ಕರ್ನಾಟಕ

ಕುಂದಗೋಳ ಉಪಚುನಾವಣೆ: ಬಿಜೆಪಿಗೆ ಪಕ್ಷಾಂತರ ಪೆಟ್ಟು

Pinterest LinkedIn Tumblr


ಧಾರವಾಡ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ರಣಕಣದಲ್ಲಿ ದೋಸ್ತಿ ಮತ್ತು ಬಿಜೆಪಿ ನಾಯಕರ ಪ್ರಚಾರ ಭರ್ಜರಿಯಾಗಿ‌ ಮುಂದುವರಿದಿದೆ. ಕುಂದಗೋಳದಲ್ಲಿ ಬಿಜೆಪಿಗೆ ಗೆಲುವು ಕಠಿಣ ಎಂದು ಆಂತರಿಕ ವರದಿ ಬಂದಿರುವ ಹಿನ್ನೆಲೆಯಲ್ಲಿ ಕಮಲ ಪಾಳಯದಲ್ಲಿ ಸಂಚಲನ ಸೃಷ್ಟಿಯಾಗಿದೆ‌. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ಮಾಡಲಾಗಿದೆ. ಶೆಟ್ಟರ್ ಒಡೆತನದ ಅನಂತ ಎಕ್ಜಿಕ್ಯುಟೀವ್ ಹೊಟೆಲ್‌ನಲ್ಲಿ ರಹಸ್ಯ ಸಭೆ ನಡೆಸಿ‌ ಚರ್ಚಿಸಲಾಗಿದೆ. ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಶಿ, ಬಸವರಾಜ್ ಬೊಮ್ಮಾಯಿ, ಸಿ.ಸಿ. ಪಾಟೀಲ್, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಶಂಕರಪಾಟೀಲ್ ಮುನೇನಕೊಪ್ಪ ಸೇರಿದಂತೆ ಹಲವು ನಾಯಕರು ಭಾಗವಹಿಸಿ ಚರ್ಚೆ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಬಳಿ ಆಂತರಿಕ ವರದಿಯ‌ ಕುರಿತು ಸ್ಪಷ್ಟನೆ ಪಡೆದಿದ್ದಾರೆ. ಹಲವು ಗ್ರಾಮಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತಿದೆ. ಡಿ.ಕೆ. ಶಿವಕುಮಾರ್ ರಣತಂತ್ರದಿಂದ ಸ್ಥಳೀಯ ಮುಖಂಡರು ಬಿಜೆಪಿ ತೊರೆಯುತ್ತಿದ್ದಾರೆ. ಹಣ, ಅಧಿಕಾರದ ಆಮಿಷ ಜೋರಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪವಾಗಿರುವುದಕ್ಕೆ ಬಿಎಸ್‌ವೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಕೆಶಿ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವ ಕುರಿತು ಕಮಲ ಪಡೆಯ ನಾಯಕರಿಗೆ ಸಲಹೆ ನೀಡಿದ್ದಾರೆ. ಸಭೆಯ ಬಳಿಕ ಬಿಜೆಪಿ ನಾಯಕರು ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

ಕುಂದಗೋಳ ಕ್ಷೇತ್ರದ ಹಳ್ಳಿಹಳ್ಳಿಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ‌ ರೋಡ್‌ಶೋ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ್ ಪರ ಮತಯಾಚನೆ ಮಾಡಿದ್ದಾರೆ. ಯರಗುಪ್ಪಿ, ಹಿರೇನರ್ತಿ, ಹಿರೇಹರಕುಣಿ, ತರ್ಲಘಟ್ಟ, ಗುಡಗೇರಿ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿದ್ದಾರೆ.‌ ದಿ| ಸಿ.ಎಸ್. ಶಿವಳ್ಳಿ ಹುಟ್ಟೂರು ಯರಗುಪ್ಪಿಯಿಂದ ಬಿಜೆಪಿ ಪ್ರಚಾರಕ್ಕೆ ಚಾಲನೆ‌ ನೀಡಿ ದೋಸ್ತಿ ನಾಯಕರ ವಿರುದ್ಧ ತೊಡೆ ತಟ್ಟಿದ್ದಾರೆ. ಕಳೆದ ಆರು ದಿನಗಳಿಂದ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ, ಟ್ರಬಲ್‌ಶೂಟರ್ ಡಿಕೆಶಿ ಇಂದು ವಿಶ್ರಾಂತಿಯ ಮೊರೆ ಹೋಗಿದ್ದಾರೆ. ಹೀಗಾಗಿ‌ ಅಖಾಡಕ್ಕಿಳಿದಿರುವ ರಾಜ್ಯ‌ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಜಮೀರ್‌ ಅಹ್ಮದ್ ಖಾನ್, ಎಂ.ಟಿ.ಬಿ. ನಾಗರಾಜ್ ಅವರು ದೋಸ್ತಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಮತಯಾಚನೆ ಮಾಡಿದ್ದಾರೆ. ಸರ್ಕಾರ ಸುಭದ್ರವಾಗಿದ್ದು ಬಿಜೆಪಿಯವರ ಆಸೆ ಈಡೇರಲ್ಲ‌. ಯಡಿಯೂರಪ್ಪನವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದು ಆಪರೇಷನ್ ಕಮಲ ಠುಸ್ ಆಗಲಿದೆ ಎಂದು ಈ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಕುಂದಗೋಳ ಕ್ಷೇತ್ರದಲ್ಲಿ ಡಿಕೆಶಿಗೆ ಡಿಚ್ಚಿ ನೀಡಿರುವ ಬಿ.ಎಸ್‌. ಯಡಿಯೂರಪ್ಪ‌ ಆಪರೇಷನ್ ಕಮಲಕ್ಕೆ ಚಾಲನೆ ನೀಡಿದ್ದಾರೆ. ಕುಬಿಹಾಳ ತಾಲ್ಲೂಕು ಪಂಚಾಯತಿಯ ಹಾಲಿ ಮತ್ತು ಮಾಜಿ ಕಾಂಗ್ರೆಸ್ ಸದಸ್ಯರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ನಾಳೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಕುಂದಗೋಳ ಅಖಾಡದಲ್ಲಿ ಪ್ರಚಾರಕ್ಕೆ ಧುಮುಕಲಿದ್ದಾರೆ. ದೋಸ್ತಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಮತಯಾಚನೆ ಮಾಡಲಿದ್ದಾರೆ. ಒಟ್ಟಾರೆ ಮತದಾನ ದಿನ ಹತ್ತಿರ ಬರುತ್ತಿರುವಂತೆ ಕುಂದಗೋಳ ಅಖಾಡ ತುರುಸು ಪಡೆದುಕೊಳ್ಳುತ್ತಿದೆ.

Comments are closed.