ಬೆಂಗಳೂರು: ಈಗಲ್ಟನ್ ರೆಸಾರ್ಟ್ನಲ್ಲಿ ಆನಂದ್ ಸಿಂಗ್ ಮೇಲೆ ಹಲ್ಲೆ ಎಸಗಿದ ಆರೋಪ ಎದುರಿಸುತ್ತಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರು ಇವತ್ತು (ಗುರುವಾರ) ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಹೈಕೋರ್ಟ್ನಿಂದ ನಿನ್ನೆ ಷರತ್ತುಬದ್ಧ ಜಾಮೀನು ಪಡೆದಿದ್ದ ಗಣೇಶ್ ಅವರನ್ನು ಅನಾರೋಗ್ಯದ ಕಾರಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವತ್ತು ಸಂಜೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ವೇಳೆ, ಗಣೇಶ್ ಅವರನ್ನು ನೋಡಲು ಕಂಪ್ಲಿ ಕ್ಷೇತ್ರದಿಂದ ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು…
ನನ್ನ ಕ್ಷೇತ್ರದ ಜನರ ಸೇವೆ ಮಾಡಲು ಆ ದೇವರು ನನಗೆ ಶಕ್ತಿ ಕೊಡಲಿ… – ಇದು ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಜೆಎನ್ ಗಣೇಶ್ ಅವರು ಆಡಿದ ಮೊದಲ ಮಾತಾಗಿತ್ತು. ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಅವರು, ತನಗೀಗ ಆರೋಗ್ಯ ಸ್ಥಿತಿ ಸರಿ ಇಲ್ಲವಾಗಿದ್ದು, ಮುಂದಿನ ದಿನಗಳಲ್ಲಿ ವಿವರವಾಗಿ ಮಾತನಾಡುವುದಾಗಿ ಹೇಳಿದ್ದಾರೆ.
ಎರಡೂವರೆ ತಿಂಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂಬ ನೋವಿದೆ. ಇನ್ನೂ 4 ವರ್ಷ ಸಮಯವಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಆ ದೇವರು ತನಗೆ ಶಕ್ತಿ ನೀಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದೂ ಜೆ.ಎನ್. ಗಣೇಶ್ ತಿಳಿಸಿದ್ದಾರೆ.
ಹಲ್ಲೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಆ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಅದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ. ತನಗೆ ಆನಂದ್ ಸಿಂಗ್ ಬಗ್ಗೆ ಯಾವುದೇ ರೀತಿಯ ಮುನಿಸು ಇಲ್ಲ ಎಂದು ಮಾತ್ರ ಸ್ಪಷ್ಟನೆ ನೀಡಿದ್ಧಾರೆ.
ಆಸ್ಪತ್ರೆ ಮತ್ತು ಜೈಲಿನಿಂದ ಮುಕ್ತಿ ಪಡೆದಿರುವ ಜೆ.ಎನ್. ಗಣೇಶ್, ಈಗ ನೇರವಾಗಿ ಹೊಸಪೇಟೆಯಲ್ಲಿರುವ ತಮ್ಮ ಮನೆ ದೇವರು ಹುಲಿಯಮ್ಮಳ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲಿದ್ದಾರೆ. ಆ ನಂತರ ಅವರು ತಮ್ಮಿಷ್ಟದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಮುಂದುವರಿಸುವ ಸಾಧ್ಯತೆ ಇದೆ.