ಕರ್ನಾಟಕ

ಆಟೋ ಚಾಲಕ ಐಷಾರಾಮಿ ಮನೆ ಖರೀದಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್

Pinterest LinkedIn Tumblr


ಬೆಂಗಳೂರು: ರಾಜಧಾನಿಯಲ್ಲಿ ಆಟೋ ಓಡಿಸುತ್ತಿದ್ದ ಸಾಮಾನ್ಯ ವ್ಯಕ್ತಿ ಸುಬ್ರಮಣಿ ದಿಢೀರ್​ ಶ್ರೀಮಂತನಾದ ಕಥೆಗೆ ಇತ್ತೀಚೆಗೆ ಟ್ವಿಸ್ಟ್​ ಸಿಕ್ಕಿತ್ತು. ನಾನು ಶ್ರೀಮಂತನಾಗಲು ವಿದೇಶಿ ಮಹಿಳೆ ಕಾರಣ ಎನ್ನುವ ಮೂಲಕ ಸುಬ್ರಮಣಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದ. ಈಗ ಈ ಪ್ರಕರಣಕ್ಕೆ ಮತ್ತೊಂದು ತಿರುವು​ ಸಿಕ್ಕಿದೆ. ಸುಬ್ರಮಣಿಗೆ ವಿಲ್ಲಾ ಕೊಡಿಸಿದ್ದು ನಾನೇ ಎಂದು ವಿದೇಶಿ ಮಹಿಳೆ ಐಟಿ ಇಲಾಖೆಗೆ ಖಾತ್ರಿ ಪಡಿಸಿದ್ದಾರೆ.

ಆಟೋ‌ ಓಡಿಸಿಕೊಂಡು ಐಷಾರಾಮಿ ವಿಲ್ಲಾ ಖರೀದಿಸಿದ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಇದನ್ನು ಆಧರಿಸಿ ಆಟೋ ಚಾಲಕ ಸುಬ್ರಮಣಿ ಮನೆ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಆತ 1.60 ಕೋಟಿ ರೂ. ಮೌಲ್ಯದ ವಿಲ್ಲಾ ಹೊಂದಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಅಮೆರಿಕ ಮಹಿಳೆ ಲಾರಾ ಎವಿಸನ್​ರನ್ನು ದೂರವಾಣಿ ಮೂಲಕ ಸಂಪರ್ಕಿಸುವ ಐಟಿ ಇಲಾಖೆ ಸ್ಪಷ್ಟನೆ ಪಡೆದಿದೆ.

“ವಿಲ್ಲಾ ಖರೀದಿಗೆ ದುಡ್ಡು ಕೊಟ್ಟಿದ್ದು ನಾನೇ. ವೈಟ್​ಫೀಲ್ಡ್​​ನ ಖಾಸಗಿ ಕಂಪನಿಯಲ್ಲಿ ನಾನು ಕೆಲಸ ಮಾಡುವಾಗ ಸುಬ್ರಮಣಿ ಪರಿಚಯ ಆಗಿತ್ತು. ಪ್ರತಿನಿತ್ಯ ಕಂಪನಿಯೆಂದು ಕರೆದೊಯ್ದು ನಂತರ ನನ್ನನ್ನು ಮನೆಗೆ ಡ್ರಾಪ್​ ಮಾಡುತ್ತಿದ್ದ. ಈ‌ ವೇಳೆ ಸುಬ್ರಮಣಿ ಒಳ್ಳೆತನ ನೋಡಿ ಹಣ ನೀಡಿದ್ದೆ. ಆತನ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ನಾನೇ ಹೊತ್ತಿದ್ದೇನೆ. ಈ ಬಗ್ಗೆ ಯಾವುದೇ ದಾಖಲೆಗಳನ್ನು ಬೇಕಿದ್ದರೂ ನೀಡಲು ಸಿದ್ಧ,” ಎಂದು ಲಾರಾ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಐಟಿ ಅಧಿಕಾರಗಳ ಎದುರು ಸುಬ್ರಮಣಿ ಹಾಜರಾಗಿದ್ದರು. “ನನಗೆ ವಿದೇಶಿ ವೃದ್ಧ ಮಹಿಳೆಯೊಬ್ಬಳು ಈ ವಿಲ್ಲಾ ಕೊಡಿಸಿದ್ದಾರೆ. ನನಗೆ ಅವರು 14 ವರ್ಷಗಳಿಂದ ಪರಿಚಯ. ಆರಂಭದಲ್ಲಿ ಆ ಮಹಿಳೆ ಒಮ್ಮೆ ನನ್ನ ಆಟೋದಲ್ಲಿ ಬಂದಿದ್ದರು. ವೈಟ್​ಫೀಲ್ಡ್ ಏರಿಯಾದಲ್ಲಿ ನಡ್ಕೊಂಡು ಹೋಗುತ್ತಿದ್ದಾಗ ಅವರನ್ನು ಬಿಟ್ಟು ನಾನೇ ಡ್ರಾಪ್​ ಮಾಡಿದ್ದೆ. ನಾನು ಅವರನ್ನು ಎರಡು ಬಾರಿ ಡ್ರಾಪ್​ ಮಾಡಿದ ನಂತರ ಅವರಿಗೆ ನನ್ನ ಮೇಲೆ ನಂಬಿಕೆ ಬಂತು. ಅವರು ಏನಾದರು ಸಣ್ಣ ಪುಟ್ಟ ಕೆಲಸಗಳಿಗೆ ಪೋನ್ ಮಾಡುತ್ತಿದ್ದರು. ಇದೇ ವಿಶ್ವಾಸದ ಮೇಲೆ 3 ವರ್ಷಗಳ ಹಿಂದೆ ಜತ್ತಿ ದ್ವಾರಕದಲ್ಲಿ ವಿಲ್ಲಾ ಕೊಡಿಸಿದ್ದರು. ಇನ್ನೂ ಎರಡು ಆಟೋ ತೆಗಿಸಿಕೊಟ್ಟರು,” ಎಂದು ಸುಬ್ರಮಣಿ ಹೇಳಿಕೊಂಡಿದ್ದರು. ಈಗ ಈ ಹೇಳಿಕೆಗೆ ಸಾಕ್ಷ್ಯ ಸಿಕ್ಕಂತಾಗಿದೆ.

Comments are closed.