ಕರ್ನಾಟಕ

ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ನಡೆಯುತ್ತಿದೆ ಸರ್ಕಸ್ ; ಯತ್ನಾಳ್​, ಅಪ್ಪು ಪಟ್ಟಣಶೆಟ್ಟಿ ಕಣ್ಣು

Pinterest LinkedIn Tumblr

ವಿಜಯಪುರ: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಯಡಿಯೂರಪ್ಪ ಸಿಎಂ ಆಗುವ ಕನಸು ಕಾಣುತ್ತಾ ಮೈತ್ರಿ ಸರ್ಕಾರದ ಪತನದ ಬಗ್ಗೆ ಭವಿಷ್ಯ ಹೇಳುತ್ತಿದ್ದಾರೆ. ಇತ್ತ ಬಿಜೆಪಿಯ ಕೆಲ ನಾಯಕರು ಯಡಿಯೂರಪ್ಪ ಅವರ ಸ್ಥಾನದ ಮೇಲೆ ಕಣ್ಣಿಟ್ಟು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಮೂರುನಾಲ್ಕು ದಿನಗಳ ಹಿಂದೆ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಟವೆಲ್​ ಹಾಕಿದ್ದೇನೆ. ಮುಂದಿನ ರಾಜ್ಯಾಧ್ಯಕ್ಷ ನಾನೇ. ಎಸ್​ ಯಡಿಯೂರಪ್ಪ ಬಳಿಕ ಆ ಸಾಮರ್ಥ್ಯವಿರುವುದು ನನಗೆ ಮಾತ್ರ. ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದಿದ್ದರು.

ಯತ್ನಾಳ್​ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಟವೆಲ್​ ಹಾಕಲು ಇದು ಬಸ್​ ಅಥವಾ ರೈಲು ಸೀಟು ಅಲ್ಲ. ಪಕ್ಷದಲ್ಲಿ ಯಾರು ಡೈನಾಮಿಕ್, ಹೀರೋ ಎನ್ನುವುದು ಮುಖ್ಯವಲ್ಲ. ಪಕ್ಷವೇ ನಮಗೆ ಡೈನಾಮಿಕ್, ಪಕ್ಷವೇ ಹೀರೋ ಎಂದು ಟಾಂಗ್​ ನೀಡಿದರು

ಇದೇ ವೇಳೆ ತಾವು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕರೆ ಸ್ವೀಕರಿಸುತ್ತೇನೆ. ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷ ಅವಕಾಶ ಮಾಡಿ ಕೊಡಲಿ. ಒಂದು ವೇಳೆ ಪಕ್ಷ ನನಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಇತಿಹಾಸ ನಿರ್ಮಿಸುತ್ತೇನೆ. ಯಾರಿಗೆ ಯೋಗ್ಯತೆ ಇರುತ್ತದೆ. ಅವರನ್ನು ಪಕ್ಷ ಅಧ್ಯಕ್ಷ ಸ್ಥಾನ ನೀಡಲಿದೆ ಎಂದರು.

ಬಿ.ಎಸ್​.ಯಡಿಯೂರಪ್ಪ ಅವರ ಬಿಜೆಪಿ ರಾಜ್ಯಾಧ್ಯಕ್ಷ ಅವಧಿ ಮುಗಿದಿದ್ದು, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸ್ಥಾನ ಬದಲಾವಣೆ ಆಗಲಿದೆ. ಈ ಸ್ಥಾನಕ್ಕೆ ಈಗಾಗಲೇ ಬಿಜೆಪಿಯ ಘಟಾನುಘಟಿ ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ಯಡಿಯೂರಪ್ಪ ಅವರು ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗರನ್ನೇ ಕರೆತರಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಬಿಎಸ್​ವೈ ಆಸೆಯನ್ನು ಹೈಕಮಾಂಡ್​ ಪೂರೈಸಲಿದೆಯೇ ಅಥವಾ ನಿರೀಕ್ಷೆಯನ್ನು ಮೀರಿ ಬೇರೆಯವರಿಗೆ ಅಧ್ಯಕ್ಷ ಸ್ಥಾನ ನೀಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Comments are closed.