ಕರ್ನಾಟಕ

ಜಾರಕಿಹೊಳಿ ಸಹೋದರರು ಸಾಹುಕಾರರು ಮತ್ತು ನಾಯಕರು, ನಾವು ಸಾಮಾನ್ಯ ಪ್ರಜೆಗಳು: ಡಿಕೆಶಿ ಟಾಂಗ್

Pinterest LinkedIn Tumblr


ಬೆಂಗಳೂರು: ಜಾರಕಿಹೊಳಿ ಸಹೋದರರು ಸಾಹುಕಾರರು ಮತ್ತು ನಾಯಕರು. ನಾವು ಸಾಮಾನ್ಯ ಪ್ರಜೆಗಳು. ಪಕ್ಷ ವಹಿಸಿದ ಕೆಲಸವನ್ನು ನಿಷ್ಟೆಯಿಂದ ಮಾಡುತ್ತೇವೆ. ಪಕ್ಷ ಹೋಗು ಎಂದರೆ ಹೋಗುತ್ತೇವೆ ಬೇಡವೆಂದರೆ ಬೇಡ ಎಂದು ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ಸೋಮವಾರ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಇಂದು ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನೀಡುವ ಜವಾಬ್ದಾರಿಯನ್ನು ಮಾಡುತ್ತೇನೆ. ಹಿಂದೆ ಬಳ್ಳಾರಿಯಲ್ಲೂ ದೊಡ್ಡ ದೊಡ್ಡ ನಾಯಕರು ಇದ್ದರೂ ಪಕ್ಷ ತಮಗೆ ಜವಾಬ್ದಾರಿ ನೀಡಿತು. ಬಳಿಕ ಮೈಸೂರು, ಗುಂಡ್ಲುಪೇಟೆ ಸೇರಿ ಹಲವು ಉಪ ಚುನಾವಣೆಗಳಲ್ಲಿ ಪಕ್ಷ ಚುನಾವಣಾ ಉಸ್ತುವಾರಿ ನೀಡಿತ್ತು. ಎಲ್ಲಾ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದರು.

ಪಕ್ಷ ಈಗಲೂ ಕುಂದಗೋಳ ಚುನಾವಣಾ ಉಸ್ತುವಾರಿ ಕೆಲಸ ವಹಿಸಿದೆ. ಕುಂದಗೋಳಕ್ಕೆ ಹೋಗಿ ಎಂದರೆ ಹೋಗುತ್ತೇನೆ, ಬೇಡ ಎಂದರೆ ಬೇಡ. ಪಕ್ಷ ಹೇಳಿದ ಮೇಲೆ ಕೇಳಲೇಬೇಕು ಎಂದು ಕುಂದುಗೋಳಕ್ಕೆ ಡಿ.ಕೆ.ಶಿವಕುಮಾರ್ ಗೆ ಉಸ್ತುವಾರಿ ನೀಡಿರುವುದನ್ನು ವಿರೋಧಿಸಿದ ಉತ್ತರ ಕರ್ನಾಟಕ ನಾಯಕರ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ.

ನ್ಯಾಯಾಲಯದಲ್ಲಿ ಐಟಿ ಪ್ರಕರಣ ವಿಚಾರಣೆಗೆ ಹಾಜರಾಗಿದ್ದ ಹಿನ್ನಲೆಯಲ್ಲಿ ಇಂದು ಕುಂದಗೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ತೆರಳಲು ಸಾಧ್ಯವಾಗಿಲ್ಲ. ನಾಳೆಯೂ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆಯುತ್ತಿದೆ. ಹೀಗಾಗಿ ವಿಚಾರಣೆ ಮುಗಿಸಿ ಕುಂದಗೋಳಕ್ಕೆ ತೆರಳುತ್ತೇನೆ ಎಂದು ಅವರು ತಿಳಿಸಿದರು.

