದಾರೆ. ಬಂದವರು ಪಾಠ ತಗೋಳಲ್ಲ, ಅಧ್ಯಾಪಕರನ್ನು ಕ್ಯಾರೆ ಅನ್ನೋದಿಲ್ಲ. ಬದಲಾಗಿ ನಾನ್ ಟೀಚಿಂಗ್ ಸ್ಟಾಫ್ ಕೊಠಡಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಹಾಯಾಗಿ ವಿರಮಿಸುತ್ತಾರೆ. ಇದು ಕಾಲೇಜು ಸಿಬ್ಬಂದಿಗೆ ಕಿರಿಕಿರಿ ತಂದಿದೆ.
ಮೌಖಿಕವಾಗಿ ಕಾಲೇಜು ಪ್ರಾಂಶುಪಾಲರಿಂದ ಹಿಡಿದು ಸಿಬ್ಬಂದಿ ವರ್ಗವೆಲ್ಲ ಹಲವು ಬಾರಿ ಮೌಖಿಕವಾಗಿ ಇಲ್ಲಿಗೆ ಬರಬೇಡ, ಹೆಣ್ಣುಮಕ್ಕಳು ಬರುವ ಕಾಲೇಜಿದು. ಇಲ್ಲಿಯ ವಾತಾವರಣ ಹಾಳು ಮಾಡಬೇಡಿ ಎಂದು ಮೌಖಿಕವಾಗಿ ತಿಳಿಹೇಳಿದ್ದಾರೆ. ಮುಂದೆ ಮೇಲಧಿಕಾರಿಗಳ ಗಮನಕ್ಕೂ ತರಲಾಗುವುದು ಎಂದು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಎಸ್ ಕೆ ಬಸವರಾಜ್ ಪ್ರತಿಕ್ರಿಯೆ ನೀಡುತ್ತಾರೆ.
ಉಪನ್ಯಾಸಕ ಡಾ| ಜಿಲಾನ್ ಖಾನ್ ಅವರು ಅಮಾನತಾದ್ರೂ ಕೂಡ್ಲಿಗಿ ಕಾಲೇಜಿಗೆ ಪ್ರತಿದಿನ ಯಾಕೆ ಬರುತ್ತಿದ್ದಾರೆಂಬುದು ಎಂಬುದು ಇದುವರೆಗೂ ಗೊತ್ತಾಗುತ್ತಿಲ್ಲ. ಈ ಬಗ್ಗೆ ಪಟ್ಟಣದಲ್ಲೆಲ್ಲ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡಿಕೊಳ್ಳುತ್ತಿದ್ದಾರೆ.
ಪರೀಕ್ಷೆಗಳು ಮುಗಿದ ನಂತರ ಮಧ್ಯಾಹ್ನದ ಊಟದ ಸಮಯದಲ್ಲಿ ಹೊರಹೋಗದ ಖಾನ್ ನಾನ್ ಟೀಚಿಂಗ್ ಕೊಠಡಿಯಲ್ಲಿ ಆಸೀನರಾಗಿದ್ದರು. ಈ ಸಂದರ್ಭದಲ್ಲಿ ನ್ಯೂಸ್ 18 ಕ್ಯಾಮರಾ ಸಮೇತ ಕಾಲೇಜಿಗೆ ಭೇಟಿ ನೀಡಿದಾಗ ಕಾಲೇಜಿನಲ್ಲಿ ಅಧ್ಯಾಪಕರಾಗಲಿ, ವಿದ್ಯಾರ್ಥಿಗಳಾಗಲಿ ಕಂಡುಬರಲಿಲ್ಲ. ಮಧ್ಯಾಹ್ನದ ವೇಳೆ ಖಾನ್ ಅವರು ಕಾಲೇಜಿನಲ್ಲಿ ನಾನ್ ಟೀಚಿಂಗ್ ಸ್ಟಾಪ್ ಕೊಠಡಿಯಲ್ಲಿಯೇ ಇದ್ದರು. ಕ್ಯಾಮರಾ ನೋಡಿದ ಕೂಡಲೇ ಗಲಿಬಿಲಿಗೊಂಡು ಅಲ್ಲಿಂದ ಹೊರಹೋಗಲು ಯತ್ನಿಸಿದರು. ನಾವು ಅವರನ್ನು ಮಾತಾಡಿಸಲು ಪ್ರಯತ್ನಿಸಿದಾಗ ಮೊದಲು ಮಾತಾಡಲು ಒಪ್ಪಲೇ ಇಲ್ಲ. ಸರ್ ನೀವ್ಯಾಕೆ ಇಲ್ಲಿದ್ದೀರಿ? ಇಲ್ಲಿಗ್ಯಾಕೆ ಪ್ರತಿನಿತ್ಯ ಬರ್ತೀರಿ? ಕಾಲೇಜು ಸಿಬ್ಬಂದಿ, ಪ್ರಾಂಶುಪಾಲರು ಹಾದಿಯಾಗಿ ಅದೆಷ್ಟೇ ತಿಳಿಹೇಳಿದರೂ ನೀವ್ಯಾಕೆ ಇಲ್ಲಿಗೆ ಬರುತ್ತಿದ್ದೀರಿ? ಈ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು ಎಂಬ ಪ್ರಶ್ನೆಗೆ ಮೊದಲು ಉತ್ತರಿಸಲು ಹಿಂದೇಟು ಹಾಕಿದರು. ಪ್ರಾಂಶುಪಾಲರು ಅವರೆದುರೇ ದೂರು ನೀಡಿದಾಗ ಅನಿವಾರ್ಯವಾಗಿ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಾಲೇಜಿನ ಮೇಲೆ ನನಗೆ ಅಪಾರವಾದ ಪ್ರೀತಿಯಿದೆ. ಗಿಡಮರಗಳಿಗೆ ನೀರುಣಿಸುತ್ತೇನೆ. ಯಾರೇನೇ ಹೇಳಲಿ ನಾನು ಇಲ್ಲಿಗೆ ಯಾರಿಗೂ ತೊಂದರೆ ಕೊಡದೆ ಬಂದುಹೋಗ್ತೇನೆ ಎಂದುತ್ತರಿಸುತ್ತಾರೆ.
ಕೆಲ ವರುಷ ಪ್ರಭಾರ ಪ್ರಾಂಶುಪಾಲರಾಗಿ ಕೂಡ್ಲಿಗಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ ಡಾ. ಜಿಲಾನ್ ಖಾನ್ ಅವರಿಗೆ ಕಳೆದ ತಿಂಗಳು ರಾಯಚೂರು ಜಿಲ್ಲೆ ಸಿಂಧನೂರು ಕಾಲೇಜಿಗೆ ನಿಯೋಜನೆಯಾಗಿದೆ. ಅಲ್ಲಿ ಬೆರಳಣಿಕೆಯ ದಿನಗಳ ಕಾಲವಿದ್ದು ರಜೆ ದಿನವಾಗಿದ್ದರಿಂದ ಮತ್ತೆ ಕೂಡ್ಲಿಗಿ ಕಾಲೇಜಿನಲ್ಲಿ ಜಾಂಡ ಹೂಡಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಕೊನೆಗಾಲದಲ್ಲಿ ಇದ್ಯಾಕೆ ಹೀಗೆ ವರ್ತಿಸುತ್ತಿದ್ದಾರೆ ಎಂಬುದು ಸದ್ಯ ಕಾಲೇಜಿನ ವಿದ್ಯಾರ್ಥಿಗಳು ಸಿಬ್ಬಂದಿ, ಅಧ್ಯಾಪಕ ವರ್ಗದ ಯಕ್ಷ ಪ್ರಶ್ನೆಯಾಗಿದೆ.
Comments are closed.