ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ವಂಚಿತ ಮನೆಗಳಿಗೆ ಬೆಂಗಳೂರಿನ ಜಾಗೃತಿ ಸಂಸ್ಥೆ ಮತ್ತು ಸಿಸ್ಕೋ ಕಂಪನಿ ಸೌರವಿದ್ಯುತ್ ಸೌಲಭ್ಯ ಕಲ್ಪಿಸಿದೆ.
ಹಿಂದುಳಿದ ಗ್ರಾಮ ಸೂರ್ಲಬ್ಬಿಯಲ್ಲಿ ಅನೇಕ ಮನೆಗಳು ವಿದ್ಯುತ್ ಸಂಪರ್ಕದಿಂದ ವಂಚಿತವಾಗಿವೆ. ಕೆಲವು ಕಡೆ ವಿದ್ಯುತ್ ಕಂಬಗಳಿದ್ದರೂ ವಿದ್ಯುತ್ ಸಂಪರ್ಕವಿಲ್ಲ. ರಾತ್ರಿ ವೇಳೆ ಮಕ್ಕಳಿಗೆ ಓದಲು ಸೀಮೆಎಣ್ಣೆ ದೀಪವೇ ಗತಿಯಾಗಿತ್ತು. ದೂರದಲ್ಲಿರುವ ಶಾಲೆಗೆ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಕೂಡ ಇದೆ.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮಸ್ಥರ ಮತ್ತು ಮಕ್ಕಳ ಆಶಾಕಿರಣವಾಗಿ ಮೂಡಿಬಂದಿದ್ದು ಬೆಂಗಳೂರಿನ ಜಾಗೃತಿ ಸಂಸ್ಥೆ ಮತ್ತು ಸಿಸ್ಕೋ ಕಂಪನಿ. ಕಳೆದ ವರ್ಷ ನೆರೆಹಾವಳಿಯಿಂದ ಗ್ರಾಮ ತತ್ತರಿಸಿ ಹೋಗಿತ್ತು. ಜಾಗೃತಿ ಸಂಸ್ಥೆ ಹಾಗೂ ಸಿಸ್ಕೋ ಕಂಪನಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಸ್ಥಳಗಳಲ್ಲಿ ಪರಿಹಾರ ಕಾರ್ಯ ಕೈಗೊಂಡಿತ್ತು. ಸ್ಫೂರ್ತಿಚೇತನ ಹೆಸರಿನಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಸ್ಪರ್ಧೆ ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿತ್ತು.
ವಿದ್ಯುತ್ ದೀಪ ಇಲ್ಲದ ಮನೆಗಳು: ಈ ತಂಡದವರು ಸೂರ್ಲಬ್ಬಿ ಶಾಲೆಗೆ ಭೇಟಿ ನೀಡಿದ್ದಾಗ ವಿದ್ಯಾರ್ಥಿಗಳ ಮನೆಗಳಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಮುಖ್ಯ ಶಿಕ್ಷಕರು ಗಮನಕ್ಕೆ ತಂದಿದ್ದರು. ಪರಿಸ್ಥಿತಿ ಅರಿಯಲು ಜಾಗೃತಿ ಸಂಸ್ಥೆಯ ಪ್ರತಿನಿಧಿಗಳು ಮಾರ್ಚ್ ತಿಂಗಳ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿದಾಗ ಸಮಸ್ಯೆಯ ಗಂಭೀರತೆ ಮನದಟ್ಟಾಗಿತ್ತು.
ವಿದ್ಯುತ್ ಸಂಪರ್ಕ ಇಲ್ಲದ ವಿದ್ಯಾರ್ಥಿಗಳ ಮನೆಗಳು, ಕೆಲವೆಡೆ ವಿದ್ಯುತ್ ಸಂಪರ್ಕವಿದ್ದರೂ ಕೆಲವು ಕಾರಣಗಳಿಂದ ಉಪಯೋಗಿಸಲಾಗದ ಪರಿಸ್ಥಿತಿ, ಹೀಗೆ ಹಲವು ಕಾರಣಗಳಿಂದ ವಿದ್ಯಾರ್ಥಿಗಳಿಗೆ ಸೀಮೆಎಣ್ಣೆ ದೀಪವೆ ಗತಿ ಎಂಬುದು ಅರಿವಾಗಿತ್ತು. ಹೀಗಾಗಿ ಸೌರವಿದ್ಯುತ್ ಘಟಕಗಳು ಇಲ್ಲಿಗೆ ಸರಿ ಹೊಂದುತ್ತವೆಂಬುದನ್ನು ಕಂಡುಕೊಂಡ ಜಾಗೃತಿ ತಂಡ ವಿದ್ಯಾರ್ಥಿಗಳ ಮನೆಗಳಿಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸಲು ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿತು.
ಮೂರು ವಿದ್ಯುತ್ ಬಲ್ಬ್ಗಳು ಸತತ 6 ಗಂಟೆಗಳಷ್ಟು ಉರಿಯುವಂಥ ಸೌರಫಲಕಗಳು, ಸುಲಭವಾಗಿ ಬಳಸಲು ಸಾಧ್ಯವಾಗುವ ವಿದ್ಯುತ್ ಉಪಕರಣಗಳು ಮನೆಯ 3 ಕೋಣೆ ಬೆಳಗಲು-ತ್ರಿವಳಿ ಸೌರದೀಪ(ಬಲ್ಬ್)ಗಳು 4 ವಾರಗಳಲ್ಲಿ ಸಿದ್ಧಗೊಂಡವು. ಸೂರ್ಲಬ್ಬಿ ಗ್ರಾಮಕ್ಕೆ ತೆರಳಿದ ಜಾಗೃತಿ ಮತ್ತು ಸಿಸ್ಕೋ ಸಂಸ್ಥೆಗಳ ಸದಸ್ಯರು, ಸೌರಘಟಕ, ಬಲ್ಬ್, ಅವಶ್ಯಕ ಸಾಮಗ್ರಿಗಳೊಂದಿಗೆ ವಿದ್ಯುತ್ ದೀಪ ಸೌಲಭ್ಯ ವಂಚಿತ ಮನೆಗಳಿಗೆ ತೆರಳಿ ಅಳವಡಿಸಿಕೊಟ್ಟರಲ್ಲದೆ, ಅದನ್ನು ಉಪಯೋಗಿಸುವ ಬಗ್ಗೆ ಮಾಹಿತಿ ನೀಡಿದರು.