ಸಿ.ಎಸ್.ಶಿವಳ್ಳಿ ಹಾಗೂ ತಮ್ಮ ಸಂಬಂಧದ ಬಗ್ಗೆ ಯಾರಿಗೆ ತಿಳಿದಿದೆ ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್, ಶಿವಳ್ಳಿ ಹಾಗೂ ತಮ್ಮ ಸಂಬಂಧ ಯಾರಿಗೂ ಬಿಡಿಸಿ ಹೇಳಬೇಕಾಗಿಲ್ಲ. ಶಿವಳ್ಳಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದು ತಾವು. ಹೀಗಾಗಿ ತಾವು ಚುನಾವಣೆ ಉಸ್ತುವಾರಿ ವಹಿಸಿಕೊಂಡರೆ ತಪ್ಪೇನು ಎಂದು ಪರೋಕ್ಷವಾಗಿ ಜಾರಕಿಹೊಳಿ ಕುಟುಂಬಕ್ಕೆ ಸಂದೇಶ ನೀಡಿದ್ದಾರೆ.

ತಮ್ಮ ಕುಟುಂಬ ಸದಸ್ಯರನ್ನು ಕರೆದುಕೊಂಡು ಎಲ್ಲಾದರೂ ಪ್ರವಾಸ ಹೋಗುವುದಕ್ಕೆ ಯೋಜನೆ ಹಾಕಿಕೊಂಡಿದ್ದೆ. ಆದರೆ ಲೋಕಸಭಾ ಚುನಾವಣೆ ಹಾಗೂ ಪಕ್ಷದ ಕೆಲಸದಿಂದಾಗಿ ಹೊರಗಡೆ ಹೋಗಲು ಸಾಧ್ಯವಾಗುತ್ತಿಲ್ಲ. ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ಚುನಾವಣಾ ಸಮೀಕ್ಷಾ ವರದಿಗಳನ್ನು ನೋಡಿ ನೋಡಿ ತಮ್ಮ ಕೂದಲು ಬೆಳ್ಳಗಾಗುತ್ತಿದೆ. ಜನರು ಪ್ರೀತಿ ಇದ್ದರೆ ಮಾತ್ರ ನೆನಪಿಸಿಕೊಳ್ಳುತ್ತಾರೆ. ತಮಗೆ ಯಾರೂ ಶತ್ರುಗಳಿಲ್ಲ ಎಂದು ಪರೋಕ್ಷವಾಗಿ ವಿರೋಧಿಗಳ ಕಾಲೆಳೆದರು.

ಶಿವಮೊಗ್ಗ ಚುನಾವಣೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಒಂದು ಭವಿಷ್ಯ ನುಡಿಯುತ್ತಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮಗ ಬಿ.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ಸೋಲುತ್ತಾರೆ. ಮಧು ಬಂಗಾರಪ್ಪ ಭಾರೀ ಅಂತರದಿಂದ ಗೆಲುವ ದಾಖಲಿಸಲಿದ್ದಾರೆ ಎಂದು ಬಿಜೆಪಿ ನಾಯಕರ ಗೆಲುವಿನ ಲೆಕ್ಕಾಚಾರಕ್ಕೆ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿದರು.

ಬಿಡಿಎ ಅಧ್ಯಕ್ಷ ಎಸ್.ಟಿ ಸೋಮಶೇಖರ್ ಕರೆದಿರುವ ಶಾಸಕರ ಸಭೆಯ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರು ಸಭೆ ಸೇರಿವುದರಲ್ಲಿ ತಪ್ಪೇನಿದೆ. ಬೇರೆ ಪಕ್ಷಗಳಲ್ಲೂ ಶಾಸಕರು ಅಧಿಕೃತವಾಗಿ ಹಾಗೂ ಅನಧಿಕೃತವಾಗಿ ಸಭೆ ಸೇರುತ್ತಾರೆ. ಅವರ ಸಮಸ್ಯೆಗಳನ್ನು ಚರ್ಚಿಸುತ್ತಾರೆ ಅದು ತಪ್ಪಲ್ಲ. ಮುಖ್ಯಮಂತ್ರಿ ಅವರ ಜೊತೆ ಬಿಡಿಎ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಉತ್ತಮ ಒಡನಾಟ ಹೊಂದಿದ್ದಾರೆ. ಅವರ ಬಾಂಧವ್ಯದ ಬಗ್ಗೆ ನಿಮಗೆ ಮಾಹಿತಿ ಇಲ್ಲ ಎಂದರು.

Comments are closed.